ದೆಹಲಿ ಅಬಕಾರಿ ಹಗರಣ ಆಪ್ ಸರ್ಕಾರದ ಸಂಕಷ್ಟ ಹೆಚ್ಚಿಸುತ್ತಿದೆ. ಜೈಲು ಸೇರಿರುವ ಆಪ್ ನಾಯಕರಿಗೆ ಕೋರ್ಟ್ ಜಾಮೀನು ನಿರಾಕರಿಸುತ್ತಿದೆ. ಇದೀಗ ಆಪ್ ಸಂಸದ ಸಂಜಯ್ ಸಿಂಗ್ ನ್ಯಾಯಾಂಗ ಬಂಧವನ್ನು ಕೋರ್ಟ್ ವಿಸ್ತರಿಸಿದೆ.
ನವದೆಹಲಿ(ನ.24) ದೆಹಲಿಯ ಆಪ್ ಸರ್ಕಾರಕ್ಕೆ ಸಾಲು ಸಾಲು ಸವಾಲುಗಳು ಎದುರಾಗಿದೆ. ಆಡಳಿ, ದೆಹಲಿ ಮಾಲಿನ್ಯ, ಸುಪ್ರೀಂ ಕೋರ್ಟ್ ತಪರಾಕಿಗಳು ಒಂದಡೆಯಾದರೆ, ಹಗರಣದಲ್ಲಿ ಸಿಲುಕಿ ಒಬ್ಬೊಬ್ಬ ನಾಯಕರು ಜೈಲು ಸೇರುತ್ತಿದ್ದಾರೆ. ಇತ್ತ ಜೈಲು ಸೇರಿದ ನಾಯಕರಿಗೆ ಜಾಮೀನು ಕೂಡ ಸಿಗುತ್ತಿಲ್ಲ. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲಿನಲ್ಲೇ ಕಳೆಯುವಂತಾಗಿದೆ. ಇದೀಗ ಆಪ್ ಸಂಸದ ಸಂಜಯ್ ಸಿಂಗ್ ಕೂಡ ಹಿನ್ನಡೆ ಅನುಭವಿಸಿದ್ದಾರೆ. ಸಂಜಯ್ ಸಿಂಗ್ ಜಾಮೀನು ಅರ್ಜಿ ತರಿಸ್ಕರಿಸಿರುವ ಕೋರ್ಟ್, ಡಿಸೆಂಬರ್ 4ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದೆ.
ಅಬಕಾರಿ ಹಗರಣದಲ್ಲಿ ಆಪ್ ಸಂಸದ ಸಂಜಯ್ ಸಿಂಗ್ ಬಂಧನವಾಗಿದೆ. ಅಕ್ರಮ ಹಣ ವರ್ಗಾವಣೆ ಆರೋಪಡಿ ಜೈಲು ಸೇರಿರುವ ಸಂಜಯ್ ಸಿಂಗ್‌ಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ನ್ಯಾಯಾಂಗ ಬಂಧನ ವಿಸ್ತರಿಸಿದೆ. ಸಂಜಯ್ ಸಿಂಗ್ ಬಂಧನ ವಿರದ್ಧ ಆಪ್ ನಾಯಕರು, ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ಸಚಿವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರುತ್ತಲೇ ಇದ್ದಾರೆ. ಇದು ರಾಜಕೀಯ ಪ್ರೇರಿತ ಬಂಧನ ಅನ್ನೋ ಆರೋಪವನ್ನು ಮಾಡಿದ್ದಾರೆ. ಆದರೆ ಈ ಎಲ್ಲಾ ವಾದಗಳಿಗೆ ಕೋರ್ಟ್ ಮನ್ನಣೆ ನೀಡಿಲ್ಲ.
ದೆಹಲಿ ಮಾಲಿನ್ಯಕ್ಕೆ ಸುಪ್ರೀಂ ಕೋರ್ಟ್ ಕಳವಳ, ಆಪ್ ಸರ್ಕಾರಕ್ಕೆ ಲಾಸ್ಟ್ ವಾರ್ನಿಂಗ್!
ಸಂಸದ ಸಂಜಯ್ ಸಿಂಗ್ ವಿರುದ್ಧ ದಾಖಲಾದ ಪ್ರಕರಣಗಳೆಲ್ಲ ಸುಳ್ಳು. ಕೇಂದ್ರ ಸರ್ಕಾರ ವಿಪಕ್ಷ ನಾಯಕರಲ್ಲಿ ಭಯವನ್ನು ಹುಟ್ಟಿಸಲು ಸುಳ್ಳು ದಾವೆಗಳನ್ನು ಹೂಡಿ ಬಂಧಿಸುತ್ತಿದೆ. ಜೊತೆಗೆ ದೇಶದ ಉದ್ಯಮಿಗಳನ್ನು ಬಂಧಿಸುತ್ತಿದೆ. ದೇಶದಲ್ಲಿ ಭಯದ ವಾತಾವರಣ ತಲೆಎತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು.
2021-22ರಲ್ಲಿ ದೆಹಲಿ ಸರ್ಕಾರ ಅಬಕಾರಿ ಲೈಸೆನ್ಸ್‌ಗಳನ್ನು ನೀಡಿತ್ತು. ಹಣ ಪಡೆದು ತಮಗೆ ಬೇಕಾದವರಿಗೆ ಅದನ್ನು ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಬಳಿಕ ಲೈಸೆನ್ಸ್ ಹಂಚಿಕೆಯನ್ನೇ ರದ್ದುಗೊಳಿಸಲಾಗಿತ್ತು. ಈ ಪ್ರಕರಣವನ್ನು ದೆಹಲಿ ಉಪರಾಜ್ಯಪಾಲರು ಸಿಬಿಐ ತನಿಖೆಗೆ ವಹಿಸಿದ್ದರು. ಬಳಿಕ ಇ.ಡಿ. ಕೂಡ ಪ್ರವೇಶಿಸಿತ್ತು. ಈಗಾಗಲೇ, ಈ ಪ್ರಕರಣದಲ್ಲಿ ಕೇಜ್ರಿವಾಲ್ ಅವರ ಸಂಪುಟದ ಮಾಜಿ ಸಹೋದ್ಯೋಗಿಗಳಾದ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಜೈಲಿನಲ್ಲಿದ್ದಾರೆ.
ಕೇಜ್ರಿವಾಲ್ ಬಂಧನವಾದರೆ 'ವರ್ಕ್ ಫ್ರಂ ಜೈಲ್' : ಜೈಲಲ್ಲೇ ಸಂಪುಟ ಸಭೆ, ಅಲ್ಲಿಂದಲೇ ಕೆಲಸ: ಆಪ್ ನಿರ್ಣಯ
