ಬೆಂಗಳೂರು(ಫೆ.03): ಏಷ್ಯಾದ ಅತಿ ದೊಡ್ಡ ಏರೋ ಶೋ ಹಮ್ಮಿಕೊಳ್ಳುವುದು ಭಾರತದ ಪಾಲಿಗೆ ಹೆಮ್ಮೆಯ ವಿಚಾರ. ಏರ್ ಶೋ ವಿಶ್ವದೆದುರು ನಮ್ಮ ದೇಶದ ಶಕ್ತಿ ಪ್ರದರ್ಶನಕ್ಕೆ ಒಂದು ವೇದಿಕೆ. ವಿಶ್ವದ ಮೊಟ್ಟಮೊದಲ ಹೈಬ್ರಿಡ್ ಏರ್ ಶೋ ಇದಾಗಿದೆ. ಭಾರತೀಯ ತಯಾರಿಕೆಯ ತೇಜಸ್ ಯುದ್ಧವಿಮಾನಕ್ಕೆ ಸಾಕಷ್ಟು ಬೇಡಿಕೆಯಿದೆ. ಈಗಾಗಲೇ 83 ತೇಜಸ್ ವಿಮಾನಗಳಿಗೆ ಆರ್ಡರ್ ಬಂದಿದ್ದು, ಇದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

"

ಬೆಂಗಳೂರಿನ ಯಲಹಂಕದಲ್ಲಿ ನಡೆಯುವ ಏರೋ ಇಂಡಿಯಾ 2021ರ ಮೂರು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿ ಮಾತನಾಡಿದ ರಕ್ಷಣಾ ಸಚಿವ, ಏರೋ ಇಂಡಿಯಾ ನಡೆಸಲು ಕರ್ನಾಟಕ‌ ಸರಕಾರ ನೀಡಿದ ಸಹಕಾರಕ್ಕೆ ಧನ್ಯವಾದ ಸಮರ್ಪಿಸಿದ್ದಾರೆ. ಇಡೀ ಪ್ರಪಂಚ ಕೋವಿಡ್​ನಿಂದ ತತ್ತರಿಸಿದೆ. ನಮ್ಮ ದೇಶದಲ್ಲೇ ತಯಾರಾದ ಎರಡು ಲಸಿಕೆಗಳು ಬೇರೆ ದೇಶಗಳಲ್ಲೂ ಜೀವ ಉಳಿಸುವ ಕೆಲಸ ಮಾಡುತ್ತಿವೆ. ನಾವು 217 ಮಿಲಿಯನ್ ಜನರಿಗೆ ಕೋವಿಡ್ ಲಸಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ. ವಸುಧೈವ ಕುಟುಂಬಕಂ ಎನ್ನುವ ಧ್ಯೇಯದೊಂದಿಗೆ ಕೆಲಸ ಮಾಡುವ ದೇಶ ನಮ್ಮದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇನ್ನು ಭಾಷಣದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಬಸವಣ್ಣರನ್ನು ನೆನಪಿಸಿಕೊಂಡ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆತ್ಮ ನಿರ್ಭರ ಭಾರತ ಅಭಿಯಾನ ಅಡಿಯಲ್ಲಿ ದೇಶದ ರಕ್ಷಣಾ ಕ್ಷೇತ್ರವನ್ನು ಆಧುನೀಕರಣಗೊಳಿಸಲಾಗುತ್ತಿದೆ. ಇದಕ್ಕಾಗಿ 30 ಮಿಲಿಯನ್ ಅಮೆರಿಕನ್ ಡಾಲರ್ ಹಣ ಮೀಸಲಿರಿಸಲಾಗಿದೆ ಎಂದಿದ್ದಾರೆ.

ಏರೋ‌ ಇಂಡಿಯಾ 2021 ಚಾಲನೆ ವೇಳೆ ರಾಷ್ಟ್ರಧ್ವಜ, ಭಾರತೀಯ ವಾಯು ಸೇನೆ ಹಾಗೂ ಏರೋ ಇಂಡಿಯಾ 2021 ರ ಧ್ವಜ ಹೊತ್ತ ಎಲ್'ಯುಹೆಚ್ ಹೆಲಿಕಾಪ್ಟರ್ ಗಳು ಮೊದಲು ಪ್ರದರ್ಶನ ನೀಡಿದವು. ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಉಪಸ್ಥಿತರಿದ್ದರು.

ವೈಮಾನಿಕ ಪ್ರದರ್ಶನದಲ್ಲಿ  ಈ ಬಾರಿ ಒಟ್ಟು 63 ವಿಮಾನಗಳಿಂದ ಪ್ರದರ್ಶನ ನಡೆಯಲಿದ್ದು, ದಿನಕ್ಕೆ ಎರಡು ಬಾರಿ 42 ವಿಮಾನಗಳು ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನೀಡಲಿವೆ.

ಡಕೋಟಾ, ಸುಖೋಯ್, ರಫೇಲ್, ಎಲ್​ಸಿಹೆಚ್, ಎಲ್​ಯುಎಚ್, ಜಾಗ್ವಾರ್, ಹಾಕ್ ಸೇರಿ ಇನ್ನಿತರ ಫೈಟರ್ ಜೆಟ್ ಏರ್ ಕ್ರಾಫ್ಟ್, ಹೆಲಿಕಾಫ್ಟರ್​ಗಳಿಂದ ಪ್ರದರ್ಶನ ನಡೆಯಲಿದೆ. ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಈ ಬಾರಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.