ಸಾವಿನ ವೇಳೆ ಯಾರು ಡಾನ್ಸ್ ಮಾಡುವುದಿಲ್ಲ, ಆದ್ರೂ ಗೆಳೆಯನಿಗೆ ಕೊಟ್ಟ ಮಾತು ಮೀರಲಾಗದೆ ವ್ಯಕ್ತಿಯೊಬ್ಬರು ಆತನ ಅಂತಿಮಯಾತ್ರೆ ವೇಳೆ ಕಣ್ಣೀರಿಡುತ್ತಲೇ ಡಾನ್ಸ್ ಮಾಡಿದ ಮನಮಿಡಿಯುವ ಘಟನೆ ಮಧ್ಯಪ್ರದೇಶದ ಮಂಡ್ಸುರ್ ಜಿಲ್ಲೆಯ ಜವಸಿಯ ಗ್ರಾಮದಲ್ಲಿ ನಡೆದಿದೆ.
ಸಾವಿನ ವೇಳೆ ಯಾರು ಡಾನ್ಸ್ ಮಾಡುವುದಿಲ್ಲ, ಆದ್ರೂ ಗೆಳೆಯನಿಗೆ ಕೊಟ್ಟ ಮಾತು ಮೀರಲಾಗದೆ ವ್ಯಕ್ತಿಯೊಬ್ಬರು ಆತನ ಅಂತಿಮಯಾತ್ರೆ ವೇಳೆ ಕಣ್ಣೀರಿಡುತ್ತಲೇ ಡಾನ್ಸ್ ಮಾಡಿದ ಮನಮಿಡಿಯುವ ಘಟನೆ ಮಧ್ಯಪ್ರದೇಶದ ಮಂಡ್ಸುರ್ ಜಿಲ್ಲೆಯ ಜವಸಿಯ ಗ್ರಾಮದಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ಮೃತರ ಅಂತಿಮಯಾತ್ರೆಯನ್ನು ಕರೆದೊಯ್ಯುತ್ತಿದ್ದ ವಾಹನದ ಮುಂದೆ ಡಾನ್ಸ್ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರನ್ನು ಭಾವುಕರನ್ನಾಗಿಸಿದೆ.
ಅಂಬಾಲಾಲ್ ಪ್ರಜಾಪತಿ ಎಂಬುವವರ ಸ್ನೇಹಿತ ಸೋಹನ್‌ಲಾಲ್ ಜೈನ್ ಅವರು ಕ್ಯಾನ್ಸರ್‌ನಿಂದ ನಿಧನರಾಗಿದ್ದರು. ಕ್ಯಾನ್ಸರ್ ಪೀಡಿತರಾಗಿದ್ದ ಸೋಹನ್ ಲಾಲ್ ಅವರು ಮೂರು ವರ್ಷಗಳ ಹಿಂದೆಯೇ 2021ರಲ್ಲಿ ತಮ್ಮ ಆತ್ಮೀಯ ಗೆಳೆಯನಾದ ಅಂಬಲಾಲ್ ಪ್ರಜಾಪತಿ ಬಳಿ ಬರಹ ರೂಪದಲ್ಲಿ ಮಾತು ಪಡೆದುಕೊಂಡಿದ್ದರು.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸೋಹನ್‌ಲಾಲ್ ಅವರು 2021ರ ಜನವರಿಯಲ್ಲಿ ಅಂಬಲಾಲ್ ಪ್ರಜಾಪತಿ ಅವರಿಗೆ ಬರೆದ ಪತ್ರದಲ್ಲಿ ತನ್ನ ಸಾವಿನ ವೇಳೆ ಸಂಪ್ರದಾಯವನ್ನು ಮುರಿಯುವಂತಹ ವಿದಾಯವನ್ನು ನನಗೆ ಮಾಡಬೇಕು ಎಂದು ಮನವಿ ಮಾಡಿದ್ದರು. ನನ್ನ ಸಾವಿಗೆ ಯಾರೂ ಅಳುವುದು ಬೇಡ, ಮೌನವಾಗಿರುವುದು ಬೇಡ ಕೇವಲ ಸಂಭ್ರಮಾಚರಣೆ ಮಾತ್ರ ಇರಬೇಕು. ನಾನು ಈ ಲೋಕದಲ್ಲಿ ಇಲ್ಲದಿರುವಾಗ, ನೀವು ನನ್ನ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಭಾಗವಹಿಸಿ ಬ್ಯಾಂಡ್‌ಸೆಟ್‌ನ ಸದ್ದಿಗೆ ನೃತ್ಯ ಮಾಡಬೇಕು ಹಾಡಬೇಕು ಹೀಗೆ ಖುಷಿ ಖುಷಿಯಾಗಿ ನನಗೆ ವಿದಾಯ ಹೇಳಬೇಕು ನನಗೆ ನೀವು ಸಂತೋಷದಿಂದ ವಿದಾಯ ಹೇಳಬೇಖಕೆ ಹೊರತು ದುಃಖದಿಂದಲ್ಲ ಎಂದು ಅವರು ತಮ್ಮ ಆತ್ಮೀಯ ಸ್ನೇಹಿತನಿಗೆ ಬರೆದ ಪತ್ರದಲ್ಲಿ ಕೇಳಿಕೊಂಡಿದ್ದರು.
ಈ ಪತ್ರವನ್ನು ಸೋಹನ್‌ಲಾಲ್ 2012ರಲ್ಲಿ ಬರೆದು ಸಹಿಯನ್ನು ಹಾಕಿದ್ದರು. ಅದರಂತೆ ಈಗ ಅವರ ಸ್ನೇಹಿತ ಅಂಬಲಾಲ್ ಪ್ರಜಾಪತಿ ಅವರು ತಮ್ಮ ಸ್ನೇಹಿತನ ಶವಯಾತ್ರೆಯ ವೇಳೆ ಡಾನ್ಸ್ ಮಾಡಿ ಅವರ ಆಸೆಯನ್ನು ಈಡೇರಿಸಿದ್ದಾರೆ. ಗ್ರಾಮದ ಉದ್ದಕ್ಕೂ ಶವಯಾತ್ರೆ ಸಾಗುತ್ತಿದ್ದರೆ ಅವರ ಸ್ನೇಹಿತ ವಾಹನದ ಮುಂದೆ ಕಣ್ಣೀರಿಡುತ್ತಲೇ ಡಾನ್ಸ್ ಮಾಡುತ್ತಾ ಸಾಗಿದರು. ಡೋಲಿನ ಸದ್ದಿಗೆ ಅವರು ಹೆಜ್ಜೆ ಹಾಕುತ್ತಾ ಸಾಗಿದ್ದು, ನೋಡುಗರನ್ನು ಭಾವುಕರನ್ನಾಗಿಸಿತು.
ಅವರಲ್ಲಿ ಹಲವರು ಮೌನವಾಗಿ ನೋಡುತ್ತಿದ್ದರೆ ಇನ್ನು ಕೆಲವರು ಕಣ್ಣೀರಿಟ್ಟರು. ಕೆಲವರು ಮೊದಲಿಗೆ ತಾವು ಆಶ್ಚರ್ಯಪಟ್ಟಿದ್ದಾಗಿ ಒಪ್ಪಿಕೊಂಡರು, ಆದರೆ ನಂತರ ಈ ದೃಶ್ಯವು ಇಬ್ಬರು ಗೆಳೆಯರ ನಡುವಿನ ಅಪರೂಪದ ಬಾಂಧವ್ಯವನ್ನು ಪ್ರತಿಬಿಂಬಿಸಿತು ಎಂದು ಹೇಳಿದರು.
ಈ ಬಗ್ಗೆ ಪಿಟಿಐ ಜೊತೆ ಮಾತನಾಡಿದ ಅಂಬಲಾಲ್, ನನ್ನ ಸ್ನೇಹಿತನ ಕೊನೆಯ ಪ್ರಯಾಣದಲ್ಲಿ ನೃತ್ಯ ಮಾಡುತ್ತೇನೆ ಎಂದು ನಾನು ಭರವಸೆ ನೀಡಿದ್ದೆ, ಮತ್ತು ನಾನು ಹಾಗೆ ಮಾಡಿದೆ. ಅವನು ನನಗೆ ಸ್ನೇಹಿತನಿಗಿಂತ ಹೆಚ್ಚಾಗಿದ್ದ, ಅವನು ನನ್ನ ನೆರಳಿನಂತಿದ್ದ ಎಂದು ಹೇಳಿದರು. ಇನ್ನು ಮೃತರ ಅಂತಿಮ ವಿಧಿವಿಧಾನಗಳನ್ನು ನಡೆಸಿಕೊಟ್ಟ ಪುರೋಹಿತ ಪಂಡಿತ್ ರಾಕೇಶ್ ಶರ್ಮಾ ಘಟನೆಗೆ ಪ್ರತಿಕ್ರಿಯಿಸಿ, ಈ ರೀತಿಯ ಬಂಧ ಬಹಳ ಅಪರೂಪವಾಗಿ. ಸೋಹನ್ಲಾಲ್ ಜಿ ಅಂಬಾಲಾಲ್ ಅವರನ್ನು ನೃತ್ಯ ಮಾಡಲು ಕೇಳಿಕೊಂಡಿದ್ದರು, ಮತ್ತು ಅವರು ಅದನ್ನು ಪೂರ್ಣ ಭಕ್ತಿಯಿಂದ ಪೂರೈಸಿದರು. ಇಂತಹ ಸ್ನೇಹಗಳು ಶಾಶ್ವತವಾಗಿರಲಿ ಎಂದರು.
ಈಗ ಸೋಹನ್‌ಲಾಲ್ ಪಾಲಿಗೆ ನೆನಪಿನ ಬುತ್ತಿಯಾಗಿರುವ ಈ ಪತ್ರದಲ್ಲಿ ಅಂಬಾಲಾಲ್ ಮತ್ತು ಶಂಕರಲಾಲ್ ನನ್ನ ಶವದ ಮುಂದೆ ಒಟ್ಟಿಗೆ ನೃತ್ಯ ಮಾಡಬೇಕು. ಮತ್ತು ನಾನು ಎಂದಾದರೂ ತಿಳಿದೋ ಅಥವಾ ತಿಳಿಯದೆಯೋ ತಪ್ಪು ಮಾಡಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಬರೆದಿದ್ದಾರೆ.
ಈ ಘಟನೆ ಬಗ್ಗೆ ಸೋಹನ್ ಲಾಲ್ ಅವರ ಕುಟುಂಬದವರು ಕೂಡ ಪ್ರತಿಕ್ರಿಯಿಸಿದ್ದು, ಸೋಹನ್‌ಲಾಲ್ ಅವರ ಸಾವು ನಮಗೆ ಬಹಳ ನೋವು ತಂದಿದ್ದರೂ, ಅಂಬಾಲಾಲ್ ಅವರನ್ನು ಸನ್ಮಾನಿಸಿದ ರೀತಿ ನಮ್ಮನ್ನು ಭಾವುಕರನ್ನಾಗಿಸಿತು, ನಾವು ದುಃಖಿಸುತ್ತಿದ್ದೇವೆ, ಆದರೆ ಈ ಸ್ನೇಹದ ಅಭಿವ್ಯಕ್ತಿಯನ್ನು ನೋಡಿ ನಾವು ಮತ್ತೆ ಭಾವುಕರಾಗಿದ್ದೇವೆ ಎಂದು ಹೇಳಿದ್ದಾರೆ.
