Asianet Suvarna News Asianet Suvarna News

ಐಒಆರ್‌ ರಾಷ್ಟ್ರಗಳ ಸಮಸ್ಯೆಗಳಿಗೆ ಎಸ್‌ ಮಂತ್ರವೇ ಪರಿಹಾರ: ಸಿಂಗ್‌

ಸಮ್ಮಾನ್‌, ಸಂವಾದ, ಸಹಯೋಗ, ಶಾಂತಿ, ಸಮೃದ್ಧಿ| ಇಂಡಿಯನ್‌ ಓಷಿಯನ್‌ ರೀಜಿನ್‌ ರಾಷ್ಟ್ರಗಳ ನಡುವೆ ಪರಸ್ಪರ ಶಾಂತಿ-ಸಹಕಾರ ವೃದ್ಧಿಸಲು ಪ್ರಧಾನಿ ನರೇಂದ್ರ ಮೋದಿ ಉತ್ಸುಕ| ಐಒಆರ್‌ ಸದಸ್ಯರಾಷ್ಟ್ರಗಳಿಗೆ ಯುದ್ಧೋಪಕರಣ ಪೂರೈಸಲು ಭಾರತ ಸಿದ್ಧ| 

Defense Minister Rajnath Singh Talks Over Problems of IOR Countries grg
Author
Bengaluru, First Published Feb 5, 2021, 8:00 AM IST

ಬೆಂಗಳೂರು(ಫೆ.05):  ಭಾರತದೊಂದಿಗೆ ಕಡಲು ಹಂಚಿಕೊಂಡಿರುವ ದೇಶಗಳ ರಕ್ಷಣೆ ಹಾಗೂ ಸ್ನೇಹ ಸಂಬಂಧ ಉಳಿಸಿಕೊಳ್ಳಲು ಭಾರತ ಬದ್ಧ. ಜಾಗತಿಕವಾಗಿ ನಮ್ಮ ದೇಶಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ‘ಸಮ್ಮಾನ್‌ (ಗೌರವ), ಸಂವಾದ, ಸಹಯೋಗ, ಶಾಂತಿ, ಸಮೃದ್ಧಿ ಎಂಬ ಐದು ‘ಎಸ್‌’ ಮಂತ್ರವೇ ಪರಿಹಾರ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಭಾಗವಾಗಿ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಹಿಂದೂ ಮಹಾಸಾಗರ ಪ್ರದೇಶ (ಇಂಡಿಯನ್‌ ಓಷಿಯನ್‌ ರೀಜಿನ್‌- ಐಒಆರ್‌) ರಾಷ್ಟ್ರಗಳ ದೇಶಗಳ ರಕ್ಷಣಾ ಸಚಿವರ ಸಮಾವೇಶದಲ್ಲಿ ಮಾತನಾಡಿದ ಅವರು, ಇಂಡಿಯನ್‌ ಓಷಿಯನ್‌ ರೀಜಿನ್‌ ರಾಷ್ಟ್ರಗಳ ನಡುವೆ ಪರಸ್ಪರ ಶಾಂತಿ-ಸಹಕಾರ ವೃದ್ಧಿಸಲು ಪ್ರಧಾನಿ ನರೇಂದ್ರ ಮೋದಿ ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ಏರ್ ಶೋ ಮೂಲಕ ಇಡೀ ವಿಶ್ವದೆದುರು ಭಾರತದ ಶಕ್ತಿ ಪ್ರದರ್ಶನ: ರಾಜನಾಥ್ ಸಿಂಗ್!

ಐಒಆರ್‌ ಸದಸ್ಯರಾಷ್ಟ್ರಗಳಿಗೆ ಯುದ್ಧೋಪಕರಣಗಳನ್ನು ಪೂರೈಸಲು ಭಾರತ ಸಿದ್ಧವಿದೆ. ಭಾರತವು ವಿವಿಧ ಬಗೆಯ ಕ್ಷಿಪಣಿ ತಂತ್ರಜ್ಞಾನ ಅಥವಾ ವ್ಯವಸ್ಥೆ, ಹೆಲಿಕಾಪ್ಟರ್‌, ಬಹು ಉದ್ದೇಶದ ಲಘು ಸಾರಿಗೆ ವಿಮಾನ, ಗಸ್ತು ವಾಹನಗಳು, ಟ್ಯಾಂಕರ್‌, ರೆಡಾರ್‌, ಸೇನಾ ವಾಹನ, ವಿದ್ಯುನ್ಮಾನ ಯುದ್ಧ ತಂತ್ರಾಂಶವನ್ನು ಸದಸ್ಯ ರಾಷ್ಟ್ರಗಳಿಗೆ ಪೂರೈಸಲಿದೆ ಎಂದು ಭರವಸೆ ನೀಡಿದರು.

ಇನ್ನು ಐಒಆರ್‌ನ ಒಟ್ಟು 28 ಸದಸ್ಯ ರಾಷ್ಟ್ರಗಳ ಪೈಕಿ ಇಂಡೊನೇಷ್ಯಾ, ಬಾಂಗ್ಲಾದೇಶ, ಆಸ್ಪ್ರೇಲಿಯಾ, ದಕ್ಷಿಣ ಆಫ್ರಿಕಾ, ಯೆಮನ್‌, ಸೋಮಾಲಿಯಾ, ಮಡಗಾಸ್ಕರ್‌ ಸೇರಿದಂತೆ 27 ಸದಸ್ಯ ರಾಷ್ಟ್ರಗಳ ರಾಯಭಾರಿಗಳು, ಉನ್ನತ ಅಧಿಕಾರಿಗಳು ಭೌತಿಕವಾಗಿ ಮತ್ತು ವರ್ಚುವಲ್‌ನಲ್ಲಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ರಕ್ಷಣಾ ಕಾರ್ಯದರ್ಶಿ ಡಾ. ಅಜಯ್‌ಕುಮಾರ್‌, ರಕ್ಷಣಾ ಉತ್ಪನ್ನಗಳ ವಿಭಾಗದ ಕಾರ್ಯದರ್ಶಿ ರಾಜಕುಮಾರ್‌, ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌, ನೌಕಾಪಡೆ ಮುಖ್ಯಸ್ಥ ಕರಮ್‌ಬೀರ್‌ ಸಿಂಗ್‌, ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಮೊದಲಾದವರು ಉಪಸ್ಥಿತರಿದ್ದರು.
 

Follow Us:
Download App:
  • android
  • ios