ಹ್ಯಾಟ್ರಿಕ್ ಸಿಎಂ ಕೇಜ್ರಿವಾಲ್ ಇಂದು ಪ್ರಮಾಣ; ನಿಮಗೆ ಗೊತ್ತಿಲ್ಲದ ಮಫ್ಲರ್ ಮ್ಯಾನ್
ಇತ್ತೀಚೆಗೆ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಮತ್ತೊಮ್ಮೆ ಪ್ರಚಂಡ ಜಯ ಗಳಿಸಿ 3ನೇ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾಗುತ್ತಿದ್ದಾರೆ. ಸರಳಾತಿಸರಳ ವ್ಯಕ್ತಿತ್ವದ, ಹೋರಾಟದಿಂದಲೇ ಕ್ಷಿಪ್ರಗತಿಯಲ್ಲಿ ಮೇಲೆ ಬಂದ ಕೇಜ್ರಿವಾಲ್ ಕುರಿತು ಹೆಚ್ಚಿನವರಿಗೆ ಗೊತ್ತಿಲ್ಲದ ಸ್ವಾರಸ್ಯಕರ ವಿಷಯಗಳು ಇಲ್ಲಿವೆ.
ಇತ್ತೀಚೆಗೆ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಮತ್ತೊಮ್ಮೆ ಪ್ರಚಂಡ ಜಯ ಗಳಿಸಿ 3ನೇ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾಗುತ್ತಿದ್ದಾರೆ. ಸರಳಾತಿಸರಳ ವ್ಯಕ್ತಿತ್ವದ, ಹೋರಾಟದಿಂದಲೇ ಕ್ಷಿಪ್ರಗತಿಯಲ್ಲಿ ಮೇಲೆ ಬಂದ ಕೇಜ್ರಿವಾಲ್ ಕುರಿತು ಹೆಚ್ಚಿನವರಿಗೆ ಗೊತ್ತಿಲ್ಲದ ಸ್ವಾರಸ್ಯಕರ ವಿಷಯಗಳು ಇಲ್ಲಿವೆ.
ಸುಂದರ್ ಪಿಚೈಗೆ ಸೀನಿಯರ್
- ಕೇಜ್ರಿವಾಲ್‌ಗೆ ಚಕ್ಕಂದಿನಲ್ಲಿ ತಾನು ಡಾಕ್ಟರ್ ಆಗಬೇಕೆಂಬ ಕನಸಿತ್ತು. ನಂತರ ಅದು ಬದಲಾಯಿತು. ಕೊನೆಗೆ ತನ್ನ ಮನೆಯವರನ್ನು ಎದುರು ಹಾಕಿಕೊಂಡು ಐಐಟಿ ಖರಗ್‌ಪುರಕ್ಕೆ ಹೋಗಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದರು. ಕೇಜ್ರಿವಾಲ್ ಐಐಟಿ ಖರಗ್‌ಪುರದಿಂದ ಹೊರಬಿದ್ದ ವರ್ಷ ಗೂಗಲ್‌ನ ಸುಂದರ್ ಪಿಚೈ ಐಐಟಿ ಖರಗ್‌ಪುರಕ್ಕೆ ಸೇರಿದ್ದರು.
ಇನ್ನು, ಕೇಜ್ರಿವಾಲ್‌ರ ತಂದೆ ಕೂಡ ಎಂಜಿನಿಯರ್ ಆಗಿದ್ದವರು. ಜಿಂದಾಲ್‌ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದ ಅವರು ಅತ್ಯಂತ ಸರಳ ಜೀವಿ. ಇಡೀ ಕುಟುಂಬದ ಬಳಿ ಒಂದು ಸ್ಕೂಟರ್ ಮಾತ್ರ ಇತ್ತು.
ನಿಂಗ್ಯಾಕೋ ಪಾಲಿಟಿಕ್ಸು?: ಹವಾ ಸೃಷ್ಟಿಸಿದ ಪುಟ್ಟ ಪೋರನ ಕೇಜ್ರಿ ಪೋಸು!
ಅಜ್ಜ ಇಟ್ಟ ಹೆಸರು ಕೃಷ್ಣ
- ಕೇಜ್ರಿವಾಲ್ ಹುಟ್ಟಿದ್ದು ಹರ್ಯಾಣದ ಹಿಸಾರ್‌ನಲ್ಲಿರುವ ಬಾರಾ ಮೊಹಲ್ಲಾದ ಜಿಂದಾಲ್ ಕಾಲೊನಿಯಲ್ಲಿ. 1968ರಲ್ಲಿ ಗೋವಿಂದ ರಾಮ್ ಮತ್ತು ಗೀತಾದೇವಿ ದಂಪತಿಗೆ ಹಿರಿಯ ಮಗನಾಗಿ ಜನಿಸಿದರು. ಕೃಷ್ಣ ಜನ್ಮಾಷ್ಟಮಿಯಂದು ಹುಟ್ಟಿದ ಅವರಿಗೆ ಕೃಷ್ಣ ಎಂದು ಹೆಸರಿಡಬೇಕೆಂದು ಅಜ್ಜನ ಬಯಕೆಯಾಗಿತ್ತು. ನಂತರ ಅರವಿಂದ ಎಂದು ಹೆಸರಿಡಲಾಯಿತು.
ಶಾಲೆ, ಕಾಲೇಜಿನಲ್ಲಿ ಚಿತ್ರಕಾರ
- ಕೇಜ್ರಿವಾಲ್‌ಗೆ ಬಾಲ್ಯದಲ್ಲಿ ಚೆಸ್, ಪುಸ್ತಕ, ಕ್ರಿಕೆಟ್ ಮತ್ತು ಫುಟ್‌ಬಾಲ್ ಬಹಳ ಇಷ್ಟವಾಗಿದ್ದವು. ಸದಾ ಒಂದು ಸ್ಕೆಚ್‌ಬುಕ್ ಇಟ್ಟುಕೊಂಡು ಪೆನ್ಸಿಲ್‌ನಲ್ಲಿ ಚಿತ್ರ ಬಿಡಿಸುತ್ತಿದ್ದರು. ಕಣ್ಣಿಗೆ ಕಂಡಿದ್ದನ್ನೆಲ್ಲ ಚಿತ್ರಿಸುವುದು ಅವರ ಹವ್ಯಾಸವಾಗಿತ್ತು. ಅವರು ಚಿಕ್ಕಂದಿನಿಂದಲೂ ಧಾರ್ಮಿಕ ವ್ಯಕ್ತಿ. ಹಿಂದು ದೇವಸ್ಥಾನಗಳ ಜೊತೆಗೆ ಚಚ್‌ರ್‍ಗಳಿಗೂ ಆಗಾಗ ಹೋಗುತ್ತಿದ್ದರು. ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದರು.
ಚಿಕ್ಕಂದಿನಿಂದಲೂ ಭಾಷಣಕಾರ
- ಕೇಜ್ರಿವಾಲ್ ಶಾಲೆಗೆ ಹೋಗುತ್ತಿದ್ದ ದಿನಗಳಿಂದಲೂ ಅತ್ಯುತ್ತಮ ಭಾಷಣಕಾರ. ಒಮ್ಮೆ ಶಾಲೆಯಿಂದ ಅವರು ಚರ್ಚಾಸ್ಪರ್ಧೆಗೆ ಆಯ್ಕೆಯಾಗಿದ್ದರು. ಆದರೆ ಹಿಂದಿನ ದಿನ ಅವರಿಗೆ ತೀವ್ರ ಜ್ವರ ಬಂದುಬಿಟ್ಟಿತ್ತು. ಮರುದಿನದ ಸ್ಪರ್ಧೆಗೆ ಅರವಿಂದ್ ಬರುವುದಿಲ್ಲ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಸ್ಪರ್ಧೆಯ ಸ್ಥಳಕ್ಕೆ ಕೇಜ್ರಿವಾಲ್ ತಮ್ಮ ತಂದೆಯ ಸ್ಕೂಟರ್ ಹಿಂದೆ ಚಾದರ ಹೊದ್ದುಕೊಂಡು ಕುಳಿತು ಬಂದಿದ್ದರು.
ತಂಗಿ ವೈದ್ಯೆ, ತಮ್ಮ ಟೆಕ್ಕಿ
- ಕೇಜ್ರಿವಾಲ್‌ಗೆ ಒಬ್ಬಳು ತಂಗಿ ಹಾಗೂ ತಮ್ಮ ಇದ್ದಾರೆ. ತಂಗಿಯ ಹೆಸರು ರಂಜನಾ. ಅವಳು ಎಂಟನೇ ಕ್ಲಾಸ್‌ನಲ್ಲಿದ್ದಾಗ ಪರೀಕ್ಷೆಯ ಹಿಂದಿನ ದಿನ ಜೋರು ಜ್ವರ ಬಂದು ಓದುವುದಕ್ಕಾಗದೆ ಮಲಗಿದ್ದಳು. ಆಗ ಕೇಜ್ರಿವಾಲ್ ಇಡೀ ರಾತ್ರಿ ಅವಳ ಪಕ್ಕ ಕುಳಿತು ಪುಸ್ತಕಗಳನ್ನು ಓದಿ ಹೇಳಿದ್ದರು. 47 ವರ್ಷದ ರಂಜನಾ ಈಗ ವೈದ್ಯೆಯಾಗಿದ್ದು, ಹರಿದ್ವಾರದಲ್ಲಿ ನೆಲೆಸಿದ್ದಾರೆ. ಬಿಎಚ್‌ಇಎಲ್‌ನಲ್ಲಿ ಅವರು ಕೆಲಸ ಮಾಡುತ್ತಾರೆ. 43 ವರ್ಷದ ಅವರ ತಮ್ಮ ಮನೋಜ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಪುಣೆಯಲ್ಲಿ ಐಬಿಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಯಾರೀಕೆ ಹರ್ಷಿತಾ ಕೇಜ್ರಿವಾಲ್? ಇವಳೇಕೆ ಸುದ್ದಿಯಲ್ಲಿದ್ದಾಳೆ?
ಕಣ್ಣು ತೆರೆಸಿದ್ದು ತೆರೇಸಾ
- ಕೇಜ್ರಿವಾಲ್ ವೃತ್ತಿಜೀವನ ಆರಂಭಿಸಿದ್ದು ಟಾಟಾ ಸ್ಟೀಲ್ ಕಂಪನಿಯಲ್ಲಿ. ಅವರಿಗೆ ಒಎನ್‌ಜಿಸಿ ಮತ್ತು ಗೇಲ್‌ನಿಂದ ಕೆಲಸದ ಆಫರ್ ಬಂದಿತ್ತು. ಆದರೆ, ಟಾಟಾ ಸ್ಟೀಲ್‌ನ ನೌಕರಿ ಮೇಲೆ ಅವರು ಕಣ್ಣಿಟ್ಟಿದ್ದರು. ಏಕೆಂದರೆ ಟಾಟಾ ಸ್ಟೀಲ್ ಕಂಪನಿ ಕೇಜ್ರಿವಾಲ್‌ರನ್ನು ಸಂದರ್ಶನದಲ್ಲಿ ತಿರಸ್ಕರಿಸಿತ್ತು. ಹೀಗಾಗಿ ಹಟ ಹಿಡಿದು ಅಲ್ಲೇ ಕೆಲಸ ಗಿಟ್ಟಿಸಿಕೊಂಡು 1989ರಿಂದ 1992ರವರೆಗೆ ನಾಲ್ಕು ವರ್ಷ ದುಡಿದರು.
ನಂತರ ಸಿವಿಲ್ ಸವೀರ್‍ಸ್ ಪರೀಕ್ಷೆ ಬರೆಯುವುದಕ್ಕೆಂದು ರಾಜೀನಾಮೆ ಕೊಟ್ಟರು. ನಂತರ ರಿಸಲ್ಟ್ ಬರುವವರೆಗೆ ಮದರ್ ತೆರೇಸಾ ಆಶ್ರಮ, ರಾಮಕೃಷ್ಣ ಮಿಷನ್ ಹಾಗೂ ನೆಹರು ಯುವ ಕೇಂದ್ರದಲ್ಲಿ ಕೆಲಸ ಮಾಡಿದರು. ಮದರ್ ತೆರೇಸಾ ಅವರನ್ನು ಭೇಟಿ ಮಾಡಿದ ಮೇಲೆ ಕೇಜ್ರಿವಾಲ್‌ರ ಜೀವನದ ದಿಕ್ಕು ಬದಲಾಯಿತು.
ಸಸ್ಯಾಹಾರಿ, ಯೋಗಪ್ರಿಯ
- ಕೇಜ್ರಿವಾಲ್ ಅಪ್ಪಟ ಸಸ್ಯಾಹಾರಿ. ಪ್ರತಿದಿನ ವಿಪಶ್ಶನ ಯೋಗ ಮಾಡುತ್ತಾರೆ. ಅಷ್ಟೇ ಅಲ್ಲ, ನಿಯಮಿತವಾಗಿ ಧ್ಯಾನ ಮಾಡುತ್ತಾರೆ. ದಿನಕ್ಕೆ ಕೇವಲ 4 ತಾಸು ನಿದ್ದೆ ಮಾಡುತ್ತಾರೆಂದು ಸಹೋದ್ಯೋಗಿಗಳು ಹೇಳುತ್ತಾರೆ. ಅವರು ಬಹಳ ನಾಚಿಕೆ ಸ್ವಭಾವದ ಸರಳ ವ್ಯಕ್ತಿ. ಬಾಲಿವುಡ್ ನಟ ಅಮೀರ್ ಖಾನ್ ಅಂದರೆ ತುಂಬಾ ಇಷ್ಟ. ಕಾಮಿಡಿ ಸಿನಿಮಾಗಳನ್ನು ನೋಡುತ್ತಾರೆ. ಕಾಲೇಜಿನಲ್ಲಿದ್ದಾಗ ಅವರು ರಾಜಕೀಯದ ಬಗ್ಗೆ ಯಾವ ಒಲವನ್ನೂ ತೋರಿಸಿರಲಿಲ್ಲ. ನಾಟಕಗಳಲ್ಲಿ ನಟಿಸುವುದನ್ನು ಇಷ್ಟಪಡುತ್ತಿದ್ದರು.
ನನ್ನ ಮದುವೆಯಾಗ್ತೀಯಾ?
- ಕೇಜ್ರಿವಾಲ್‌ರ ಪತ್ನಿ ಸುನೀತಾ ಕೂಡ ಐಆರ್‌ಎಸ್ ಅಧಿಕಾರಿಯಾಗಿದ್ದರು. ಇಬ್ಬರೂ ಒಂದೇ ಬ್ಯಾಚ್‌ನವರು. ಮಸ್ಸೂರಿಯಲ್ಲಿ ತರಬೇತಿ ವೇಳೆ ಪರಿಚಯವಾಗಿ, ನಾಗ್ಪುರದ ತರಬೇತಿ ವೇಳೆ ಸುನೀತಾ ಕುರಿತು ಕೇಜ್ರಿವಾಲ್‌ಗೆ ಪ್ರೀತಿ ಹುಟ್ಟಿತು. ತರಬೇತಿಯ ಅವಧಿಯಲ್ಲೇ ಒಂದು ದಿನ ನೇರವಾಗಿ ಸುನೀತಾಳ ಕೊಠಡಿಯ ಬಾಗಿಲು ಬಡಿದು ‘ನನ್ನನ್ನು ಮದುವೆಯಾಗ್ತೀಯಾ’ ಎಂದು ಕೇಜ್ರಿವಾಲ್ ಕೇಳಿದ್ದರು. ಆಕೆ ಒಪ್ಪಿಕೊಂಡರು.
ಮಕ್ಕಳಿಬ್ಬರೂ ಐಐಟಿ ವಿದ್ಯಾರ್ಥಿಗಳು
- ಕೇಜ್ರಿವಾಲ್ ಸಮಾಜ ಸೇವೆಗಾಗಿ ಐಆರ್‌ಎಸ್ ಸೇವೆಗೆ ರಾಜೀನಾಮೆ ನೀಡಿದರು. ನಂತರ ಅವರು ಮುಖ್ಯಮಂತ್ರಿಯಾದ ಮೇಲೆ ಪತ್ನಿ ಕೂಡ ಐಆರ್‌ಎಸ್ ಸೇವೆಗೆ ರಾಜೀನಾಮೆ ನೀಡಿದರು. ದಂಪತಿಗೆ ಇಬ್ಬರು ಮಕ್ಕಳು. ಪುತ್ರಿ ಹರ್ಷಿತಾ ತಂದೆಯಂತೆ ಐಐಟಿ ಎಂಜಿನಿಯರಿಂಗ್ ಪದವೀಧರೆ. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪುತ್ರ ಪುಳಕಿತ್ ಕೂಡ ಐಐಟಿಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾನೆ.
ಕುಟುಂಬದ ಕಾರು ಆಲ್ಟೋ
- ಮುಖ್ಯಮಂತ್ರಿಯಾದರೂ ಕೇಜ್ರಿವಾಲ್ ಕೆಂಪು ದೀಪದ ಕಾರು ಬಳಸುತ್ತಿಲ್ಲ. ಮುಖ್ಯಮಂತ್ರಿಗೆ ನೀಡುವ ಭದ್ರತೆಯನ್ನು ಕೂಡ ಪಡೆಯುತ್ತಿಲ್ಲ. ದೆಹಲಿಯಲ್ಲಿ ಜನರಿಗೆ ಆಕ್ರೋಶವಿರುವ ವಿಐಪಿ ಸಂಸ್ಕೃತಿಯನ್ನು ತೊಡೆದುಹಾಕಬೇಕು ಎಂಬುದು ಅವರ ಸಂಕಲ್ಪ. ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಅವರು ಆಪ್‌ಗೆ ಯಾರೋ ದೇಣಿಗೆ ನೀಡಿದ್ದ ವ್ಯಾಗನ್ ಆರ್ ಕಾರನ್ನೇ ಬಳಸುತ್ತಿದ್ದರು. 2017ರಲ್ಲಿ ದೆಹಲಿ ಸೆಕ್ರೆಟರಿಯೇಟ್ ಎದುರು ನಿಲ್ಲಿಸಿದ್ದಾಗ ಆ ಕಾರು ಕಳವು ಕೂಡ ಆಗಿತ್ತು! ಕೇಜ್ರಿವಾಲ್ ಕುಟುಂಬದ ಬಳಿ ಸುನೀತಾ ಹೆಸರಿನಲ್ಲಿ ಒಂದು ಆಲ್ಟೋ ಕಾರಿದೆ.
ಅಣ್ಣಾಗಿಂತ ಮೊದಲೇ ಹೋರಾಟ
- ಅಣ್ಣಾ ಹಜಾರೆ ಜೊತೆಗೆ ಭ್ರಷ್ಟಾಚಾರ ವಿರೋಧಿ ಹೋರಾಟ ಆರಂಭಿಸುವುದಕ್ಕೂ ಮೊದಲೇ ಕೇಜ್ರಿವಾಲ್ ಬೇರೆ ರೀತಿಯಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. 1999ರಲ್ಲಿ ಪರಿವರ್ತನ್ ಎಂಬ ಎನ್‌ಜಿಒ ಆರಂಭಿಸಿದ್ದರು.
ಅದರ ಮೂಲಕ ಜನಸಾಮಾನ್ಯರಿಗೆ ಆದಾಯ ತೆರಿಗೆಯ ಬಗ್ಗೆ ಅರಿವು ಮೂಡಿಸಿ ಲಂಚ ನೀಡುವುದನ್ನು ತಪ್ಪಿಸಲು ಯತ್ನಿಸುತ್ತಿದ್ದರು. 2006ರಲ್ಲಿ ಮನೀಶ್ ಸಿಸೋಡಿಯಾ ಹಾಗೂ ಅಭಿನಂದನ್ ಸೇಕ್ರಿ ಜೊತೆ ಸೇರಿ ಪಬ್ಲಿಕ್ ಕಾಸ್ ರೀಸಚ್‌ರ್ ಫೌಂಡೇಶನ್ ಸ್ಥಾಪಿಸಿ, ಅದರ ಮೂಲಕ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಭ್ರಷ್ಟಾಚಾರ ವಿರೋಧಿ ಹೋರಾಟ ನಡೆಸಿದರು.
ಮ್ಯಾಗ್ಸೆಸೆ ಪ್ರಶಸ್ತಿ ಹಣ ದಾನ
- 2006ರಲ್ಲಿ ಕೇಜ್ರಿವಾಲ್ ಅವರ ನಾಯಕತ್ವದ ಗುಣಗಳನ್ನು ಗುರುತಿಸಿ, ಉದಯೋನ್ಮುಖ ನೇತಾರನೆಂದು ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯ ಹಣವನ್ನೆಲ್ಲ ಅವರು ಸಮಾಜ ಸೇವೆಗಾಗಿ ಎನ್‌ಜಿಒ ಒಂದಕ್ಕೆ ನೀಡಿದರು. ನಂತರ ಪೂರ್ಣಾವಧಿ ಸಾಮಾಜಿಕ ಹೋರಾಟಗಾರನಾಗಲು ಅದೇ ವರ್ಷ ಐಆರ್‌ಎಸ್ (ಭಾರತೀಯ ಕಂದಾಯ ಸೇವೆ)ನ ಜಂಟಿ ಆಯುಕ್ತರ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದರು.
ಮೋದಿಯನ್ನೂ ಮೀರಿಸಿದ್ದರು
- ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಅವರನ್ನು ಪ್ರತಿಷ್ಠಿತ ಟೈಮ್ ಮ್ಯಾಗಜೀನ್‌ನ ಸಮೀಕ್ಷೆಯು ಜಗತ್ತಿನ 100 ಅತ್ಯಂತ ಪ್ರಭಾವಿ ವ್ಯಕ್ತಿಗಳು ಎಂಬ ಪಟ್ಟಿಯಲ್ಲಿ ಗುರುತಿಸಿತ್ತು. ಆ ಸಮೀಕ್ಷೆಯಲ್ಲಿ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಹಿಂದಿಕ್ಕಿದ್ದರು.
ಪ್ಯೂನ್ ಬೇಡ ಎಂದ ಸರಳಜೀವಿ
- ಐಆರ್‌ಎಸ್ ಅಧಿಕಾರಿಯಾಗಿದ್ದಾಗ ಕೇಜ್ರಿವಾಲ್ ತಮ್ಮ ಕಚೇರಿಯಲ್ಲಿ ಪ್ಯೂನ್ ಕೂಡ ನೇಮಿಸಿಕೊಂಡಿರಲಿಲ್ಲ. ತಾವೇ ಸ್ವತಃ ಡೆಸ್ಕ್ ಸ್ವಚ್ಛ ಮಾಡಿಕೊಳ್ಳುವುದರಿಂದ ಹಿಡಿದು ಫೈಲ್ ಹಿಡಿದು ಓಡಾಡುವವರೆಗೆ ಎಲ್ಲ ಕೆಲಸ ಮಾಡಿಕೊಳ್ಳುತ್ತಿದ್ದರು. ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಮಕ್ಕಳ ಹುಟ್ಟುಹಬ್ಬವನ್ನೂ ಆಚರಿಸುವುದಿಲ್ಲ.
ಮಫ್ಲರ್ ಮ್ಯಾನ್ ಎಂಬ ಹೆಸರೇಕೆ?
- ಕೇಜ್ರಿವಾಲ್‌ಗೆ ಮಫ್ಲರ್ ಮ್ಯಾನ್ ಎಂದು ಹೆಸರು ಬಂದಿರುವುದು ಅವರು ಚಳಿಗಾಲದಲ್ಲಿ ಕತ್ತಿಗೆ ಮಫ್ಲರ್ ಸುತ್ತಿಕೊಂಡು ಓಡಾಡುವುದರಿಂದ. ದೆಹಲಿಯಲ್ಲಿ ತೀವ್ರ ಚಳಿಯಿದ್ದಾಗ ಫುಲ್ ತೋಳಿನ ಸ್ವೆಟರ್ ಧರಿಸಿ, ಮಫ್ಲರ್ ಸುತ್ತಿಕೊಳ್ಳುವುದು ಅವರ ಕಾಯಂ ಡ್ರೆಸ್‌ಕೋಡ್. ಹೀಗಾಗಿ ಮಫ್ಲರ್ ಅವರ ಟ್ರೇಡ್‌ಮಾರ್ಕ್ನಂತೆ ಆಗಿದೆ.