ದೆಹಲಿ ನಿಯಂತ್ರಣ ಮಸೂದೆ: ಕೇಂದ್ರಕ್ಕೆ ಜಗನ್‌ ಪಕ್ಷದ ಬೆಂಬಲ

ರಾಷ್ಟ್ರ ರಾಜಧಾನಿ ದೆಹಲಿಯ ಅಧಿಕಾರಿಗಳ ವರ್ಗಾವಣೆ ಹಾಗೂ ನೇಮಕಾತಿ ಅಧಿಕಾರವನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಮಸೂದೆ (ದಿಲ್ಲಿ ಸುಗ್ರೀವಾಜ್ಞೆ ಮಸೂದೆ) ಮಂಡಿಸಲು ಸಿದ್ಧವಾಗುತ್ತಿರುವ ಕೇಂದ್ರ ಸರ್ಕಾರಕ್ಕೆ ಈಗ ಭರ್ಜರಿ ಬೆಂಬಲ ದೊರಕಿದೆ.

Delhi Ordinance Bill YSR Jagans party supports Central govt on akb

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಅಧಿಕಾರಿಗಳ ವರ್ಗಾವಣೆ ಹಾಗೂ ನೇಮಕಾತಿ ಅಧಿಕಾರವನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಮಸೂದೆ (ದಿಲ್ಲಿ ಸುಗ್ರೀವಾಜ್ಞೆ ಮಸೂದೆ) ಮಂಡಿಸಲು ಸಿದ್ಧವಾಗುತ್ತಿರುವ ಕೇಂದ್ರ ಸರ್ಕಾರಕ್ಕೆ ಈಗ ಭರ್ಜರಿ ಬೆಂಬಲ ದೊರಕಿದೆ. ಆಂಧ್ರ ಮುಖ್ಯಮಂತ್ರಿ ಜಗನ್ಮೋಹನರೆಡ್ಡಿ ನೇತೃತ್ವದ ವೈಎಸ್ಸಾರ್‌ ಕಾಂಗ್ರೆಸ್‌, ವಿಧೇಯಕ ಪರ ಬೆಂಬಲ ಘೋಷಣೆ ಮಾಡಿದೆ.

ಇದರಿಂದಾಗಿ ಬಹುಮತದ ಕೊರತೆ ಎದುರಿಸುತ್ತಿರುವ ರಾಜ್ಯಸಭೆಯಲ್ಲೂ ಕೇಂದ್ರ ಸರ್ಕಾರ ಈ ವಿಧೇಯಕವನ್ನು ಸುಲಭವಾಗಿ ಅಂಗೀಕರಿಸಿಕೊಳ್ಳಲು ಹಾದಿ ಸುಗಮವಾಗಿದೆ. ತನ್ಮೂಲಕ, ವಿಧೇಯಕ ಮಣಿಸಲು ದೇಶದ ಹಲವು ರಾಜ್ಯಗಳಿಗೆ ತೆರಳಿ ರಾಜಕೀಯ ಪಕ್ಷಗಳ ಬೆಂಬಲ ಗಳಿಸಲು ಯತ್ನಿಸಿದ್ದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರಿಗೆ ತೀವ್ರ ಹಿನ್ನಡೆಯಾಗಿದೆ.

ರಾಜ್ಯಸಭೆಯಲ್ಲಿ ಸದ್ಯ 238 ಸದಸ್ಯರು ಇದ್ದು, ಬಹುಮತಕ್ಕೆ 120 ಸ್ಥಾನಗಳು ಬೇಕಾಗಿವೆ. ಎನ್‌ಡಿಎ 105 ಸದಸ್ಯರನ್ನು ಹೊಂದಿದೆ. 5 ನಾಮನಿರ್ದೇಶಿತ ಹಾಗೂ ಇಬ್ಬರು ಪಕ್ಷೇತರ ಸದಸ್ಯರ ಬೆಂಬಲ ಸಿಗುವ ಕಾರಣ ಸರ್ಕಾರದ ಬಲ 112ರಷ್ಟಿತ್ತು. ಬಹುಮತಕ್ಕೆ 8 ಸ್ಥಾನಗಳ ಕೊರತೆ ಇತ್ತು. ಆದರೆ 9 ರಾಜ್ಯಸಭಾ ಸದಸ್ಯರನ್ನು ಹೊಂದಿರುವ ಜಗನ್‌ ಪಕ್ಷ ಬೆಂಬಲ ನೀಡಿರುವುದರಿಂದ ವಿಧೇಯಕ ಸುಲಭವಾಗಿ ಅಂಗೀಕಾರವಾಗಲಿದೆ. ಸರ್ಕಾರದ ಪರವಾಗಿ ಮತ ಚಲಾವಣೆ ಮಾಡುತ್ತೇವೆ ಎಂದು ವೈಎಸ್ಸಾರ್‌ ಕಾಂಗ್ರೆಸ್‌ ನಾಯಕ ವಿ. ವಿಜಯಸಾಯಿ ರೆಡ್ಡಿ ತಿಳಿಸಿದ್ದಾರೆ. ವೈಎಸ್ಸಾರ್‌ ಕಾಂಗ್ರೆಸ್‌ 22 ಲೋಕಸಭಾ ಸದಸ್ಯರನ್ನು ಹೊಂದಿದ್ದು, ಮಣಿಪುರ ವಿಚಾರದಲ್ಲಿ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸುವುದಾಗಿಯೂ ಹೇಳಿದೆ.

ಅಧಿಕಾರಿಗಳ ನೇಮಕ ಹಾಗೂ ವರ್ಗಾವಣೆ ಅಧಿಕಾರವನ್ನು ದೆಹಲಿಯ ಚುನಾಯಿತ ಸರ್ಕಾರಕ್ಕೆ ನೀಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಇದರ ವಿರುದ್ಧ ಕೇಂದ್ರ ಸರ್ಕಾರ (central Govt) ಸುಗ್ರೀವಾಜ್ಞೆ ಹೊರಡಿಸಿತ್ತು. ಇದೀಗ ವಿಧೇಯಕ ಮಂಡನೆ ಮಾಡಲು ಸಜ್ಜಾಗಿದೆ. ಲೋಕಸಭೆಯಲ್ಲಿ ಭರ್ಜರಿ ಬಹುಮತ ಹೊಂದಿರುವ ಬಿಜೆಪಿಗೆ ಅಲ್ಲಿ ಅಂಗೀಕಾರದ ಸಮಸ್ಯೆ ಇರಲಿಲ್ಲ. ಆದರೆ ರಾಜ್ಯಸಭೆಯದ್ದೇ ಚಿಂತೆಯಾಗಿತ್ತು. ಈ ನಡುವೆ, ಕೇಜ್ರಿವಾಲ್‌ ಅವರು ಹಲವು ಪ್ರತಿಪಕ್ಷಗಳ ಬೆಂಬಲವನ್ನು ಪಡೆಯುವಲ್ಲಿ ಸಫಲರಾಗಿದ್ದರು.
 

Latest Videos
Follow Us:
Download App:
  • android
  • ios