ಆಮ್ ಆದ್ಮಿ ಪಕ್ಷದ ಭ್ರಷ್ಟಾಚಾರಕ್ಕೆ ‘ಬೇಸತ್ತು’ ದೆಹಲಿ ಮಂತ್ರಿ ರಾಜೀನಾಮೆ
ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪ್ರಕರಣದಲ್ಲಿ ಜೈಲಿಗೆ ಹೋದರೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಇಂಥ ಹೊತ್ತಿನಲ್ಲಿ ನಾನು ಸರ್ಕಾರ ಮತ್ತು ಪಕ್ಷದಲ್ಲಿ ಇರಲು ಸಾಧ್ಯವಾಗದು. ಹೀಗಾಗಿ ಸಚಿವ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವ ಎರಡಕ್ಕೂ ರಾಜೀನಾಮೆ ನೀಡಿದ್ದೇನೆ ಎಂದ ರಾಜಕುಮಾರ್ ಆನಂದ್
ನವದೆಹಲಿ(ಏ.11): ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ದೆಹಲಿ ಆಮ್ ಆದ್ಮಿ ಪಕ್ಷದ ಹಲವು ಸಚಿವರು, ನಾಯಕರು ವಿವಿಧ ಹಗರಣಗಳಲ್ಲಿ ಜೈಲು ಪಾಲಾದ ಬೆನ್ನಲ್ಲೇ, ಇದೀಗ ಅವರದ್ದೇ ಸರ್ಕಾರದ ಸಚಿವ ರಾಜ್ ಕುಮಾರ್ ಆನಂದ್ ಸರ್ಕಾರ ಭಾರೀ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಆಪ್ ಸರ್ಕಾರಕ್ಕೆ ಮತ್ತಷ್ಟು ಸಂಕಷ್ಟ ಎದುರಾದಂತಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸಮಾಜ ಕಲ್ಯಾಣ ಖಾತೆ ಸಚಿವ ರಾಜ್ ಕುಮಾರ್, ‘ನಿನ್ನೆಯವರೆಗೂ ನಮ್ಮ ಪಕ್ಷವನ್ನು ಹಗರಣಗಳಲ್ಲಿ ಸಿಲುಕಿಸಲಾಗುತ್ತಿದೆ ಎಂದು ಅಂದುಕೊಂಡಿದ್ದೆ. ಆದರೆ ದೆಹಲಿ ಹೈಕೋರ್ಟ್ ತೀರ್ಪಿನ ಬಳಿಕ ಎಲ್ಲವೂ ಸ್ಪಷ್ಟವಾಗಿದೆ. ನಮ್ಮ ಕಡೆಯಲ್ಲೇ ಏನೋ ತಪ್ಪಿದೆ ಎಂದು ಅರಿವಾಗಿದೆ. ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪ್ರಕರಣದಲ್ಲಿ ಜೈಲಿಗೆ ಹೋದರೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಇಂಥ ಹೊತ್ತಿನಲ್ಲಿ ನಾನು ಸರ್ಕಾರ ಮತ್ತು ಪಕ್ಷದಲ್ಲಿ ಇರಲು ಸಾಧ್ಯವಾಗದು. ಹೀಗಾಗಿ ಸಚಿವ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವ ಎರಡಕ್ಕೂ ರಾಜೀನಾಮೆ ನೀಡಿದ್ದೇನೆ’ ಎಂದು ಹೇಳಿದರು.
ಈ ನಡುವೆ ‘ರಾಜ್‌ಕುಮಾರ್ ರಾಜೀನಾಮೆ, ಅರವಿಂದ್ ಕೇಜ್ರಿವಾಲ್ ಬಂಧನದ ಹಿಂದೆ ಆಮ್ ಆದ್ಮಿ ಪಕ್ಷವನ್ನು ಮುಗಿಸುವ ಹುನ್ನಾರವಿದೆ ಎಂಬ ನಮ್ಮ ವಾದಕ್ಕೆ ಇನ್ನಷ್ಟು ಬಲತುಂಬಿದೆ. ಇ.ಡಿ., ಸಿಬಿಐ ಬಳಸಿಕೊಂಡು ನಮ್ಮ ಪಕ್ಷವನ್ನು ಒಡೆಯುವ ಯತ್ನವನ್ನು ಬಿಜೆಪಿ ಮಾಡುತ್ತಿದೆ’ ಎಂದು ಆಪ್‌ನ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಆರೋಪಿಸಿದ್ದಾರೆ.
ಆಪ್‌ನ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ‘ರಾಜ್ ಕುಮಾರ್ ಆನಂದ್ ರಾಜೀನಾಮೆ ಆಪ್‌ನ ಭ್ರಷ್ಟಾಚಾರ ಮತ್ತು ಆ ಪಕ್ಷ ಹೇಗೆ ಮಾಫಿಯಾ ರೀತಿ ಸುಲಿಗೆಯಲ್ಲಿ ತೊಡಗಿಸಿಕೊಂಡಿದೆ ಎಂಬುದನ್ನು ಬಹಿರಂಗಪಡಿಸಿದೆ’ ಎಂದು ಹೇಳಿದೆ.
ಭ್ರಷ್ಟಾಚಾರದಲ್ಲಿ ಆಮ್ ಆದ್ಮಿ ಪಕ್ಷ ಮುಳುಗಿದೆ
ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪ್ರಕರಣದಲ್ಲಿ ಜೈಲಿಗೆ ಹೋದರೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಇಂಥ ಹೊತ್ತಿನಲ್ಲಿ ನಾನು ಸರ್ಕಾರ ಮತ್ತು ಪಕ್ಷದಲ್ಲಿ ಇರಲು ಸಾಧ್ಯವಾಗದು. ಹೀಗಾಗಿ ಸಚಿವ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವ ಎರಡಕ್ಕೂ ರಾಜೀನಾಮೆ ನೀಡಿದ್ದೇನೆ ಎಂದು ರಾಜಕುಮಾರ್ ಆನಂದ್ ತಿಳಿಸಿದ್ದಾರೆ.