ನವದೆಹಲಿ(ಜೂ.17): ತೀವ್ರ ಜ್ವರ ಹಾಗೂ ಆಮ್ಲಜನಕ ಪ್ರಮಾಣದಲ್ಲಿ ಹೆಚ್ಚಿನ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಅವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದ್ದು, ವರದಿಯು ನೆಗೆಟಿವ್‌ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗೆಯೇ ‘ಜೈನ್‌ ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ವೈದ್ಯರು ದೃಢಪಡಿಸಿದ್ದಾರೆ.

‘ವಿಪರೀತ ಜ್ವರ ಮತ್ತು ಆಮ್ಲಜನಕ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ರಾಜೀವ್‌ ಗಾಂಧಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದೇನೆ’ ಎಂದು 55 ವರ್ಷದ ಸಚಿವ ಸತ್ಯೇಂದ್ರ ಜೈನ್‌ ಟ್ವೀಟ್‌ ಮಾಡಿದ್ದರು. ಬಳಿಕ ಇವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇತ್ತೀಚೆಗೆ ಮುಖ್ಯಮಂತ್ರಿ ಕೇಜ್ರಿವಾಲ್‌ಗೂ ಜ್ವರ ಕಾಣಿಸಿಕೊಂಡಿತ್ತು. ಅವರಿಗೂ ಕೊರೋನಾ ನೆಗೆಟಿವ್‌ ಬಂದಿತ್ತು.

‘ನಿಮ್ಮ ಆರೋಗ್ಯದ ಬಗ್ಗೆ ಚಿಂತಿಸದೆ ಹಗಲೂ ರಾತ್ರಿ ಜನಸೇವೆ ಮಾಡಿದ್ದೀರಿ. ಈಗ ನಿಮ್ಮ ಬಗ್ಗೆ ಕಾಳಜಿ ವಹಿಸಿ, ಬೇಗ ಗುಣಮುಖರಾಗಿ ಬನ್ನಿ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಟ್ವೀಟ್‌ ಮೂಲಕ ಹಾರೈಸಿದ್ದಾರೆ.