ದೆಹಲಿ ಅಬಕಾರಿ ಹಗರಣ ಆಪ್ ನಾಯಕ ಮನೀಶ್ ಸಿಸೋಡಿಯಾ ಸಂಕಷ್ಟ ಹೆಚ್ಚಿಸಿದೆ. ಜೈಲು ಹಕ್ಕಿಯಾಗಿರುವ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ಮತ್ತೆ ತಿರಸ್ಕೃತಗೊಂಡಿದೆ. ಪ್ರಕರಣದ ಗಂಭೀರತೆ ಅರಿತ ಕೋರ್ಟ್, ಸಿಸೋಡಿಯಾಗೆ ಜಾಮೀನು ನೀಡಲು ನಿರಾಕರಿಸಿದೆ.
ನವದೆಹಲಿ(ಏ.28): ದೆಹಲಿ ಅಬಕಾರಿ ನೀತಿ ಪ್ರಕರಣ ಆಮ್ ಆದ್ಮಿ ಪಾರ್ಟಿಗೆ ತೀವ್ರ ತಲೆನೋವಾಗಿದೆ. ಈ ಹಗರಣದಲ್ಲಿ ಸಿಲುಕಿ ಜೈಲು ಸೇರಿರುವ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ಮತ್ತೆ ತಿರಸ್ಕೃತಗೊಂಡಿದೆ. ಅಕ್ರಣ ಹಣವರ್ಗಾವಣೆ ಆರೋಪ ಎದುರಿಸುತ್ತಿರುವ ಮನೀಶ್ ಸಿಸೋಡಿಯಾಗೆ ಜಾಮೀನು ನೀಡಲು ಸಿಬಿಐ ವಿಶೇಷ ಕೋರ್ಟ್ ನಿರಾಕರಿಸಿದೆ. ಪ್ರಕರಣದ ತನಿಖೆ ಪ್ರಮುಖ ಘಟ್ಟದಲ್ಲಿದೆ. ಹೀಗಾಗಿ ಈ ಹಂತದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸಿಸೋಡಿಯಾ ಅರ್ಜಿ ತಿರಸ್ಕರಿಸಿದೆ.
ಈ ಪ್ರಕರಣ ಸಂಬಂಧ ದಹಲಿಯ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾರನ್ನು ಫೆಬ್ರವರಿ 26 ರಂದು ಸಿಬಿಐ ಪೊಲೀಸರು ಬಂಧಿಸಿದ್ದರು. ಕಳೆದ 2 ತಿಂಗಳಿನಿಂದ ಜೈಲುವಾಸ ಅನುಭವಿಸುತ್ತಿರುವ ಸಿಸೋಡಿಯಾ ಹಲವು ಬಾರಿ ಜಾಮೀನಿಗಾಗಿ ಪ್ರಯತ್ನಿಸಿದ್ದರೆ. ಆದರೆ ಪ್ರತಿ ಬಾರಿ ಸಿಸೋಡಿಯಾ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
ಕೇಜ್ರಿವಾಲ್ ಪರ ವಕಾಲತ್ತು ವಹಿಸಬೇಡಿ; ವಕೀಲರಲ್ಲಿ ಕಾಂಗ್ರೆಸ್ ನಾಯಕ ಮಾಕೇನ್ ಮನವಿ!
ಇತ್ತೀಚೆಗೆ ಸಿಸೋಡಿಯಾ ತಮ್ಮ ವಿರುದ್ಧದ ಆರೋಪಕ್ಕೆ ಸಾಕ್ಷ್ಯವಿಲ್ಲ. ಅಲ್ಲದೆ, ಪತ್ನಿಗೆ ಅನಾರೋಗ್ಯ ಇದ್ದು, ಜಾಮೀನು ನೀಡಬೇಕು ಎಂದು ಕೋರಿದ್ದರು.ಆದರೆ ಸಿಬಿಐ ವಿಶೇಷ ಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು.
ದೆಹಲಿಯ ಆಮ್‌ಆದ್ಮಿ ಸರ್ಕಾರ ತನ್ನ 2021-22ರ ನೂತನ ಮದ್ಯ ಲೈಸೆನ್ಸ್ ಹಂಚಿಕೆ ನೀತಿಯನ್ನು ಕೆಲ ವ್ಯಕ್ತಿಗಳಿಗೆ ಲಾಭ ಮಾಡಿಕೊಡುವ ರೀತಿಯಲ್ಲಿ ರೂಪಿಸಿತ್ತು. ಲೈಸೆನ್ಸ್ ಪಡೆದ ಕೆಲವರಿಗೆ ನ್ಯಾಯಸಮ್ಮತವಲ್ಲದ ರೀತಿಯಲ್ಲಿ ನೆರವು ನೀಡಿತ್ತು. ಇದಕ್ಕಾಗಿ ಸರ್ಕಾರದ ಪ್ರಭಾವಿಗಳು ಲಂಚ ಪಡೆದಿದ್ದರು ಎಂಬುದು ಆರೋಪ. ಈ ಬಗ್ಗೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ.
ಸಿಬಿಐ ವಿಚಾರಣೆ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್‌ಗೆ ಬಂಧನ ಭೀತಿ, ತುರ್ತು ಸಭೆ ನಡೆಸಿದ ಆಪ್!
ಇದೇ ಪ್ರಕರಣದಲ್ಲಿ ಸಿಬಿಐ ಆಮ್ ಆದ್ಮಿ ಪಾರ್ಟಿ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನೂ ಸಿಬಿಐ ವಿಚಾರಣೆ ನಡೆಸಿತ್ತು. ಸತತ 9 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತ್ತು. ಪ್ರಕರಣ ಸಂಬಂಧ ದೆಹಲಿಯ ಮಾಜಿ ಉಪಮುಖ್ಯಮಂತ್ರಿ, ಮಾಜಿ ಅಬಕಾರಿ ಸಚಿವ ಮನಿಶ್ ಸಿಸೋಡಿಯಾ, ಗುತ್ತಿಗೆದಾರರು ಜೈಲು ಪಾಲಾಗಿರುವ ನಡುವೆಯೇ ಈ ವಿಚಾರಣೆ ನಡೆಸಲಾಗಿದೆ.
ವಿಚಾರಣೆಗೆ ಹಾಜರಾಗಲು ನೀಡಿದ್ದ ಸೂಚನೆ ಅನ್ವಯ ಬೆಳಗ್ಗೆ 11ರ ವೇಳೆಗೆ ಸಿಬಿಐ ಕಚೇರಿಗೆ ಆಗಮಿಸಿದ ಕೇಜ್ರಿವಾಲ್ ಅವರನ್ನು ರಾತ್ರಿ 8.30ರವರೆಗೂ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್ ‘ನನಗೆ 56 ಪ್ರಶ್ನೆಗಳನ್ನು ಕೇಳಲಾಯಿತು. ಎಲ್ಲದ್ದಕ್ಕೂ ನಾನು ಉತ್ತರಿಸಿದ್ದೇನೆ. ಮೊದಲೇ ಹೇಳಿದಂತೆ ಇದರಲ್ಲಿ ಮುಚ್ಚಿಡುವುದೇನೂ ಇಲ್ಲ. ಆರೋಪಿತ ಮದ್ಯ ಹಗರಣವೇ ಒಂದು ಸುಳ್ಳು, ಕಪೋಲಕಲ್ಪಿತ ಪ್ರಕರಣ. ಕೆಟ್ಟರಾಜಕೀಯಕ್ಕಾಗಿ ಇದನ್ನು ಸೃಷ್ಟಿಸಲಾಗಿದೆ. ನಾವು ಸಾಯುತ್ತವೆಯೇ ಹೊರತೂ ಪ್ರಾಮಾಣಿಕತೆ ಬಿಡುವುದಿಲ್ಲ’ ಎಂದು ಹೇಳಿದರು.
