ಮುಂಬೈ (ಅ.22): ಭೂಗತ ಪಾತಕಿ, 1993ರ ಮುಂಬೈ ಸರಣಿ ಸ್ಫೋಟದ ಮಾಸ್ಟರ್‌ ಮೈಂಡ್‌ ದಾವೂದ್‌ ಇಬ್ರಾಹಿಂಗೆ ಸೇರಿದ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡ್‌ ತಾಲೂಕಿನಲ್ಲಿರುವ ಪಿತ್ರಾರ್ಜಿತ ಆಸ್ತಿಯನ್ನು ನವೆಂಬರ್‌ 10ರಂದು ಹರಾಜಿಗೆ ಇಡಲಾಗುತ್ತಿದೆ. ಕಳ್ಳ ಸಾಗಣೆ ಹಾಗೂ ವಿದೇಶಿ ವಿನಿಮಯ ವಂಚನೆ ವಿಭಾಗದ ಅಧಿಕಾರಿಗಳು ಮಹಾರಾಷ್ಟ್ರದ ಕೊಂಕಣ ಪ್ರಾಂತ್ಯದಲ್ಲಿರುವ ದಾವೂದ್‌ ಪೂರ್ವಜರಿಗೆ ಸೇರಿದ 7 ಭೂಮಿಯನ್ನು ಹರಾಜು ಹಾಕುತ್ತಾರೆ ಎಂದು ವರದಿಗಳೂ ತಿಳಿಸಿವೆ.

ವರದಿಗಳ ಪ್ರಕಾರ ಕೊಂಕಣದಲ್ಲಿರುವ ದಾವುದ್‌ ಪೂರ್ವಜರ ಆಸ್ತಿಯನ್ನು ಕಳ್ಳಸಾಗಾಣಿಕೆ ಮತ್ತು ವಿದೇಶಿ ವಿನಿಮಯ ಮ್ಯಾನಿಪುಲೇಟ​ರ್‍ಸ್ (ಆಸ್ತಿ ಮುಟ್ಟುಗೋಲು ಕಾಯ್ದೆ) (ಎಸ್‌ಎಎಫ್‌ಇಎಂಎ) ಅಧಿಕಾರಿಗಳು ಹರಾಜು ಹಾಕಲಿದ್ದಾರೆ. ಅಲ್ಲದೆ ದಾವುದ್‌ ಸಹಚರ ಗ್ಯಾಂಗ್‌ಸ್ಟರ್‌ ಇಕ್ಬಾಲ್‌ ಮಿರ್ಚಿಯ ಎರಡು ಫ್ಲ್ಯಾಟ್‌ಗಳನ್ನೂ ಅದೇ ದಿನ ಹರಾಜಿಗೆ ಇಡಲಾಗುತ್ತಿದೆ.

ಭೂಗತ ಲೋಕದ ಬೇನಾಮಿ ಬಾದ್‌ಷಾ ದಾವೂದ್ ಪ್ರೇಮ್ ಕಹಾನಿ.! .

ಎಸ್‌ಎಎಫ್‌ಇಎಂಎ ಅಧಿಕಾರಿಗಳ ಪ್ರಕಾರ ನವೆಂಬರ್‌ 2ರಂದು ಬಿಡ್ಡರ್‌ಗಳು ಆಸ್ತಿಯನ್ನು ಪರಿಶೀಲಿಸಿ, ಡೆಪಾಸಿಟ್‌ ಹಣದೊಂದಿಗೆ ನ.6ರ ಸಂಜೆ 4ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಇ-ಹರಾಜು, ಸಾರ್ವಜನಿಕ ಹರಾಜು ಮತ್ತು ಟೆಂಡರ್‌ ಕೂಗುವ ಮುಖಾಂತರವೂ ಹರಾಜಿನಲ್ಲಿ ಭಾಗಿಯಾಗಬಹುದು.