ಮುಂಬೈ/ಅಹಮದಾಬಾದ್(ಜೂ.03):  ಕೊರೋನಾ ವೈರಸ್‌ ಹಾವಳಿಯಿಂದ ಅತಿ ಹೆಚ್ಚು ಬಾಧಿತವಾಗಿರುವ ಮಹಾರಾಷ್ಟ್ರ ಹಾಗೂ ಗುಜರಾತ್‌ ರಾಜ್ಯಗಳಿಗೆ ಬುಧವಾರ ಚಂಡಮಾರುತ ಆಘಾತ ಎದುರಾಗುತ್ತಿದೆ. ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿರುವ ‘ನಿಸರ್ಗ’ ಹೆಸರಿನ ಚಂಡಮಾರುತ ಗಂಟೆಗೆ 120 ಕಿ.ಮೀ. ವೇಗದಲ್ಲಿ ಮಹಾರಾಷ್ಟ್ರ- ಗುಜರಾತ್‌ ಕರಾವಳಿಗೆ ಬುಧವಾರ ಮಧ್ಯಾಹ್ನ ಅಪ್ಪಳಿಸಲಿದೆ. ಮುಂಬೈ ಸನಿಹವೇ ಈ ಚಂಡಮಾರುತ ಹಾದುಹೋಗಲಿದ್ದು, 100 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ವಾಣಿಜ್ಯ ರಾಜಧಾನಿ ಚಂಡಮಾರುತವೊಂದಕ್ಕೆ ತುತ್ತಾಗುತ್ತಿದೆ.

ಚಂಡಮಾರುತ: ಕರಾವಳಿ ಭಾಗದಲ್ಲಿ ಸಮುದ್ರ ಪ್ರಕ್ಷುಬ್ಧ, ದಡಕ್ಕಪ್ಪಳಿಸಿದ ಬೃಹತ್ ಅಲೆಗಳು

ಚಂಡಮಾರುತದ ಪ್ರಭಾವದಿಂದ ಮಹಾರಾಷ್ಟ್ರ, ಗುಜರಾತ್‌, ಗೋವಾ ಹಾಗೂ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗಲಿದೆ. ಮುಂಬೈ ಸೇರಿ ಮಹಾರಾಷ್ಟ್ರದ 8 ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಗುಜರಾತ್‌ನಲ್ಲಿ 78 ಸಾವಿರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಎರಡೂ ರಾಜ್ಯಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 33 ತಂಡಗಳನ್ನು ನಿಯೋಜಿಸಲಾಗಿದೆ. ಮುಂಬೈನಲ್ಲಿ ಸಮುದ್ರ ತೀರದತ್ತ ಸುಳಿಯದಂತೆ ಜನರನ್ನು ನಿರ್ಬಂಧಿಸಲು ಗುರುವಾರದವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುಂಬೈನ ಆಸ್ಪತ್ರೆಯೊಂದರಲ್ಲಿ ಇದ್ದ ಕೊರೋನಾ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಈ ನಡುವೆ, ಚಂಡಮಾರುತ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪರಾಮರ್ಶಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹಾಗೂ ಗುಜರಾತಿನ ವಿಜಯ್‌ ರೂಪಾನಿ ಮತ್ತು ದಿಯು- ದಮನ್‌, ದಾದ್ರಾ- ನಗರಹವೇಲಿ ಅಧಿಕಾರಿಗಳ ಜತೆಗೆ ದೂರವಾಣಿಯಲ್ಲಿ ಸಮಾಲೋಚನೆ ನಡೆಸಿದ್ದಾರೆ.

ಗಂಡನ ಕಳೆದುಕೊಂಡ ಮಹಿಳೆಗೆ ಅಂಫಾನ್‌ ಆಘಾ​ತ: ಹೆತ್ತ ಮಕ್ಕಳ ಸೇರಲು ತಾಯಿಯ ಪರದಾಟ..!

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಅಂಫಾನ್‌ ಚಂಡಮಾರುತ ಮೇ 20ರಂದು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿತ್ತು. 100 ಮಂದಿ ಸಾವಿಗೀಡಾಗಿದ್ದರು. ಅಪಾರ ಹಾನಿ ಸಂಭವಿಸಿತ್ತು. ಅದಾದ 15 ದಿನದಲ್ಲೇ ದೇಶಕ್ಕೆ ಮತ್ತೊಂದು ಚಂಡಮಾರುತ ಅಪ್ಪಳಿಸುತ್ತಿದೆ. ಈ ಚಂಡಮಾರುತಕ್ಕೆ ‘ನಿಸರ್ಗ’ ಎಂಬ ಹೆಸರನ್ನು ಬಾಂಗ್ಲಾದೇಶ ಸೂಚಿಸಿದೆ.

ಬಂಗಾಳ ಕೊಲ್ಲಿಯಲ್ಲಿ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಚಂಡಮಾರುತ ಸೃಷ್ಟಿಯಾಗಿ ಅದು ಒಡಿಶಾ, ಆಂಧ್ರಪ್ರದೇಶ ಅಥವಾ ತಮಿಳುನಾಡಿಗೆ ಅಪ್ಪಳಿಸುವುದು ಸರ್ವೇಸಾಮಾನ್ಯ. ಅರಬ್ಬೀ ಸಮುದ್ರದಲ್ಲಿ ವರ್ಷಕ್ಕೆ ಒಂದು ಅಥವಾ ಎರಡು ಚಂಡಮಾರುತ ಸೃಷ್ಟಿಯಾಗುತ್ತವಾದರೂ, ಅವು ಭಾರತದ ಕರಾವಳಿಗೆ ಅಪ್ಪಳಿಸುವ ಸಂಭವ ಕಡಿಮೆ. ಹೆಚ್ಚಾಗಿ ಒಮಾನ್‌ನತ್ತ ಅವರು ಕ್ರಮಿಸಿಬಿಡುತ್ತವೆ.