ಕೆಲವು ಭಾರತೀಯರು ನಮ್ಮ ದೇಶೀಯ ಭಾಷೆಗಳನ್ನು ಮತ್ತು ತಮ್ಮ ಮಾತೃಭಾಷೆಯನ್ನು ಮರೆಯುತ್ತಿದ್ದಾರೆ. ಅನೇಕ ಮಕ್ಕಳಿಗೆ ತಮ್ಮ ಮಾತೃಭಾಷೆಯ ಸರಳ ಪದಗಳೂ ಗೊತ್ತಿಲ್ಲ. ಇಲ್ಲಿನ ಭಾಷೆಯಾದ ಸಂಸ್ಕೃತವನ್ನು ಅಮೆರಿಕದ ಪ್ರಾಧ್ಯಾಪಕರಿಂದ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಡಾ. ಮೋಹನ್ ಭಾಗ್ವತ್‌ ಕಳವಳ

ನಾಗ್ಪುರ : ಕೆಲವು ಭಾರತೀಯರು ನಮ್ಮ ದೇಶೀಯ ಭಾಷೆಗಳನ್ನು ಮತ್ತು ತಮ್ಮ ಮಾತೃಭಾಷೆಯನ್ನು ಮರೆಯುತ್ತಿದ್ದಾರೆ. ಅನೇಕ ಮಕ್ಕಳಿಗೆ ತಮ್ಮ ಮಾತೃಭಾಷೆಯ ಸರಳ ಪದಗಳೂ ಗೊತ್ತಿಲ್ಲ. ಇಲ್ಲಿನ ಭಾಷೆಯಾದ ಸಂಸ್ಕೃತವನ್ನು ಅಮೆರಿಕದ ಪ್ರಾಧ್ಯಾಪಕರಿಂದ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಡಾ. ಮೋಹನ್ ಭಾಗ್ವತ್‌ ಭಾನುವಾರ ಕಳವಳ ವ್ಯಕ್ತಪಡಿಸಿದ್ದಾರೆ.

ನಾಗ್ಪುರದಲ್ಲಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ

ನಾಗ್ಪುರದಲ್ಲಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಿತ್ಯ ಸಂವಹನಕ್ಕಾಗಿ ಸಂಸ್ಕೃತವನ್ನು ಬಳಸುವ ಕಾಲವೊಂದಿತ್ತು. ಈಗ ಅಮೆರಿಕದ ಪ್ರಾಧ್ಯಾಪಕರು ನಮಗೆ ಕಲಿಸುತ್ತಿದ್ದಾರೆ. ವಾಸ್ತವವಾಗಿ ಸಂಸ್ಕೃತವನ್ನು ನಾವು ಜಗತ್ತಿಗೆ ಕಲಿಸಬೇಕಿತ್ತು. ಅನೇಕ ಮಕ್ಕಳಿಗೆ ತಮ್ಮ ಮಾತೃಭಾಷೆಯ ಸರಳ ಪದಗಳೇ ಗೊತ್ತಿಲ್ಲ. ಮನೆಯಲ್ಲಿ ಮಾತೃಭಾಷೆ ಮತ್ತು ಇಂಗ್ಲಿಷ್ ಮಿಶ್ರಣ ಮಾಡಿ ಮಾತಾಡುತ್ತಾರೆ. ಪರಿಸ್ಥಿತಿ ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ ಕೆಲವು ಭಾರತೀಯರಿಗೆ ನಮ್ಮದೇ ಆದ ಭಾರತೀಯ ಭಾಷೆಗಳು ತಿಳಿದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತೀಯ ಭಾಷೆಗಳನ್ನು ಮಾತನಾಡಲು ಹಿಂಜರಿಯುವುದು ತಪ್ಪು

‘ಇಂಗ್ಲಿಷ್ ಮಾಧ್ಯಮ ಶಿಕ್ಷಣ ತಪ್ಪಲ್ಲ, ಆದರೆ ಭಾರತೀಯ ಭಾಷೆಗಳನ್ನು ಮಾತನಾಡಲು ಹಿಂಜರಿಯುವುದು ತಪ್ಪು. ನಾವು ನಮ್ಮ ಮನೆಯಲ್ಲಿ ನಮ್ಮ ಭಾಷೆಯನ್ನು ಸರಿಯಾಗಿ ಮಾತನಾಡಿದರೆ, ಪರಿಸ್ಥಿತಿ ಉತ್ತಮವಾಗುತ್ತದೆ’ ಎಂದು ಸಲಹೆ ನೀಡಿದರು.