ಪೊಲೀಸ್ ಇನ್ಸ್‌ಪೆಕ್ಟರ್ ಕಾರಿಗೆ ಹಿಂಬದಿಯಿಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಇನ್ಸ್‌ಪೆಕ್ಟರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದೆಹಲಿಯ ಮದಿಪುರ ಮೆಟ್ರೋ ಸ್ಟೇಷನ್ ಸಮೀಪದ  ರೋಹ್ಟಕ್ ರಸ್ತೆಯಲ್ಲಿ ನಡೆದಿದೆ.

ನವದೆಹಲಿ: ಪೊಲೀಸ್ ಇನ್ಸ್‌ಪೆಕ್ಟರ್ ಕಾರಿಗೆ ಹಿಂಬದಿಯಿಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಇನ್ಸ್‌ಪೆಕ್ಟರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದೆಹಲಿಯ ಮದಿಪುರ ಮೆಟ್ರೋ ಸ್ಟೇಷನ್ ಸಮೀಪದ ರೋಹ್ಟಕ್ ರಸ್ತೆಯಲ್ಲಿ ನಡೆದಿದೆ. ಮೃತ ಪೊಲೀಸ್ ಇನ್ಸ್‌ಪೆಕ್ಟರ್‌ನ್ನು ಜಗ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ಇವರು ಸೆಕ್ಯೂರಿಟಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ತಾಂತ್ರಿಕ ತೊಂದರೆಯ ಕಾರಣದಿಂದ ಕಾರು ರಸ್ತೆಯ ಮಧ್ಯೆ ನಿಂತಿದ್ದು, ಈ ಪೊಲೀಸ್ ಇನ್ಸ್‌ಪೆಕ್ಟರ್ ಕಾರಿನ ಹೊರಗೆ ನಿಂತಿದ್ದಾಗ ಈ ಅವಘಡ ಸಂಭವಿಸಿದೆ. ಘಟನೆಯ ಬಳಿಕ ಟ್ರಕ್ ಚಾಲಕ ಟ್ರಕ್‌ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ. 

ಟ್ರಕ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ನಂತರದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋದಲ್ಲಿ ಕಾರಿನ ಹಿಂಭಾಗದಿಂದ ಡಿಕ್ಕಿ ಹೊಡೆದ ಟ್ರಕ್‌ನ ಒಂದು ಚಕ್ರ ಕಾರಿನ ಮೇಲೆಯೇ ನಿಂತಿದೆ.

Scroll to load tweet…
Scroll to load tweet…

ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ- ವಿದ್ಯುತ್‌ ಸ್ಪರ್ಶದಿಂದ ಇಬ್ಬರು ಸಾವು, ನಾಲ್ವರಿಗೆ ಗಾಯ

ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಇನ್ನೋವಾ ಕಾರನ್ನು ಹೊರ ತರಲು ಯತ್ನಿಸಿದ ವೇಳೆ ವಿದ್ಯುತ್‌ ಸ್ಪರ್ಶದಿಂದ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಮೈಸೂರಿನ ಎಚ್‌.ಡಿ. ಕೋಟೆ- ಮಾನಂದವಾಡಿ ರಸ್ತೆಯಲ್ಲಿರುವ ರೈಲ್ವೆ ವರ್ಕ್ಶಾಪ್‌ ಬಳಿ ಗುರುವಾರ ರಾತ್ರಿ ನಡೆದಿದೆ. ಅಶೋಕಪುರಂ ನಿವಾಸಿಗಳಾದ ಕಿರಣ್‌(35) ಮತ್ತು ರವಿಕುಮಾರ್‌(33) ಮೃತಪಟ್ಟವರು. ಇನ್ನೂ ಕಾರು ಚಾಲಕ ರವಿ, ಸಹಾಯ ಮಾಡಲು ಬಂದಿದ್ದ ಸಂದೇಶ, ಶಿವಕುಮಾರ್‌ ಹಾಗೂ ರೋಷನ್‌ ಎಂಬವರು ವಿದ್ಯುತ್‌ ಸ್ಪರ್ಶದಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರವಿ ಎಂಬವರು ಗುರುವಾರ ರಾತ್ರಿ ಇನ್ನೋವಾ ಕಾರನ್ನು ಚಾಲನೆ ಮಾಡಿಕೊಂಡು ನಾಚನಹಳ್ಳಿಪಾಳ್ಯದ ಕಡೆಯಿಂದ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯಾದ ರಭಸಕ್ಕೆ ವಿದ್ಯುತ್‌ ಕಂಬ ಮುರಿದು ಬಿದ್ದಿದ್ದು, ಕಾರು ವಿದ್ಯುತ್‌ ಕಂಬ ಮತ್ತು ಪಕ್ಕದಲ್ಲಿಯೇ ಇದ್ದ ಕಾಂಪೌಂಡ್‌ ಗೋಡೆಯ ನಡುವೆ ಸಿಕ್ಕಿಕೊಂಡಿದೆ.

ಈ ಅಪಘಾತ ಸಂಭವಿಸಿದ ಬಳಿಕ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಆಟೋ ಚಾಲಕರಾದ ರವಿಕುಮಾರ್‌ ಮತ್ತು ಕಿರಣ್‌ ಅವರು ಕಾರು ಚಾಲಕನ ನೆರವಿಗೆ ಬಂದಿದ್ದು, ವಿದ್ಯುತ್‌ ಸಂಪರ್ಕ ಪಡೆದಿರುವುದನ್ನು ಗಮನಿಸದೇ ಕಾರನ್ನು ಹೊರ ತೆಗೆಯಲು ಮುಂದಾಗಿದ್ದಾರೆ. ಇದಕ್ಕೆ ದಾರಿಯಲ್ಲಿ ಹೋಗುತ್ತಿದ್ದ ಸಂದೇಶ್‌, ಶಿವಕುಮಾರ್‌, ರೋಷನ್‌ ಮತ್ತು ಇತರರು ನೆರವಿಗೆ ಬಂದಿದ್ದಾರೆ. ಕಾರನ್ನು ಹೊರ ತೆಗೆಯಲು ಯತ್ನಿಸಿದ ವೇಳೆ ವಿದ್ಯುತ್‌ ಶಾಕ್‌ನಿಂದ ರವಿಕುಮಾರ್‌ ಮತ್ತು ಕಿರಣ್‌ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕಾರು ಚಾಲಕ ರವಿ, ನೆರವಿಗೆ ಬಂದ ದಾರಿಹೋಕರಾದ ಸಂದೇಶ್‌, ಶಿವಕುಮಾರ್‌ ಮತ್ತು ರೋಷನ್‌ಗೆ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.