ನವದೆಹಲಿ[ಫೆ.04]: ತಪಾಸಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುವ ವೇಳೆ, ಟ್ರಾಫಿಕ್‌ ಪೊಲೀಸ್‌ ಅಧಿಕಾರಿಯೊಬ್ಬರು ಕಾರಿನ ಬಾನೆಟ್‌ ಏರಿದ್ದರೂ, ಕಾರಿನ ಚಾಲಕ ಕಾರನ್ನು 2 ಕಿಲೋಮೀಟರ್‌ವರೆಗೆ ಹಾಗೇ ಚಲಾಯಿಸಿಕೊಂಡು ಹೋದ ಘಟನೆ ದೆಹಲಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳೆದ ವರ್ಷ ನವೆಂಬರ್‌ ಘಟನೆ ನಡೆದಿದ್ದು, ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆ ಸಂಬಂಧ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ದೆಹಲಿಯ ನಂಗೋಲಿ ಚೌಕ್‌ನಲ್ಲಿ ವಾಹನಗಳ ದಾಖಲೆ ತಪಾಸಣೆ ನಡೆಸುತ್ತಿರುವ ವೇಳೆ ವ್ಯಕ್ತಿಯೊಬ್ಬ ರಾಂಗ್‌ ಸೈಡ್‌ನಲ್ಲಿ ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಪೊಲೀಸರ ಸೂಚನೆ ಹೊರತಾಗಿಯೂ ಕಾರು ನಿಲ್ಲಿಸದೇ ಇದ್ದಾಗ ಪೊಲೀಸ್‌ ನಿಲ್ಲಿಸುವಂತೆ ಕಾರಿನ ಮುಂದೆ ಬಂದಿದ್ದಾರೆ.

ಈ ವೇಳೆ ತನ್ನ ಮೇಲೆ ಕಾರು ಹತ್ತಿಸಲು ಮುಂದಾದಾಗ ಪೊಲೀಸ್‌ ಕಾರಿನ ಬಾನೆಟ್‌ ಹತ್ತಿ ಕುಳಿತಿದ್ದಾರೆ. ಅದಾದ್ಯೂ ಚಾಲಕ ಎರಡು ಕಿಲೋಮೀಟರ್‌ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಕೊನೆಗೆ ಪೊಲೀಸ್‌ ವಿನಂತಿಸಿದ ಬಳಿಕ ಕಾರು ನಿಲ್ಲಿಸಿ, ಇಳಿಯಲು ಸಮಯ ನೀಡಿ, ಪರಾರಿಯಾಗಿದ್ದಾನೆ. ಕಾರಿನೊಳಗಿನಿಂದಲೇ ಇನ್ನೊಬ್ಬರು ವಿಡಿಯೋ ಮಾಡಲಾಗಿದ್ದು, ಚಾಲಕನ ವರ್ತನೆಗೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.