ನವದೆಹಲಿ[ಫೆ.11]: ದೆಹಲಿ ಗಾರ್ಗಿ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿ ಕಾರ್ಯಕ್ರಮದ ವೇಳೆ ಯುವಕರ ಗುಂಪೊಂದು, ಕಾಲೇಜಿನ ಕಾಂಪೌಂಡ್‌ ಹಾರಿಬಂದು ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ನಡೆದಿದೆ.

ಫೆ.6ರಂದೇ ನಡೆದಿದ್ದ ಘಟನೆ ಕುರಿತು ಕಾಲೇಜಿನ ವಿದ್ಯಾರ್ಥಿಗಳು ಇದೀಗ ಸಾಮಾಜಿಕ ಜಾಲತಾಣವೊಂದರಲ್ಲಿ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಕಾಲೇಜಿನ ಕಾಂಪೌಂಡ್‌ ಜಿಗಿದು ಆಗಮಿಸಿದ ನೂರಾರು ಮಂದಿ ದುಷ್ಕರ್ಮಿಗಳು, ಯುವತಿಯರ ಮೈಕೈ ಮುಟ್ಟಿಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ತುಚ್ಛ ಶಬ್ದಗಳಿಂದ ನಿಂದಿಸಿದ್ದಾರೆ.

ರಕ್ಷಣೆಗಾಗಿ ಓಡಿದ ಯುವತಿಯರನ್ನು ಶೌಚಾಲಯದೊಳಗೆ ಕೂಡಿಹಾಕಿದ್ದಾರೆ. ಇದಲ್ಲದೆ, ‘ಕೆಲವು ಪುಂಡರು ಬಹಿರಂಗವಾಗಿ ನಮ್ಮ ಮುಂದೆ ಹಸ್ತಮೈಥುನ ಮಾಡಿಕೊಂಡರು’ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ದೂರು ದಾಖಲಾಗದೇ ಇದ್ದರೂ ಪೊಲೀಸರು ಸ್ವಯಂಪ್ರೇರಿತ ತನಿಖೆ ಆರಂಭಿಸಿದ್ದಾರೆ.

ಇನ್ನು ‘ಇದು ದುರದೃಷ್ಟಕರ ಘಟನೆ. ದುಷ್ಕರ್ಮಿಗಳ ಮೇಲೆ ಕ್ರಮ ಜರುಗಿಸಿ’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆಗ್ರಹಿಸಿದ್ದಾರೆ. ಸಂಸತ್ತಿನಲ್ಲಿ ಕೂಡ ಘಟನೆ ಪ್ರತಿಧ್ವನಿಸಿದೆ. ‘ಹೊರಗಿನವರು ಈ ಕೃತ್ಯ ನಡೆಸಿದ ಶಂಕೆ ಇದೆ. ಕ್ರಮಕ್ಕೆ ಪೊಲೀಸರು ಹಾಗೂ ಕಾಲೇಜು ಆಡಳಿತ ಮಂಡಳಿಗೆ ಸೂಚಿಸಲಾಗಿದೆ’ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಲೋಕಸಭೆಗೆ ತಿಳಿಸಿದ್ದಾರೆ.

ಸ್ಥಳಕ್ಕೆ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಆಗಮಿಸಿ ಅಹವಾಲು ಆಲಿಸಿದ್ದು, ದಿಲ್ಲಿ ಪೊಲೀಸರು ಹಾಗೂ ಗಾರ್ಗಿ ಕಾಲೇಜು ಆಡಳಿತ ಮಂಡಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.