ತಮಿಳುನಾಡಿಗೆ ಲಗ್ಗೆ ಇಟ್ಟಿರುವ ದಿತ್ವಾ ಚಂಡಮಾರುತ ಅಪಾರ ಸಾವುನೋವು, ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿದ್ದು, ಭಾನುವಾರ ಮಳೆ ಸಂಬಂಧಿತ ಅವಘಡದಿಂದಾಗಿ ಮೂವರು ಮೃತಪಟ್ಟಿದ್ದಾರೆ. ಆಂಧ್ರಪ್ರದೇಶ ಹಾಗೂ ಕರ್ನಾಟಕದ ದಕ್ಷಿಣ ಒಳನಾಡಿನಲ್ಲೂ ಮಳೆ ಸುರಿದಿದೆ.

ಚೆನ್ನೈ: ತಮಿಳುನಾಡಿಗೆ ಲಗ್ಗೆ ಇಟ್ಟಿರುವ ದಿತ್ವಾ ಚಂಡಮಾರುತ ಅಪಾರ ಸಾವುನೋವು, ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿದ್ದು, ಭಾನುವಾರ ಮಳೆ ಸಂಬಂಧಿತ ಅವಘಡದಿಂದಾಗಿ ಮೂವರು ಮೃತಪಟ್ಟಿದ್ದಾರೆ. ಆಂಧ್ರಪ್ರದೇಶ ಹಾಗೂ ಕರ್ನಾಟಕದ ದಕ್ಷಿಣ ಒಳನಾಡಿನಲ್ಲೂ ಮಳೆ ಸುರಿದಿದೆ.

ಆದರೆ ಈ ಚಂಡಮಾರುತವು ತಮಿಳುನಾಡು ಕರಾವಳಿಗೆ ಅಪ್ಪಳಿಸುವ ಮುನ್ನವೇ ವಾಯುಭಾರ ಕುಸಿತವಾಗಿ ದುರ್ಬಲಗೊಂಡಿದೆ. ಹೀಗಾಗಿ ಭಾರಿ ವಿನಾಶದಿಂದ ತಮಿಳುನಾಡು ಪಾರಾಗಿದೆ.

ತಮಿಳ್ನಾಡಲ್ಲಿ 3 ಬಲಿ:

ಶನಿವಾರ ಸಂಜೆಯಿಂದ ಮಳೆ ಸಂಬಂಧಿತ ಘಟನೆಗಳಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ತೂತ್ತುಕುಡಿ ಮತ್ತು ತಂಜಾವೂರಿನಲ್ಲಿ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದರೆ, ಮೈಲಾಡುತುರೈನಲ್ಲಿ 20 ವರ್ಷದ ಯುವಕ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾನೆ ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸತ್ತೂರು ರಾಮಚಂದ್ರನ್‌ ಮಾಹಿತಿ ನೀಡಿದ್ದಾರೆ.

ಡೆಲ್ಟಾ ಜಿಲ್ಲೆಗಳಲ್ಲಿ (ಕಾವೇರಿ ತೀರದ ಜಿಲ್ಲೆಗಳು) 149 ಜಾನುವಾರುಗಳು ಸಾವನ್ನಪ್ಪಿದ್ದು, 57,000 ಹೆಕ್ಟೇರ್ ಕೃಷಿಭೂಮಿಗೆ ಹಾನಿಯಾಗಿದೆ. ಸುಮಾರು 234 ಗುಡಿಸಲುಗಳು ಹಾನಿಗೊಳಗಾಗಿವೆ ಎಂದು ಅವರು ತಿಳಿಸಿದ್ದಾರೆ.

ವಿಪತ್ತು ನಿರ್ವಹಣೆಗೆ ಕ್ರಮ:

ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಸಂತ್ರಸ್ತರ ನೆರವಿಗಾಗಿ 28 ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ. ಇತರ ರಾಜ್ಯಗಳಿಂದಲೂ 10 ತಂಡಗಳು ರಕ್ಷಣಾ ಕಾರ್ಯಕ್ಕಾಗಿ ಧಾವಿಸಿವೆ. ನಿಯಂತ್ರಣ ಕೊಠಡಿಯ ಮೂಲಕ ಸರ್ಕಾರವು ಮಳೆಪೀಡಿತ ಪ್ರದೇಶಗಳ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದೆ.

ಎಲ್ಲಿ ಎಷ್ಟು ಮಳೆ?:ಕಳೆದ 24 ಗಂಟೆಗಳಲ್ಲಿ ಪುದುಚೇರಿಯ ಕಾರೈಕಲ್‌ನಲ್ಲಿ ಅತಿ ಹೆಚ್ಚು 19 ಸೆಂ.ಮೀ. ಮಳೆಯಾಗಿದ್ದು, ಮೈಲಾಡುತುರೈ ಜಿಲ್ಲೆಯ ಸೆಂಬನಾರ್ಕೊಯಿಲ್‌ನಲ್ಲಿ ಭಾನುವಾರ17 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.

ದಿತ್ವಾ ಅಬ್ಬರ: ಶ್ರೀಲಂಕಾದಲ್ಲಿ ಸಾವಿನ ಸಂಖ್ಯೆ 330ಕ್ಕೆ ಏರಿಕೆ 

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದ ಅಬ್ಬರ ಮುಂದುವರಿದಿದ್ದು, ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ ಭಾನುವಾರ 330ಕ್ಕೆ ಏರಿಕೆಯಾಗಿದೆ.ಶ್ರೀಲಂಕಾದ ವಿಪತ್ತು ನಿರ್ವಹಣಾ ಕೇಂದ್ರ (ಡಿಎಂಸಿ) ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಭಾನುವಾರ ಮಧ್ಯಾಹ್ನ 12 ಗಂಟೆವರೆಗೆ ಪ್ರವಾಹ ಹಾಗೂ ಭೂಕುಸಿತಕ್ಕೆ ಸಿಲುಕಿ ಸಾವಿಗೀಡಾದವರ ಸಂಖ್ಯೆ 330ಕ್ಕೆ ತಲುಪಿದೆ. ಸುಮಾರು 228 ಮಂದಿ ಕಣ್ಮರೆಯಾಗಿದ್ದಾರೆ. 2,66,114 ಕುಟುಂಬಗಳ 9,68,304 ಜನರು ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತ್ರಸ್ತರ ನೆರವಿಗಾಗಿ 919 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಕಟ್ಟೆಚ್ಚರ ಘೋಷಣೆ:

ಚಂಡಮಾರುತದ ಪರಿಣಾಮವಾಗಿ ಕೆಲಾನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ರಾಜಧಾನಿ ಕೋಲಂಬೊದ ಹೆಚ್ಚಿನ ಪೂರ್ವ ಉಪನಗರಗಳಿಗೆ ಕಟ್ಟೆಚ್ಚರ ಘೋಷಿಸಲಾಗಿದೆ. ಅಪಾಯಕಾರಿ ಸ್ಥಳಗಳಲ್ಲಿರುವವರಿಗೆ ಸುರಕ್ಷಿತ ಜಾಗಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಭಾರತದ ನೆರವು:

ಪ್ರವಾಹದಿಂದ ನಲುಗುತ್ತಿರುವ ಶ್ರೀಲಂಕಾಕ್ಕೆ ಭಾರತ ನೆರವಿನ ಹಸ್ತ ಮುಂದುವರಿಸಿದೆ. ಆಪರೇಷನ್‌ ಸಾಗರ ಬಂಧು ಅಡಿಯಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ 80 ಸಿಬ್ಬಂದಿಯನ್ನು ಲಂಕಾಕ್ಕೆ ಕಳಿಸಿದೆ. ಸಂತ್ರಸ್ತರಿಗೆ ಆಹಾರ, ಔಷಧ ಸೇರಿ ಅಗತ್ಯ ವಸ್ತುಗಳನ್ನು ತಲುಪಿಸಲಾಗಿದೆ.

400 ಭಾರತೀಯರ ರಕ್ಷಣೆ:ವಾಯುಪಡೆಯ ನೆರವಿನೊಂದಿಗೆ, ಶ್ರೀಲಂಕಾದಲ್ಲಿ ಸಿಲುಕಿದ್ದ 400 ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕಳಿಸಲಾಗಿದೆ.

ಭಾರತದಿಂದ ಪಾಕ್‌ ಪ್ರಜೆ ರಕ್ಷಣೆ:ಭಾರತೀಯ ವಾಯುಪಡೆ ಶ್ರೀಲಂಕಾದಲ್ಲಿ ಮಾನವೀಯ ದೃಷ್ಟಿಯಿಂದ ಭರಪೂರ ರಕ್ಷಣಾ ಕಾರ್ಯ ಕೈಗೊಂಡಿದ್ದು, ಒಬ್ಬ ಪಾಕ್‌ ಪ್ರಜೆಯನ್ನೂ ರಕ್ಷಿಸಿದೆ.