ದಿಲ್ಲಿ ಅಬಕಾರಿ ಹಗರಣ: ಭ್ರಷ್ಟಾಚಾರದಲ್ಲಿ ಆಪ್‌, ಬಿಆರ್‌ಎಸ್‌ ಏಕತೆ: ಮೋದಿ ಚಾಟಿ

ನದಿ ನೀರು ಹಂಚಿಕೆ ಸೇರಿದಂತೆ ಎರಡು ರಾಜ್ಯಗಳ ನಡುವೆ ಒಪ್ಪಂದ ಏರ್ಪಡುವುದು ಸಹಜ. ಆದರೆ ಇದೇ ಮೊದಲ ಬಾರಿಗೆ ಎರಡು ರಾಜಕೀಯ ಪಕ್ಷಗಳು ಮತ್ತು ಎರಡು ರಾಜ್ಯ ಸರ್ಕಾರಗಳು ಭ್ರಷ್ಟಾಚಾರದಲ್ಲೂ ಒಪ್ಪಂದ ಮಾಡಿಕೊಂಡಿವೆ ಎಂದು ದೆಹಲಿ AAP ಮತ್ತು ತೆಲಂಗಾಣದ BRS ಪಕ್ಷದ ವಿರುದ್ಧ ಪ್ರಧಾನಿ ಕಿಡಿಕಾರಿದ್ದಾರೆ.

Delhi Excise Scam: AAP, BRS Unity in corruption Modi whips AAP, BRS in Telangana akb

ವರಂಗಲ್‌ (ತೆಲಂಗಾಣ): ನದಿ ನೀರು ಹಂಚಿಕೆ ಸೇರಿದಂತೆ ಎರಡು ರಾಜ್ಯಗಳ ನಡುವೆ ಒಪ್ಪಂದ ಏರ್ಪಡುವುದು ಸಹಜ. ಆದರೆ ಇದೇ ಮೊದಲ ಬಾರಿಗೆ ಎರಡು ರಾಜಕೀಯ ಪಕ್ಷಗಳು ಮತ್ತು ಎರಡು ರಾಜ್ಯ ಸರ್ಕಾರಗಳು ಭ್ರಷ್ಟಾಚಾರದಲ್ಲೂ ಒಪ್ಪಂದ ಮಾಡಿಕೊಂಡಿವೆ ಎಂದು ದೆಹಲಿಯಲ್ಲಿನ ಆಡಳಿತಾರೂಢ ಆಪ್‌ ಮತ್ತು ತೆಲಂಗಾಣದಲ್ಲಿ ಆಡಳಿತಾರೂಢ, ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ನೇತೃತ್ವದ ಬಿಆರ್‌ಎಸ್‌ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

ಬಿಆರ್‌ಎಸ್‌ ಪಕ್ಷದ ಬಹಿಷ್ಕಾರದ ನಡುವೆಯೇ 6100 ಕೋಟಿ ರು .ಮೊತ್ತದ ವಿವಿಧ ಯೋಜನೆಗಳಿಗೆ ವರಂಗಲ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಿ ಹಾಗೂ ಭದ್ರಕಾಳಿ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ‘ಚಂದ್ರಶೇಖರ್‌ ರಾವ್‌ (Chandrashekar Rao) ಅವರ ಸರ್ಕಾರ ಅತ್ಯಂತ ಭ್ರಷ್ಟವಾಗಿದೆ. ಭ್ರಷ್ಟಾಚಾರ ಇಲ್ಲದೇ ನಡೆದ ಒಂದೇ ಒಂದು ಯೋಜನೆಯೂ ತೆಲಂಗಾಣದಲ್ಲಿ ಜಾರಿಯಾಗಿಲ್ಲ. ಹಿಂದೆಲ್ಲಾ ಅಭಿವೃದ್ಧಿ ವಿಷಯದಲ್ಲಿ ರಾಜ್ಯಗಳ ನಡುವೆ ಒಪ್ಪಂದ ಆಗುತ್ತಿತ್ತು. ಆದರೆ ಇದೀಗ ಭ್ರಷ್ಟಾಚಾರದ ವಿಷಯದಲ್ಲಿ ಎರಡು ರಾಜ್ಯಗಳಲ್ಲಿ ಪಕ್ಷಗಳು ಮತ್ತು ಸರ್ಕಾರಗಳ ನಡುವೆ ಒಪ್ಪಂದ ಆಗಿದೆ’ ಎಂದು ಹೆಸರು ಹೇಳದೆಯೇ ಆಪ್‌ (AAP) ಮತ್ತು ಬಿಆರ್‌ಎಸ್‌ (BRS) ವಿರುದ್ಧ ಕಿಡಿಕಾರಿದರು.

ಇಂದು ಮುಂದುವರೆದ ಕೆಸಿಆರ್ ಪುತ್ರಿ ಕವಿತಾ ವಿಚಾರಣೆ: ಮಾಧ್ಯಮಗಳಿಗೆ ಹಳೆ ಫೋನ್ ಪ್ರದರ್ಶನ

ದೆಹಲಿಯಲ್ಲಿ ನಡೆದ ಅಬಕಾರಿ ಲೈಸೆನ್ಸ್‌ ಹಂಚಿಕೆ ಹಗರಣದಲ್ಲಿ ಸಿಬಿಐ, ಇ.ಡಿ. ಅಧಿಕಾರಿಗಳು ಈಗಾಗಲೇ ದೆಹಲಿ ಸಚಿವ ಮನೀಶ್‌ ಸಿಸೋಡಿಯಾ ಅವರನ್ನು ಬಂಧಿಸಿವೆ. ಮತ್ತೊಂದೆಡೆ ಸಿಎಂ ರಾವ್‌ ಅವರ ಪುತ್ರಿ ಕವಿತಾರನ್ನು ವಿಚಾರಣೆಗೆ ಒಳಪಡಿಸಿದೆ. ಕವಿತಾರ ಹಲವು ಆಪ್ತರನ್ನು ಬಂಧಿಸಿದೆ. ದಿಲ್ಲಿಯಲ್ಲಿ ಮದ್ಯದಂಗಡಿ ಲೈಸೆನ್ಸ್‌ ಗಿಟ್ಟಿಸಲು ತೆಲಂಗಾಣದ ಉದ್ಯಮಿಗಳು ಲಾಬಿ ಮಾಡಿದ್ದು, ಇದರ ಹಿಂದೆ ಕವಿತಾ ಕೈವಾಡ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಪ್‌, ಬಿಆರ್‌ಎಸ್‌ ವಿರುದ್ಧ ಮೋದಿ ಹರಿಹಾಯ್ದಿದ್ದಾರೆ.

ಕಾಂಗ್ರೆಸ್‌ ಲೂಟಿಯ ಅಂಗಡಿ, ಸುಳ್ಳಿನ ಸಂತೆ: ಮೋದಿ

ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೇವೆ ಎಂಬ ರಾಹುಲ್‌ ಗಾಂಧಿ ಹೇಳಿಕೆಗೆ ಟಾಂಗ್‌ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಪಕ್ಷವೆಂದರೆ ಲೂಟಿಯ ಅಂಗಡಿ ಮತ್ತು ಸುಳ್ಳಿನ ಸಂತೆ ಎಂದು ಕಿಡಿಕಾರಿದ್ದಾರೆ. ಸುಮಾರು 24,300 ಕೋಟಿ ರು. ಮೌಲ್ಯದ ಯೋಜನೆಗಳಿಗೆ ಬಿಕನೇರ್‌ನಲ್ಲಿ ಚಾಲನೆ ನೀಡಿ ಬಳಿಕ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜಸ್ಥಾನದ (Rajasthan) ಅಶೋಕ್‌ ಗೆಹ್ಲೋಟ್‌ (Ashok Gehlot)ನೇತೃತ್ವದ ಸರ್ಕಾರ ಮತ್ತು ಕಾಂಗ್ರೆಸ್‌ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ಗೆಹ್ಲೋಟ್‌ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಭ್ರಷ್ಟಾಚಾರ, ಅಪರಾಧ ಮತ್ತು ರಾಜಕೀಯ ತುಷ್ಟೀಕರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಸೋಲಿಸುವುದು ಅನಿವಾರ್ಯವಾಗಿದೆ. ಅಷ್ಟೇ ಅಲ್ಲದೇ ಕಾಂಗ್ರೆಸ್‌ ಈಗಾಗಲೇ ಅಧಿಕಾರ ಬಿಟ್ಟುಹೋಗುವ ಬೈ-ಬೈ ಸ್ಥಿತಿಯಲ್ಲಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ವಿರುದ್ಧ ಜನ ಕ್ರೋಧಗೊಂಡಿದ್ದಾರೆ. ಜನ ಕೋಪಗೊಂಡರೆ ಅಧಿಕಾರದಲ್ಲಿರುವವರನ್ನು ಕೆಳಗಿಳಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಸರ್ಕಾರದ ವತಿಯಿಂದ ಗಣರಾಜ್ಯೋತ್ಸವ ಆಚರಿಸದ ತೆಲಂಗಾಣ, ಹೈಕೋರ್ಟ್‌ ಆದೇಶ ಉಲ್ಲಂಘಿಸಿದ ಕೆಸಿಆರ್‌!

ಜಲಜೀವನ್‌ ಮಿಶನ್‌ (Jaljeevan Mission) ಜಾರಿಗೊಳಿಸುವಲ್ಲಿ ರಾಜಸ್ಥಾನ (Rajasthan) ಮೊದಲ ಸ್ಥಾನದಲ್ಲಿರಬೇಕಿತ್ತು. ಆದರೆ ಚಟುವಟಿಕೆ ಇಲ್ಲದ ರಾಜ್ಯವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಮೊದಲ ಸ್ಥಾನದಲ್ಲಿದೆ. ಏಕೆಂದರೆ ಅತ್ಯಾಚಾರಿಗಳು ಮತ್ತು ಅಪರಾಧಿಗಳನ್ನು ಸರ್ಕಾರವೇ ರಕ್ಷಿಸುತ್ತಿದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದರೆ ದೇಶದ ಕೀರ್ತಿಯನ್ನು ನಾಶ ಮಾಡುತ್ತದೆ ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ವಿದೇಶ ಪ್ರವಾಸದ ವೇಳೆ ದೇಶದ ವಿರುದ್ಧ ಮಾತನಾಡುವುದನ್ನು ವಿರೋಧಿಸಿದ ಅವರು, ಕಾಂಗ್ರೆಸ್‌ ಅಂದರೆ ಲೂಟಿಯ ಅಂಗಡಿ, ಸುಳ್ಳಿನ ಸಂತೆಯಲ್ಲದೇ ಮತ್ತೇನೂ ಅಲ್ಲ’ ಎಂದು ಹೇಳಿದರು.

Latest Videos
Follow Us:
Download App:
  • android
  • ios