* ದಕ್ಷಿಣ ಅಂಡಮಾನ್‌ ಸಮುದ್ರದಲ್ಲಿ ಶುಕ್ರವಾರ ಕಡಿಮೆ ಒತ್ತಡ ಪ್ರದೇಶ ನಿರ್ಮಾಣ* ಆಂಧ್ರ, ಒಡಿಶಾಕ್ಕೆ ಚಂಡಮಾರುತ ದಾಳಿ ಸಾಧ್ಯತೆ: ಐಎಂಡಿ ಎಚ್ಚರಿಕೆ* ಒಡಿಶಾದಲ್ಲಿ ಹೈ ಅಲರ್ಚ್‌ ಘೋಷಣೆ

ಭುಬನೇಶ್ವರ(ಜ.07) ದಕ್ಷಿಣ ಅಂಡಮಾನ್‌ ಸಮುದ್ರದಲ್ಲಿ ಶುಕ್ರವಾರ ಕಡಿಮೆ ಒತ್ತಡ ಪ್ರದೇಶ ನಿರ್ಮಾಣಗೊಂಡಿದ್ದು, ಶೀಘ್ರವೇ ಇದು ಚಂಡಮಾರುತದ ಸ್ವರೂಪ ತಾಳಿ ಆಂಧ್ರ ಪ್ರದೇಶ ಹಾಗೂ ಒಡಿಶಾದ ತೀರ ಪ್ರದೇಶಗಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಒಡಿಶಾದಲ್ಲಿ ಹೈ ಅಲರ್ಚ್‌ ಘೋಷಣೆ ಮಾಡಲಾಗಿದೆ.

‘ಕಡಿಮೆ ಒತ್ತಡ ಪ್ರದೇಶವು ವಾಯುವ್ಯ ದಿಕ್ಕಿನಲ್ಲಿ ಸಾಗುತ್ತಿದ್ದು ಬಂಗಾಳಕೊಲ್ಲಿಯಲ್ಲಿ ಭಾನುವಾರ ಚಂಡಮಾರುತದ ರೂಪ ತಾಳುವ ಸಾಧ್ಯತೆಯಿದೆ. ಮೇ 10 ರಂದು ಚಂಡಮಾರುತವು ಆಂಧ್ರ ಪ್ರದೇಶ ಹಾಗೂ ಒಡಿಶಾದ ತೀರ ಪ್ರದೇಶಗಳಿಗೆ ಅಪ್ಪಳಿಸಲಿದೆ’ ಎಂದು ಐಎಂಡಿ ಅಂದಾಜಿಸಿದೆ. ಅಲ್ಲದೇ ಚಂಡಮಾರುತದ ಪ್ರಭಾವದಿಂದಾಗಿ ಪೂರ್ವ ಕರಾವಳಿ ರಾಜ್ಯಗಳಲ್ಲಿ ಗುಡುಗು ಸಿಡಿಲುಗಳೊಂದಿಗೆ ಭಾರೀ ಮಳೆಯಾಲಿದೆ ಎಂದು ವಿಶ್ಲೇಷಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಒಡಿಶಾ ಸರ್ಕಾರ ಈಗಾಗಲೇ ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 17 ತಂಡಗಳು, ಒಡಿಆರ್‌ಎಫ್‌ನ 20 ತಂಡಗಳು ಹಾಗೂ ಅಗ್ನಿಶಾಮಕ ದಳದ 175 ತಂಡಗಳಿಗೆ ಹೈ ಅಲರ್ಚ್‌ ಘೋಷಣೆ ಮಾಡಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಹೋಗದಂತೆ ಸೂಚನೆ ನೀಡಿದೆ. ರಾಜ್ಯದ ವಿದ್ಯುತ್‌, ಆರೋಗ್ಯ, ಕುಡಿಯುವ ನೀರು ಮೊದಲಾದ ಇಲಾಖೆಗಳಿಗೆ ಸಂಭವಿಸಬಹುದಾದ ವಿಪತ್ತಿನ್ನು ನಿರ್ವಹಿಸಲು ಸಜ್ಜಾಗಿರುವಂತೆ ಸೂಚಿಸಲಾಗಿದೆ.

ವಾಯುವ್ಯ ಭಾರತಕ್ಕೆ ‘ಹಳದಿ ಎಚ್ಚರಿಕೆ’

ಶಾದ್ಯಂತ ಬಿಸಿಗಾಳಿ ತಗ್ಗಿದ ಬೆನ್ನಲ್ಲೇ ಪಶ್ಚಿಮದ ವಾತಾವರಣ ಬದಲಾವಣೆಯಿಂದಾಗಿ ಹವಾಮಾನ ಇಲಾಖೆ ವಾಯುವ್ಯ ಭಾರತಕ್ಕೆ ‘ಹಳದಿ ಎಚ್ಚರಿಕೆಯನ್ನು ನೀಡಿದೆ. ದೆಹಲಿ, ಪಂಜಾಬ್‌, ಹರ್ಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಬಿಸಿಗಾಳಿ ಸದ್ಯದಲ್ಲೇ ಅಂತ್ಯವಾಗಲಿದೆ. ಆದರೆ ರಾಜಸ್ಥಾನ ಮತ್ತು ವಿದರ್ಭ ಭಾಗಗಳಲ್ಲಿ ಬಿಸಿಗಾಳಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ.

‘ಗಂಭೀರವಾದ ಬಿಸಿಗಾಳಿ ದೇಶಾದ್ಯಂತ ಕಡಿಮೆಯಾಗಿದೆ. ನಾವು ಮುನ್ಸೂಚನೆ ನೀಡಿದಂತೆ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಏ.30ಕ್ಕೆ ಬಿಸಿಗಾಳಿ ಮುಗಿದಿದೆ. ಇನ್ನೆರಡು ದಿನಗಳಲ್ಲಿ ಈ ಭಾಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಗಳಿವೆ. ಅದೇ ರೀತಿ ಪಶ್ಚಿಮದ ಕ್ಷೋಭೆ ಇರುವುದರಿಂದ ವಾಯುವ್ಯ ಭಾರತದಲ್ಲಿ ಬಿಸಿಗಾಳಿ ಮುಂದುವರೆಯುವ ಸಾಧ್ಯತೆ ಇದೆ. ಹಾಗಾಗಿ ಹಳದಿ ಎಚ್ಚರಿಕೆ ನೀಡಿದ್ದೇವೆ. ಮೇ 3ರಂದು ದೆಹಲಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ಪಶ್ಚಿಮದ ಕ್ಷೋಭೆಯಿಂದಾಗಿ ದೆಹಲಿ, ಲಖನೌ ಮತ್ತು ಜೈಪುರಗಳಲಿ ಭಾರಿ ಮಾರುತಗಳು ಬೀಸಲಿವೆ. ಇದೇ ಸ್ಥಿತಿ ಮುಂದಿನ 6ರಿಂದ 7 ದಿನಗಳ ಕಾಲ ಮುಂದುವರೆಯಲಿದೆ. ಪೂರ್ವ ಮಾರುತಗಳು ಸಹ ಬಲವಾಗಿರುವುದರಿಂದ ಉಷ್ಣಾಂಶದಲ್ಲಿ ಯಾವುದೇ ಏರಿಕೆಯಾಗುವ ಸಾಧ್ಯತೆ ಇಲ್ಲ. ಸದ್ಯಕ್ಕೆ ಮೇ 7ರವರೆಗೆ ಬಿಸಿಗಾಳಿ ಸೃಷ್ಟಿಯಾಗುವ ಲಕ್ಷಣಗಳಿಲ್ಲ. ನಂತರದ ದಿನಗಳ ಪರಿಸ್ಥಿತಿಯನ್ನು ಉಷ್ಣಾಂಶ ಆಧರಿಸಿ ನಿರ್ಣಯಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.