15 ಗಂಟೆ 22 ನಿಮಿಷ: 286 ಮೆಟ್ರೋ ಸ್ಟೇಷನ್‌ಗೆ ಭೇಟಿ ನೀಡಿ ದಾಖಲೆ ನಿರ್ಮಿಸಿದ ಯುವಕ
ದೆಹಲಿಯ ಯುವಕನೋರ್ವ 15 ಗಂಟೆ 22 ನಿಮಿಷಗಳಲ್ಲಿ ರಾಜಧಾನಿಯ ಎಲ್ಲಾ ಮೆಟ್ರೋ ಸ್ಟೇಷನ್‌ಗಳಿಗೆ ಭೇಟಿ ನೀಡುವ ಮೂಲಕ ದೆಹಲಿ ಮೆಟ್ರೋ ಉದ್ಯೋಗಿಯೊಬ್ಬರ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ದೆಹಲಿ: ದೆಹಲಿಯ ಯುವಕನೋರ್ವ 15 ಗಂಟೆ 22 ನಿಮಿಷಗಳಲ್ಲಿ ರಾಜಧಾನಿಯ ಎಲ್ಲಾ ಮೆಟ್ರೋ ಸ್ಟೇಷನ್‌ಗಳಿಗೆ ಭೇಟಿ ನೀಡುವ ಮೂಲಕ ದೆಹಲಿ ಮೆಟ್ರೋ ಉದ್ಯೋಗಿಯೊಬ್ಬರ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ ಪ್ರಫುಲ್ ಸಿಂಗ್ ಎಂಬ ದೆಹಲಿ ಮೆಟ್ರೋ ಉದ್ಯೋಗಿ 16 ಗಂಟೆ 2 ನಿಮಿಷದಲ್ಲಿ ದೆಹಲಿ ಮೆಟ್ರೋ ಜಾಲದ ಎಲ್ಲಾ ಸ್ಟೇಷನ್‌ಗಳಿಗೆ ಭೇಟಿ ನೀಡುವ ಮೂಲಕ ಗಿನ್ನೆಸ್ ವಿಶ್ವದಾಖಲೆ ಬರೆದಿದ್ದರು. ಈಗ ದೆಹಲಿಯ ಶಶಾಂಕ್ ಮನು ಎಂಬ ಯುವಕ 15 ಗಂಟೆ 22 ನಿಮಿಷ 49 ಸೆಕೆಂಡ್‌ನಲ್ಲಿ ದೆಹಲಿ ಮೆಟ್ರೋ ಜಾಲದ 286 ಸ್ಟೇಷನ್‌ಗಳಿಗೆ ಭೇಟಿ ನೀಡುವ ಮೂಲಕ ಆ ದಾಖಲೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ದೆಹಲಿ ಮೂಲದ ಪ್ರೀಲ್ಯಾನ್ಸ್ ಸಂಶೋಧಕರಾಗಿ ಈ ಶಶಾಂಕ್ ಮನು ಕೆಲಸ ಮಾಡುತ್ತಿದ್ದಾರೆ.
ಮೆಟ್ರೋ ಪ್ರಯಾಣವನ್ನು ಎಂಜಾಯ್ ಮಾಡುವ ಶಶಾಂಕ್ ಅವರು 2021ರ ಏಪ್ರಿಲ್‌ನಲ್ಲಿಯೇ ದೆಹಲಿಯ ಎಲ್ಲಾ 286 ಮೆಟ್ರೋ ನಿಲ್ದಾಣಕ್ಕೆ ಒಂದೇ ದಿನದಲ್ಲಿ ಭೇಟಿ ನೀಡಿ ದಾಖಲೆ ನಿರ್ಮಿಸುವ ಗುರಿ ಹೊಂದಿದ್ದರು. ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಸಲುವಾಗಿ ಅವರು ಬೆಳಗ್ಗೆ 5 ಗಂಟೆಗೆ ನೀಲಿ ಮಾರ್ಗದಲ್ಲಿ ಪ್ರಯಾಣ ಆರಂಭಿಸಿ ರಾತ್ರಿ 8. 30ಕ್ಕೆಲ್ಲಾ ಎಲ್ಲಾ 286 ಮೆಟ್ರೋ ಸ್ಟೇಷನ್‌ಗಳಿಗೆ ಭೇಟಿ ನೀಡಿ ಹಸಿರು ಮಾರ್ಗದಲ್ಲಿರುವ ಬ್ರಿಗೇಡಿಯರ್ ಹೋಶಿಯಾರ್ ಸಿಂಗ್ ನಿಲ್ದಾಣದಲ್ಲಿ ತಮ್ಮ ಪ್ರಯಾಣ ಕೊನೆಗೊಳಿಸಿದರು. ಆದರೆ ಆ ಸಂದರ್ಭದಲ್ಲಾದ ತಪ್ಪು ತಿಳುವಳಿಕೆಯಿಂದಾಗಿ ಈ ಸಾಧನೆಯ ಗರಿಮೆ ಡಿಎಂಆರ್‌ಸಿ ಉದ್ಯೋಗಿಯಾಗಿದ್ದ ಪ್ರಫುಲ್ ಸಿಂಗ್ ಅವರ ಪಾಲಾಗಿತ್ತು.
ಗಿನ್ನೆಸ್ ಪುಟ ಸೇರಿದ ದೆಹಲಿ ಮೆಟ್ರೋ ಉದ್ಯೋಗಿ
ಹೀಗಾಗಿ ಶಶಾಂಕ್ ಮತ್ತೆ ಈ ಸಾಧನೆಗೆ ಪ್ರಯತ್ನಿಸಿದ್ದು, 2021ರ ಆಗಸ್ಟ್‌ನಲ್ಲಿ. ಪ್ರಫುಲ್ ಸಿಂಗ್ ಸಾಧನೆ ಮುರಿಯಲು ಪಣತೊಟ್ಟ ಶಶಾಂಕ್ ಮನು, ದೆಹಲಿ ಮೆಟ್ರೋದ ಒಂದು ದಿನದ ಪ್ರವಾಸಿ ಕಾರ್ಡ್ ಬಳಸಿಕೊಂಡು ಇಡೀ ಮೆಟ್ರೋ ಮಾರ್ಗವನ್ನು 16 ಗಂಟೆ 2 ನಿಮಿಷದಲ್ಲಿ ಪೂರ್ಣಗೊಳಿಸಿದರು. ನಂತರ ಅದೇ ವರ್ಷ 15 ಗಂಟೆ 22 ನಿಮಿಷ 49 ಸೆಕೆಂಡ್‌ಗಳಲ್ಲಿ ಈ ಸಾಧನೆ ಮಾಡಿದ್ದು, ಈ ಸಾಧನೆಯ ಓಟಕ್ಕೆ ಅವರು ಬಳಸಿದ್ದು, ದೆಹಲಿ ಮೆಟ್ರೋದ ಟೂರಿಸ್ಟ್ ಕಾರ್ಡ್. ಅದು ಒಂದೇ ದಿನದಲ್ಲಿ ಮೆಟ್ರೋದಲ್ಲಿ ಎಷ್ಟು ಸಾರಿ ಬೇಕಾದರೂ ಪ್ರಯಾಣಿಸಲು ಅವಕಾಶ ನೀಡುತ್ತದೆ.
ಆದರೆ ಆ ಸಂದರ್ಭದಲ್ಲಾದ ಎಡವಟ್ಟಿನಿಂದಾಗಿ ಶಶಾಂಕ್ ಮನು ಅವರು ಈ ದಾಖಲೆಯ ಪ್ರಮಾಣ ಪತ್ರ ಪಡೆಯಲು ಏಪ್ರಿಲ್ 2023ರರವರೆಗೆ ಕಾಯಬೇಕಾಯ್ತು.ಕೋವಿಡ್ ಸಂದರ್ಭದಲ್ಲಿ ಮನು ದೇಶದ ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಭೇಟಿ ನೀಡುವ ಬಗ್ಗೆ ಯೋಚನೆ ಮಾಡಿದ್ದರು ಎಂದು ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಲಾಕ್‌ಡೌನ್ ನಂತರ ಮೆಟ್ರೋ ಸೇವೆ ಮರು ಆರಂಭಿಸಿದಾಗ ಅವರು ಈ ಸಾಧನೆ ಮಾಡಲು ಮುಂದಾದರು. ಅಲ್ಲದೇ ತಮ್ಮ ಈ ಸಾಧನೆಯನ್ನು ರೆಕಾರ್ಡ್ ಮಾಡಿಕೊಳ್ಳಲು ಪ್ರತಿ ಮೆಟ್ರೋ ಸ್ಟೇಷನ್‌ನಲ್ಲಿ ಅವರು ಫೋಟೋ ತೆಗೆದುಕೊಳ್ಳುತ್ತಿದ್ದರು. ಅಲ್ಲದೇ ತಮ್ಮ ಜೊತೆ ಪ್ರಯಾಣಿಸಿದ್ದವರ ಬಳಿಯೂ ಅವರು ಸ್ವತಂತ್ರ ಸಾಕ್ಷಿಗಳು ಎಂದು ರಶೀದಿಗೆ ಸಹಿ ಹಾಕಿಸಿಕೊಂಡಿದ್ದರು.
ಮೆಟ್ರೋ ಬಾಗಿಲು ಕ್ಲೋಸ್ ಆಗಲು ಬಿಡದೇ ಕಿಡಿಗೇಡಿತನ : ಯುವಕರ ವೀಡಿಯೋ ವೈರಲ್
ಅವರು ತಮ್ಮ ದಾಖಲೆಯನ್ನು ಪರಿಶೀಲಿಸುವುದಕ್ಕಾಗಿ ಅನ್‌ಕಟ್ ವೀಡಿಯೋವನ್ನು ಕೂಡ ಮಾಡಿದ್ದಾರೆ. ತನ್ನ ಪ್ರಯಾಣದ ಉದ್ದಕ್ಕೂ ನಿರಂತರ ವೀಡಿಯೋ ರೆಕಾರ್ಡ್ ಮಾಡಲಾಗಿದ್ದು, ಇದು ಪ್ರತಿ ನಿಲ್ದಾಣದಲ್ಲಿ ಮೆಟ್ರೋ ರೈಲ್ವೆ ಕೋಚ್‌ನ ಬಾಗಿಲು ಮುಚ್ಚುವ ಹಾಗೂ ತೆಗೆಯುವ ಸಮಯವನ್ನು ದಾಖಲಿಸಿತ್ತು. ಒಟ್ಟಿನಲ್ಲಿ ವಿವಾದದ ಕಾರಣಕ್ಕೆ ಸದಾ ಸುದ್ದಿಯಾಗುವ ದೆಹಲಿ ಮೆಟ್ರೋ ಶಶಾಂಕ್ ಮನು ಅವರ ಸಾಧನೆಯಿಂದ ಒಳ್ಳೆಯ ಕಾರಣಕ್ಕೆ ಸುದ್ದಿಯಾಗಿದೆ.