ದೆಹಲಿ ಕಾರ್ ಬಾಂಬ್ ಸ್ಫೋಟದ ತನಿಖೆಯನ್ನು ಎನ್‌ಐಎಗೆ ವಹಿಸಲಾಗಿದ್ದು, ಇದು ಪಾಕಿಸ್ತಾನಿ ಮೂಲದ ಉಗ್ರರ ಕೃತ್ಯವೆಂದು ಶಂಕಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇ ವೈದ್ಯನನ್ನು ಬಂಧಿಸಲಾಗಿದೆ.

ನವದೆಹಲಿ (ನ.12): ದೆಹಲಿ ಕಾರ್‌ ಬಾಂಬ್‌ ಬ್ಲಾಸ್ಟ್‌ ಬಹುತೇಕ ಪಾಕಿಸ್ತಾನಿ ಮೂಲದ ಉಗ್ರ ಸಂಘಟನೆ ಕೃತ್ಯ ಎನ್ನುವುದು ಸಾಬೀತಾಗಿದೆ. ಭಯೋತ್ಪಾದಕ ಘಟನೆ ಆಗಿರಬಹುದು ಎನ್ನುವ ಸೂಚನೆ ಸಿಕ್ಕ ಬೆನ್ನಲ್ಲಿಯೇ ಕೇಂದ್ರ ಗೃಹ ಸಚಿವಾಲಯ ಮಂಗಳವಾರವೇ ಘಟನೆಯ ತನಿಖೆಯನ್ನು ಎನ್‌ಐಎಗೆ ವಹಿಸಿದೆ. ಇನ್ನು ಎನ್‌ಐಎ ಕೂಡ ದೆಹಲಿ ಬ್ಲಾಸ್ಟ್‌ಗೆ ಸಂಬಂಧಪಟ್ಟಂತೆ ವಿಶೇಷ ತಂಡವನ್ನು ರಚನೆ ಮಾಡಿದ್ದು, ತನಿಖೆಯನ್ನು ಈಗಾಗಲೇ ಆರಂಭ ಮಾಡಿದೆ.

ದೆಹಲಿ ಸ್ಫೋಟಗಳಲ್ಲಿ ಬಳಸಲಾದ ಸ್ಫೋಟಕಗಳನ್ನು ವಿಧಿವಿಜ್ಞಾನ ತಂಡಗಳು ಗುರುತಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ತಮ್ಮ ಭೂತಾನ್‌ ಭೇಟಿಯಿಂದ ಹಿಂತಿರುಗಲಿದ್ದು, ಬುಧವಾರ ಭದ್ರತಾ ಸಂಪುಟ ಸಮಿತಿ (ಸಿಸಿಎಸ್) ಜೊತೆ ಸಭೆ ನಡೆಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಪೂರ್ಣ ವಿವರಗಳನ್ನು ಪ್ರಸ್ತುತಪಡಿಸಲಿದ್ದಾರೆ. ಇದರ ನಂತರ, ಸ್ಫೋಟಕಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡಬಹುದು.

ಇದರ ನಡುವೆ, ಅಕ್ಟೋಬರ್‌ನಲ್ಲಿ ಶ್ರೀನಗರದಲ್ಲಿ ಜೈಶ್-ಎ-ಮೊಹಮ್ಮದ್ (ಜೆಎಂ) ಬೆದರಿಕೆ ಪೋಸ್ಟರ್‌ಗಳು, ದೆಹಲಿಯಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಮತ್ತು ಫರಿದಾಬಾದ್‌ನಲ್ಲಿ ಸ್ಫೋಟಕಗಳು ಸಿಕ್ಕಿದ್ದಕ್ಕೆ ಮತ್ತು ದೆಹಲಿ ಸ್ಫೋಟಕ್ಕೆ ಸಂಬಂಧವಿದೆಯೇ ಎಂದು ಭದ್ರತಾ ಸಂಸ್ಥೆಗಳು ಪರಿಶೀಲಿಸುತ್ತಿವೆ. ಮಂಗಳವಾರ ಶಾ ಎರಡು ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಗಳನ್ನು ನಡೆಸಿದರು ಮತ್ತು ಭಾಗಿಯಾಗಿರುವ ಪ್ರತಿಯೊಬ್ಬ ಅಪರಾಧಿಯನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು. ಸಿಸಿಎಸ್‌ ಸಭೆಯ ಹಿನ್ನಲೆಯಲ್ಲಿ ಸಂಪೂರ್ಣ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಪಾಕಿಸ್ತಾನದ ಗಡಿಯನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ.

ಜಮ್ಮು ಕಾಶ್ಮೀರದಲ್ಲಿ ಕ್ಯಾಂಡಲ್‌ ಮಾರ್ಚ್‌

ಜಮ್ಮು ಮತ್ತು ಕಾಶ್ಮೀರದ ಗಂಡೇರ್‌ಬಾಲ್‌ನ ಸೋನಾಮಾರ್ಗ್‌ನಲ್ಲಿ, ವಾಣಿಜ್ಯ ಮಂಡಳಿ ಮತ್ತು ಸ್ಥಳೀಯ ವ್ಯಾಪಾರಿಗಳು ದೆಹಲಿ ಕಾರ್ ಬಾಂಬ್ ಸ್ಫೋಟದ ಸಂತ್ರಸ್ಥರಿಗೆ ಸಂತಾಪ ಸೂಚಿಸಲು ಕ್ಯಾಂಡಲ್‌ ಮಾರ್ಚ್‌ ನಡೆಸಿದರು. ಜನರು ದಾಳಿಯನ್ನು ಖಂಡಿಸಿದರು ಮತ್ತು ಸಂತ್ರಸ್ಥರ ಕುಟುಂಬಗಳಿಗೆ ಸಹಾನುಭೂತಿ ವ್ಯಕ್ತಪಡಿಸಿದರು.

ಜ.26ಕ್ಕೆ ಕೆಂಪುಕೋಟೆಯ ಮೇಲೆ ದಾಳಿಗೆ ಯೋಜನೆ

ಆರೋಪಿ ಡಾ. ಮುಜಮ್ಮಿಲ್ ಮೊಬೈಲ್ ಡೇಟಾ ಪ್ರಕಾರ, ಈ ವರ್ಷದ ಜನವರಿಯಲ್ಲಿ ಅತ ಕೆಂಪು ಕೋಟೆ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ್ದ. ಜನವರಿ 26 ರಂದು ಕೆಂಪು ಕೋಟೆಯನ್ನು ಗುರಿಯಾಗಿಸುವ ದೊಡ್ಡ ಸಂಚಿನ ಭಾಗವಾಗಿ ಈ ಸಮೀಕ್ಷೆ ನಡೆಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ತಿಳಿಸಿದೆ. ಆದರೆ, ಆ ಸಮಯದಲ್ಲಿ ಆ ಪ್ರದೇಶದಲ್ಲಿ ನಡೆದ ಶೋಧದ ಸಮಯದಲ್ಲಿ ಆತನ ಯೋಜನೆ ವಿಫಲವಾಗಿತ್ತು.

ಐದನೇ ವೈದ್ಯ ಕೂಡ ಬಂಧ

ಕೆಂಪು ಕೋಟೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ರಾತ್ರಿ ಕಾಶ್ಮೀರದ ಕುಲ್ಗಾಮ್‌ನ ಮತ್ತೊಬ್ಬ ವೈದ್ಯನನ್ನು ಬಂಧಿಸಲಾಗಿದೆ. ಆ ವೈದ್ಯನನ್ನು ಡಾ. ತಜಮುಲ್ ಎಂದು ಗುರುತಿಸಲಾಗಿದೆ. ಆತ ಶ್ರೀನಗರದ SMHS ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಅವನನ್ನು ಶ್ರೀನಗರದ ಬಾಡಿಗೆ ಮನೆಯಿಂದ ಬಂಧಿಸಲಾಗಿದೆ. ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಕಾಶ್ಮೀರದ ಐದನೇ ವೈದ್ಯರು ಇವನಾಗಿದ್ದಾನೆ.

42 ಪುರಾವೆಗಳನ್ನು ಸಂಗ್ರಹಿಸಿದ ತನಿಖಾ ತಂಡ

ಮಂಗಳವಾರ ಸಂಜೆಯ ಹೊತ್ತಿಗೆ, ವಿಧಿವಿಜ್ಞಾನ ತಂಡವು ಸ್ಫೋಟ ಸ್ಥಳದಿಂದ 42 ಪುರಾವೆಗಳನ್ನು ಸಂಗ್ರಹಿಸಿತ್ತು. ಇವುಗಳಲ್ಲಿ ಸ್ಫೋಟಗೊಂಡ i20 ಕಾರಿನ ಭಾಗಗಳು, ಟೈರ್‌ಗಳು, ಚಾಸಿಸ್, ಸಿಎನ್‌ಜಿ ಸಿಲಿಂಡರ್, ಬಾನೆಟ್ ಭಾಗಗಳು ಮತ್ತು ಇತರ ಭಾಗಗಳು ಸೇರಿವೆ. ಈ ಪುರಾವೆಗಳ ತನಿಖೆ ಬುಧವಾರ ಪ್ರಾರಂಭವಾಗಲಿದೆ.