ವಾಷಿಂಗ್ಟನ್‌(ಫೆ.02): ಭಾರತದ ಮೇಲೆ ಸೈಬರ್‌ ದಾಳಿಗೆ ಪದೇಪದೇ ಯತ್ನಿಸುತ್ತಿರುವ ಚೀನಾ, ಗಲ್ವಾನ್‌ ಗಣಿವೆ ಸಂಘರ್ಷ ಬಳಿಕ ಅಂದರೆ ಕಳೆದ ವರ್ಷದ ಮಧ್ಯಭಾಗದ ನಂತರ ಭಾರತದ ವಿದ್ಯುತ್‌ ಸಂಪರ್ಕ ಜಾಲವನ್ನು ಹಾಳುಗೆಡವಲು ತನ್ನ ಹ್ಯಾಕರ್‌ಗಳ ಮೂಲಕ ನಿರಂತರವಾಗಿ ಯತ್ನಿಸಿತ್ತು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಅಲ್ಲದೆ, ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇಡೀ ಮುಂಬೈನ ವಿದ್ಯುತ್‌ ವ್ಯವಸ್ಥೆ ಕೆಟ್ಟು 2 ತಾಸು ಎಲ್ಲಾ ಚಟುವಟಿಕೆಗಳು ಸ್ತಬ್ಧಗೊಂಡಿದ್ದರ ಹಿಂದೆಯೂ ಇದೇ ಸೈಬರ್‌ ದಾಳಿಯ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ.

ಬೇರೆ ಬೇರೆ ದೇಶಗಳು ಇಂಟರ್ನೆಟ್‌ ಅನ್ನು ಹೇಗೆ ಬಳಸುತ್ತವೆ ಎಂಬ ಬಗ್ಗೆ ಅಧ್ಯಯನ ನಡೆಸುವ ಅಮೆರಿಕದ ಮೆಸಾಚುಸೆಟ್ಸ್‌ನ ‘ರೆಕಾರ್ಡೆಡ್‌ ಫä್ಯಚರ್‌’ ಎಂಬ ಕಂಪನಿ ಈ ಕುರಿತು ವರದಿ ಬಿಡುಗಡೆ ಮಾಡಿದೆ. ಅದರಲ್ಲಿ, ಭಾರತದ ವಿದ್ಯುತ್‌ ಜಾಲದ ಮೇಲೆ ಸೈಬರ್‌ ದಾಳಿ ನಡೆಸಲು ಚೀನಾ ಸರ್ಕಾರವು ರೆಡ್‌ಇಕೋ ಎಂಬ ಹ್ಯಾಕರ್‌ಗಳ ಸಮೂಹದ ಜೊತೆಗೆ ಸೇರಿಕೊಂಡು ನಡೆಸಿದ ದುಸ್ಸಾಹಸಗಳ ಬಗ್ಗೆ ವಿವರಗಳಿವೆ.

ಆದರೆ, ಭಾರತ ಸರ್ಕಾರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು, ಚೀನಾದ ವಿದೇಶಾಂಗ ಇಲಾಖೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಇದು ಆಧಾರರಹಿತ, ದುರುದ್ದೇಶಪೂರಿತ, ಬೇಜವಾಬ್ದಾರಿ ಆರೋಪ. ಚೀನಾ ಯಾವಾಗಲೂ ಸೈಬರ್‌ ಭದ್ರತೆಯನ್ನು ಎತ್ತಿಹಿಡಿಯುತ್ತದೆ. ನಾವು ಯಾವುದೇ ರೀತಿಯ ಸೈಬರ್‌ ದಾಳಿಯನ್ನು ವಿರೋಧಿಸುತ್ತೇವೆ’ ಎಂದು ಹೇಳಿದೆ. ಈ ನಡುವೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಪರಿಣಾಮ ವಿದ್ಯುತ್‌ ಜಾಲದ ಕಾರ್ಯನಿರ್ವಣೆಯಲ್ಲಿ ಯಾವುದೇ ಅಡ್ಡಿಯಾಗಿರಲಿಲ್ಲ ಎಂದು ಕೇಂದ್ರ ಇಂಧನ ಇಲಾಖೆ ಪ್ರತಿಕ್ರಿಯಿಸಿದ್ದರೆ, ಮುಂಬೈನಲ್ಲಿ ನಡೆದ ವಿದ್ಯುತ್‌ ವ್ಯತ್ಯಯದ ಹಿಂದೆ ಚೀನಾ ಕೈವಾಡ ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ ಎಂದು ಮಹಾರಾಷ್ಟ್ರದ ಇಂಧನ ಸಚಿವ ನಿತಿನ್‌ ರಾವತ್‌ ಖಚಿತಪಡಿಸಿದ್ದಾರೆ.

ಮುಂಬೈ ಬ್ಲ್ಯಾಕೌಟ್‌ಗೆ ಇದೇ ಕಾರಣ?

ಚೀನಾದ ಸೈಬರ್‌ ದಾಳಿಯ ಕುರಿತು ರೆಕಾರ್ಡೆಡ್‌ ಫä್ಯಚರ್‌ ಕಂಪನಿಯ ವರದಿ ಆಧಾರದ ಮೇಲೆ ಅಮೆರಿಕದ ನ್ಯೂಯಾರ್ಕ್ ಟೈಮ್ಸ್‌ ಪತ್ರಿಕೆ ವರದಿಯೊಂದನ್ನು ಪ್ರಕಟಿಸಿದೆ. ಅದರಲ್ಲಿ, ವಿದ್ಯುತ್‌ ಜಾಲದ ಮೇಲಿನ ಸೈಬರ್‌ ದಾಳಿಯ ಮೂಲಕ ಚೀನಾ ಸರ್ಕಾರವು ಭಾರತ ತನ್ನ ಗಡಿಯಲ್ಲಿ ಬಿಗಿ ನಿಲುವು ತಾಳಿದರೆ ತಕ್ಕ ಶಾಸ್ತಿ ಮಾಡುತ್ತೇನೆ ನೋಡಿ ಎಂಬುದನ್ನು ತೋರಿಸಲು ಹೀಗೆ ಮಾಡಿರಬಹುದು. 2020ರ ಅಕ್ಟೋಬರ್‌ 12ರಂದು ಮುಂಬೈನಲ್ಲಿ ಭಾರಿ ಪ್ರಮಾಣದ ವಿದ್ಯುತ್‌ ನಿಲುಗಡೆಗೂ ಇದೇ ದಾಳಿ ಕಾರಣವಿರಬಹುದು ಎಂದು ಹೇಳಿದೆ.

ಚೀನಾ ಕುತಂತ್ರ ಹೇಗೆ ಪತ್ತೆ?

ಅಮೆರಿಕದ ರೆಕಾರ್ಡೆಡ್‌ ಫä್ಯಚರ್‌ ಕಂಪನಿಯು ಬೇರೆ ಬೇರೆ ದೇಶಗಳಲ್ಲಿ ಇಂಟರ್ನೆಟ್‌ ಬಳಕೆ ಹೇಗಾಗುತ್ತದೆಯೆಂಬುದರ ಮೇಲೆ ಅತ್ಯಾಧುನಿಕ ಸೈಬರ್‌ ಉಪಕರಣ ಬಳಸಿ ಸದಾ ಕಣ್ಣಿಟ್ಟಿರುತ್ತದೆ. 2020ರ ಮಧ್ಯಭಾಗದ ನಂತರ ಭಾರತದ ವಿದ್ಯುತ್‌ ಜಾಲವನ್ನು ಗುರಿಯಾಗಿಸಿಕೊಂಡು ಚೀನಾದ ಹ್ಯಾಕರ್‌ಗಳು ನಿರಂತರವಾಗಿ ದಾಳಿ ನಡೆಸಿದ್ದು ಈ ಉಪಕರಣಗಳ ಮೂಲಕ ಪತ್ತೆಯಾಗಿದೆ.

ಭಾರತದಿಂದಲೂ ಚೀನಾ ಮೇಲೆ ಸೈಬರ್‌ ಪ್ರತಿದಾಳಿ?

ಭಾರತದ ಮೇಲೆ ಚೀನಾದ ಹ್ಯಾಕರ್‌ಗಳು ನಿರಂತರವಾಗಿ ಸೈಬರ್‌ ದಾಳಿ ನಡೆಸುತ್ತಿರುವುದಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಕೂಡ ತನ್ನದೇ ರಹಸ್ಯ ಹ್ಯಾಕರ್‌ಗಳ ಪಡೆಯ ಮೂಲಕ ಚೀನಾ ಮೇಲೆ ಸೈಬರ್‌ ದಾಳಿ ನಡೆಸಲು ಯತ್ನಿಸುತ್ತಿದೆ ಎಂದೂ ರೆಕಾರ್ಡೆಡ್‌ ಫä್ಯಚರ್‌ ತನ್ನ ವರದಿಯಲ್ಲಿ ಹೇಳಿದೆ. ಸೈಡ್‌ವಿಂಡರ್‌ ಎಂಬ ಹ್ಯಾಕರ್‌ ಸಮೂಹದ ಮೂಲಕ ಭಾರತವು 2020ರಲ್ಲಿ ಚೀನಾದ ಮಿಲಿಟರಿ ಹಾಗೂ ಸರ್ಕಾರಿ ಸಂಸ್ಥೆಗಳ ಮೇಲೆ ದಾಳಿ ನಡೆಸಲು ಯತ್ನಿಸಿರುವ ಬಗ್ಗೆ ಅನುಮಾನಗಳಿವೆ ಎಂದು ಅಭಿಪ್ರಾಯಪಟ್ಟಿದೆ.