ಬ್ಲಾಕ್‌ಫಂಗಸ್‌ನಿಂದ ಕಿಡ್ನಿಗೂ ಅಪಾಯ: ದೆಹಲಿಯಲ್ಲಿ ವಿಶ್ವದ ಮೊದಲ ಪ್ರಕರಣ!
* ದೆಹಲಿಯಲ್ಲಿ ವಿಶ್ವದ ಮೊದಲ ಪ್ರಕರಣ
* ಬ್ಲಾಕ್‌ಫಂಗಸ್‌ನಿಂದ ಕಿಡ್ನಿಗೂ ಅಪಾಯ
* ಶಸ್ತ್ರಚಿಕಿತ್ಸೆ ಮೂಲಕ 1 ಕಿಡ್ನಿ, ಶ್ವಾಸಕೋಶದ ಭಾಗ ತೆಗೆದ ವೈದ್ಯರು
ನವದೆಹಲಿ(ಸೆ.21): ಕೊರೋನಾ ಸೋಂಕು ತಗುಲಿದ ವೇಳೆ ಇಲ್ಲವೇ ಚೇತರಿಸಿಕೊಂಡ ಬಳಿಕವೂ ಕಾಣಿಸಿಕೊಳ್ಳುವ ಬ್ಲಾಕ್‌ಫಂಗಸ್ ವೈರಸ್ ಶ್ವಾಸಕೋಶ ಮಾತ್ರವಲ್ಲದೇ, ಮೂತ್ರಜನಕಾಂಗ (ಕಿಡ್ನಿ)ಗೂ ಹಬ್ಬುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ವಿಶ್ವದಲ್ಲೇ ಇಂಥ ಮೊದಲ ಪ್ರಕರಣವೊಂದು ದೆಹಲಿಯ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್, ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯ ಒಂದು ಕಿಡ್ನಿಯನ್ನು ತೆಗೆದು ಹಾಕಲಾಗಿದ್ದು, ಇದೀಗ ಆತ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಬ್ಲಾಕ್‌ಫಂಗಸ್, ಕಣ್ಣು ಹಾಗೂ ಶ್ವಾಸಕೋಶ ಸೇರಿದಂತೆ ಆಸುಪಾಸಿನ ಕೆಲ ಭಾಗಗಳಿಗೆ ಹಬ್ಬುವುದು ಹಿಂದೆಯೇ ತಿಳಿದಿತ್ತು. ಆದರೆ ಕೊರೋನಾದಿಂದ ಚೇತರಿಸಿಕೊಂಡ ಬಳಿಕ ಕಂಡುಬರುವ ನಾನಾ ರೀತಿಯ ಸಮಸ್ಯೆಗಳಿಗೆ ತುತ್ತಾಗಿದ್ದ ಗಾಜಿಯಾಬಾದ್‌ನ ವ್ಯಕ್ತಿಯೊಬ್ಬ ಇತ್ತೀಚೆಗೆ ದೆಹಲಿ ಆಸ್ಪತ್ರೆಗೆ ದಾಖಲಾಗಿದ್ದ. ದಾಖಲಾದ ವೇಳೆ ಆತ ಉಸಿರಾಟದ ಸಮಸ್ಯೆ, ಕಫದಲ್ಲಿ ರಕ್ತ ಮತ್ತು ತೀವ್ರ ಜ್ವರದಿಂದ ಬಳಲುತ್ತಿರುವುದು ಕಂಡುಬಂದಿತ್ತು. ತಪಾಸಣೆ ವೇಳೆ ಆತನ ಶ್ವಾಸಕೋಶದ ಒಂದು ಭಾಗ, ಸೈನಸ್ ಮತ್ತು ಬಲಭಾಗದ ಕಿಡ್ನಿಗೂ ಬ್ಲಾಕ್‌ಫಂಗಸ್ ವೈರಸ್ ಹಬ್ಬಿದ್ದು ಖಚಿತಪಟ್ಟಿತ್ತು.
ಬ್ಲಾಕ್‌ಫಂಗಸ್ ಅನ್ನು ತ್ವರಿತವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡದೇ ಇದ್ದರೆ ಸಾವು ಖಚಿತ. ಜೊತೆಗೆ ಇದು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವೇಗವಾಗಿ ಹರಡುತ್ತದೆ. ಹೀಗಾಗಿ ದೆಹಲಿ ಆಸ್ಪತ್ರೆ ವೈದ್ಯರು ತಡಮಾಡದೇ ರೋಗಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದರು. ಈ ವೇಳೆ ತೀವ್ರ ಹಾನಿಗೆ ಒಳಗಾಗಿದ್ದ ಶ್ವಾಸಕೋಶದ ಒಂದು ಭಾಗ ಮತ್ತು ಬಲಭಾಗದ ಕಿಡ್ನಿಯನ್ನು ತೆಗೆದು ಹಾಕಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ರೋಗಿಗೆ ಆ್ಯಂಟಿ ಫಂಗಲ್ ತೆರಪಿ ನೀಡಲಾಗಿತ್ತು. ಹೀಗೆ 45 ದಿನಗಳ ಬಳಿಕ ಆತ ಸಂಪೂರ್ಣವಾಗಿ ಚೇತರಿಸಿಕೊಂಡು ಮನೆಗೆ ತೆರಳಿದ್ದಾನೆ. ಅವನಿಗೆ ಹೊಸ ಜೀವನ ಸಿಕ್ಕಿದೆ ಎಂದು ವೈದ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಮ್ಯುಕರ್‌ಮೈಕೋಸಿಸ್ ಅಥವಾ ಬ್ಲಾಕ್ ಫಂಗಸ್, ಕೋವಿಡ್‌ನಿಂದಾಗಿ ರೋಗ ನಿರೋಧಕ ಶಕ್ತಿ ಕುಂಠಿತವಾಗಿರುವವರಲ್ಲಿ, ಮಧುಮೇಹ, ಕಿಡ್ನಿ ಸಮಸ್ಯೆ, ಯಕೃತ್ ಅಥವಾ ಹೃದಯದ ಸಮಸ್ಯೆ ಇರುವವರಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಕೋವಿಡ್ ಚಿಕಿತ್ಸೆಯ ವೇಳೆ ಸ್ಟಿರಾಯ್ಡ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿದ ವ್ಯಕ್ತಿಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿತ್ತು.