ತೀವ್ರ ಸ್ವರೂಪ ಪಡೆದ ತೌಕ್ಟೆ ಚಂಡಮಾರುತ!
* ಲಕ್ಷದ್ವೀಪ, ಕೇರಳದಲ್ಲಿ ಭಾರೀ ಮಳೆ, 18ಕ್ಕೆ ಗುಜರಾತ್ ಮೇಲೆ ಅಪ್ಪಳಿಸುವ ಸಾಧ್ಯತೆ: ಐಎಂಡಿ
* ಅಧಿಕಾರಿಗಳ ಜೊತೆ ಮೋದಿ ಸಭೆ
* 5 ರಾಜ್ಯಗಳಲ್ಲಿ 100 ಎನ್‌ಡಿಆರ್‌ಎಫ್ ತಂಡ ನಿಯೋಜನೆ
ನವದೆಹಲಿ(ಮೇ.16): ಅರಬ್ಬೀ ಸಮುದ್ರದಲ್ಲಿ ವಾಯಭಾರ ಕುಸಿತದಿಂದ ಸೃಷ್ಟಿಯಾಗಿರುವ ತೌಕ್ಟೆಚಂಡಮಾರುತ, ಶನಿವಾರ ಮತ್ತಷ್ಟುಪ್ರಬಲವಾಗಿದ್ದು, ದಕ್ಷಿಣದ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಸುರಿಸಿದೆ. ಜೊತೆಗೆ ಮುಂದಿನ 12 ಗಂಟೆಗಳಲ್ಲಿ ಚಂಡಮಾರುತ ಇನ್ನಷ್ಟುಗಂಭೀರವಾಗಲಿದೆ. ಮೇ 18ರಂದು ಗುಜರಾತ್‌ನ ಪೋರಬಂದರ್ ಮತ್ತು ನಲಿಯಾ ನಡುವಿನ ಕರಾವಳಿ ತೀರದ ಮೇಲೆ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಚಂಡಮಾರುತದ ಪ್ರಭಾವದಿಂದಾಗಿ ಲಕ್ವದ್ವೀಪ, ಕೇರಳದಲ್ಲಿ ಶುಕ್ರವಾರ ರಾತ್ರಿಯಿಂದಲೂ ಭಾರೀ ಮಳೆಯಾಗುತ್ತಿದೆ. ಮಳೆಯ ಜೊತೆಗೆ ಭಾರೀ ವೇಗದಲ್ಲಿ ಗಾಳಿ ಕೂಡಾ ಬೀಸುತ್ತಿರುವ ಪರಿಣಾಮ ಕೇರಳದಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ಥವಾಗಿದೆ. ಸಮುದ್ರದಲ್ಲಿ ಭಾರೀ ಎತ್ತರದ ಅಲೆಗಳು ಎದ್ದಿದ್ದು, ತೀರ ಪ್ರದೇಶದಲ್ಲಿ ಮನೆಗಳಿಗೆಲ್ಲಾ ನೀರು ನುಗ್ಗಿದೆ. ಜೊತೆಗೆ ಹಲವೆಡೆ ಮರ, ಮನೆ ಉರುಳಿದ ಹಲವು ಘಟನೆಗಳು ವರದಿಯಾಗಿವೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಕೂಡಾ ತಲೆದೋರಿದೆ. ಕೇರಳದ 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಜನರಿಗೆ ಅದರಲ್ಲೂ ಕರಾವಳಿ ತೀರದ ಜನರಿಗೆ ಎಚ್ಚರದಿಂದ ಇರುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ಈ ನಡುವೆ ಕರ್ನಾಟಕ, ಗೋವಾ ಕರಾವಳಿಯ ಕೆಲ ಪ್ರದೇಶಗಳಲ್ಲಿ ಶುಕ್ರವಾರ ಬಿರುಗಾಳಿ ಸಹಿತ ಮಳೆಯಾಗಿದೆ. ಚಂಡಮಾರುತವು ದಕ್ಷಿಣದ 4 ರಾಜ್ಯಗಳನ್ನು ಕೇವಲ ಹಾದುಹೋಗಲಿದ್ದು, ಗುಜರಾತ್ ಮೇಲೆ ಮಾತ್ರವೇ ಅಪ್ಪಳಿಸಲಿದೆ. ಹೀಗಾಗಿ 4 ರಾಜ್ಯಗಳಲ್ಲಿ ಯಾವುದೇ ಹೆಚ್ಚಿನ ಅಪಾಯದ ಭೀತಿ ಇಲ್ಲ.
ಪ್ರಧಾನಿ ಸಭೆ:
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚಂಡಮಾರುತ ಎದುರಿಸಲು ಕೈಗೊಳ್ಳಲಾಗಿರುವ ಕ್ರಮಗಳನ್ನು ಪರಿಶೀಲಿಸಿದರು. ಸಭೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಗೃಹ ಸಚಿವಾಲಯ ಮತ್ತು ಇತರೆ ಕೆಲ ಸಚಿವಾಲಯಗಳ ಅಧಿಕಾರಿಗಳು ಕೂಡಾ ಭಾಗಿಯಾಗಿದ್ದರು.
ಹೆಚ್ಚುವರಿ ತುಕಡಿ:
ಇದೇ ವೇಳೆ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಒಟ್ಟಾರೆ 100 ತುಕಡಿಗಳನ್ನು ಪರಿಹಾರ ಕಾರ್ಯಗಳಿಗಾಗಿ ನಿಯೋಜಿಸಿದೆ. ಈ ಮೊದಲು 53 ತುಕಡಿ ನಿಯೋಜಿಸಲಾಗಿತ್ತು.