Asianet Suvarna News Asianet Suvarna News

ದೇಶ ಗೆದ್ದ ಬಿಜೆಪಿಗೆ ದಿಲ್ಲಿ ಇನ್ನೂ ಮರೀಚಿಕೆ!

ದೇಶ ಗೆದ್ದ ಬಿಜೆಪಿಗೆ ದಿಲ್ಲಿ ಇನ್ನೂ ಮರೀಚಿಕೆ| 22 ವರ್ಷಗಳಾದರೂ ಅಧಿಕಾರ ಇಲ್ಲ| ಕೇಜ್ರಿ ಕಮಾಲ್‌ ಮುಂದೆ ಮಂಕಾದ ಕೇಸರಿ ಪಡೆ|

Delhi Election 2020 BJP which won the whole country but fails to get power in national capital
Author
Bangalore, First Published Feb 12, 2020, 8:05 AM IST

ನವದೆಹಲಿ[ಫೆ.12]: ಎಂದೂ ಗೆಲ್ಲದ ರಾಜ್ಯಗಳಲ್ಲೂ ಕಮಲ ಪತಾಕೆ ಹಾರಿಸಿ ಬೀಗಿದ್ದ ಬಿಜೆಪಿಗೆ ರಾಷ್ಟ್ರ ರಾಜಧಾನಿ ದೆಹಲಿ ಮಾತ್ರ ಕಬ್ಬಿಣದ ಕಡಲೆಯಾಗಿಯೇ ಮುಂದುವರಿದಿದೆ. 22 ವರ್ಷಗಳಿಂದ ದೆಹಲಿಯಲ್ಲಿ ಅಧಿಕಾರವಂಚಿತವಾಗಿರುವ ಬಿಜೆಪಿ, ಈ ಬಾರಿ ಗದ್ದುಗೆಗೇರಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಹೀಗಾಗಿ ಇನ್ನೂ 5 ವರ್ಷಗಳ ಕಾಲ ಕಾಯುವುದು ಭಾರತೀಯ ಜನತಾ ಪಕ್ಷದ ನಾಯಕರಿಗೆ ಅನಿವಾರ್ಯವಾಗಿದೆ.

ಸರ್ಕಾರ ರಚಿಸಿ, ಅಧಿಕಾರ ಕಳೆದುಕೊಂಡ ಬಳಿಕ ಮತ್ತೆ ಗದ್ದುಗೆಗೇರಲು ಬಿಜೆಪಿ ಹೆಚ್ಚು ಸಮಯ ತೆಗೆದುಕೊಂಡ ನಿದರ್ಶನ ಬೇರಾವುದೇ ರಾಜ್ಯದಲ್ಲೂ ಸಿಗುವುದಿಲ್ಲ. ಆದರೆ ದೆಹಲಿಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಕೊನೆಯ ಬಾರಿಗೆ ಕಂಡಿದ್ದು 1998ರಲ್ಲಿ. ಅಂದಿನಿಂದ ಇಂದಿನವರೆಗೂ ಬಿಜೆಪಿಗೆ ಅಧಿಕಾರ ಸಿಕ್ಕಿಲ್ಲ.

2015ರಲ್ಲಿ ತರಾತುರಿಯಲ್ಲಿ ಕಿರಣ್‌ ಬೇಡಿ ಅವರನ್ನು ಕರೆತಂದು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಣೆ ಮಾಡಿತ್ತು. ಅದು ಫಲ ನೀಡಿರಲಿಲ್ಲ. ಈ ಸಲ ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲೇ ಇಲ್ಲ. ಅರವಿಂದ ಕೇಜ್ರಿವಾಲ್‌ರಂತಹ ಪ್ರಬಲ ನಾಯಕರ ಜತೆ ಸೆಣಸುವ ನಾಯಕ ಬಿಜೆಪಿ ಬತ್ತಳಿಕೆಯಲ್ಲಿ ಇರಲೇ ಇಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಇಟ್ಟುಕೊಂಡೇ ಚುನಾವಣೆಯನ್ನು ಬಿಜೆಪಿ ಎದುರಿಸಿತು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ದೇಶದ ರಾಜಕಾರಣವೇ ಬೇರೆ, ರಾಜ್ಯ ರಾಜಕಾರಣವೇ ಬೇರೆ ಎಂಬ ಸಂದೇಶವನ್ನು ಜನರು ಬಿಜೆಪಿಗೆ ರವಾನಿಸಿದರು.

ಬಿಜೆಪಿ ಎಡವಿದ್ದು ಎಲ್ಲಿ?:

ಮುಖ್ಯವಾಗಿ ಈ ಚುನಾವಣೆಯಲ್ಲಿ ಬಿಜೆಪಿಗೆ ಸ್ಥಳೀಯ ನಾಯಕರ ಕೊರತೆ ಎದ್ದು ಕಂಡಿತು. ದೇಶದ ವಿವಿಧ ರಾಜ್ಯಗಳ 200 ಸಂಸದರು, 11 ಮುಖ್ಯಮಂತ್ರಿಗಳು, ನರೇಂದ್ರ ಮೋದಿ, ಅಮಿತ್‌ ಶಾರಂತಹ ದಿಗ್ಗಜ ನಾಯಕರನ್ನು ಪ್ರಚಾರಕ್ಕೆ ಕರೆತಂದರೂ ಅದು ಮತವಾಗಿ ಪರಿವರ್ತನೆಯಾಗಲಿಲ್ಲ.

ಕೇಜ್ರಿವಾಲ್‌ ಅವರು ತಾವು ಮಾಡಿದ ಸಾಧನೆ ಮುಂದಿಟ್ಟು ಮತ ಕೇಳುತ್ತಿದ್ದರೆ, ಬಿಜೆಪಿ ರಾಷ್ಟ್ರೀಯವಾದ, ಸಿಎಎ ವಿಷಯಗಳನ್ನು ಆಯ್ಕೆ ಮಾಡಿ ಮತದಾರರನ್ನು ಸೆಳೆಯಲು ಪ್ರಯತ್ನಿಸಿತು. ಮಹಾರಾಷ್ಟ್ರ, ಹರಾರ‍ಯಣ, ಜಾರ್ಖಂಡದಲ್ಲಿ ಈ ತಂತ್ರಗಾರಿಕೆ ವಿಫಲವಾಗಿದ್ದರೂ, ಬಿಜೆಪಿ ಗ್ರಹಿಸಲಿಲ್ಲ.

ಕೇಜ್ರಿ ಗೆಲುವಿನ ಸೀಕ್ರೆಟ್ ಫಾರ್ಮುಲಾ: ಮತ್ತೆ ಕೆಲಸ ಮಾಡಿತು ಮಾಡಿತು PK ಪ್ಲಾನ್!

ಕೇಜ್ರಿವಾಲ್‌ ಜನಪ್ರಿಯ ನಾಯಕರಾಗಿದ್ದರೂ, ಅವರ ಮೇಲೆ ವೈಯಕ್ತಿಕವಾಗಿ ನಿಂದನೆಗಳನ್ನು ಕೇಂದ್ರ ಸಚಿವರು ಹಾಗೂ ಬಿಜೆಪಿ ನಾಯಕರು ಮಾಡಿದರು. ಅದನ್ನು ತಮ್ಮ ಲಾಭವಾಗಿ ಪರಿವರ್ತಿಸಿಕೊಳ್ಳಲು ಕೇಜ್ರಿ ಯಶಸ್ವಿಯಾದರು.

ಕಾಂಗ್ರೆಸ್‌ ದೆಹಲಿಯಲ್ಲಿ ಒಂದಷ್ಟುಪ್ರಬಲವಾಗಿದ್ದರೆ ಬಿಜೆಪಿಗೆ ವರವಾಗುತ್ತಿತ್ತು. ಮತ ವಿಭಜನೆಯಾಗಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಸಹಾಯವಾಗುತ್ತಿತ್ತು. ಆದರೆ ಕಾಂಗ್ರೆಸ್‌ ಸಂಪೂರ್ಣ ದುರ್ಬಲವಾಗಿ ಬಿಜೆಪಿ ವಿರೋಧಿ ಮತಗಳೆಲ್ಲಾ ಆಪ್‌ಗೆ ಒಲಿದವು. ಹೀಗಾಗಿ ಬಿಜೆಪಿಯ ಗೆಲುವಿನ ಹಾದಿ ದುರ್ಗಮವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಸೋಲಿಗೆ ಪ್ರಮುಖ ಕಾರಣ

1. ಕೇಜ್ರಿವಾಲ್‌ಗೆ ಸರಿಸಮನಾದ ಪ್ರಬಲ ಸ್ಥಳೀಯ ನಾಯಕನ ಕೊರತೆ

2. ಅಭಿವೃದ್ಧಿ ಬದಲು ರಾಷ್ಟ್ರೀಯವಾದ, ಸಿಎಎ ಬಗ್ಗೆ ಮಾತನಾಡಿದ್ದು

3. ಕೇಜ್ರಿ ಜನಪ್ರಿಯರಾಗಿದ್ದರೂ ಅವರನ್ನು ಹಿಗ್ಗಾಮುಗ್ಗಾ ನಿಂದಿಸಿದ್ದು

4. ಕಾಂಗ್ರೆಸ್‌ ದುರ್ಬಲವಾಗಿದ್ದರಿಂದ ಮತ ವಿಭಜನೆ ಆಗದೇ ಹೋಗಿದ್ದು

Follow Us:
Download App:
  • android
  • ios