ನವದೆಹಲಿ(ಜ.22): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ. ಅರ್ನಬ್ ಗೋಸ್ವಾಮಿಯ ವಾಟ್ಸಾಪ್ ಚಾಟ್‌ ಎಂದು ಹೇಳಲಾಗುತ್ತಿರುವ ಸೋರಿಕೆಯಾದ ಮೆಸೇಜ್‌ಗಳ ಕುರಿತಾಗಿ ಮಾತನಾಡಿರುವ ಸೋನಿಯಾ ಗಾಂಧಿ ಬೇರೆಯವರಿಗೆ ರಾಷ್ಟ್ರಭಕ್ತಿ, ರಾಷ್ಟ್ರೀಯತೆ, ರಾಷ್ಟ್ರಪ್ರೇಮದ ಪ್ರಮಾಣ ಪತ್ರ ನೀಡುವವರ ಮುಖವಾಡ ಇಂದು ಸಂಪೂರ್ಣವಾಗಿ ಕಳಚಿದೆ ಎಂದಿದ್ದಾರೆ.

ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ ಸರ್ಕಾರ ರೈತ ಸಂಘಟನೆ ಜೊತೆ ಮಾತುಕತೆಯ ನೆಪ ನೀಡಿ ಗಾಬರಿಗೊಳಿಸುವ ಅಸಂವೇದನಾಶೀಲತೆ ಹಾಗೂ ಅಹಂಕಾರ ತೋರಿಸುತ್ತಿದೆ ಎಂದು ಆರೋಪಿಸಿದ್ದಾರೆ. 

ರೈತರ ಪರ ಅಸಂವೇದನಾಶೀಲತೆ: 

ಇನ್ನು ಒಂದೇ ತಿಂಗಳಲ್ಲಿ ಸಂಸತ್ ಅಧಿವೇಶನ ಆರಂಭವಾಗಲಿದೆ. ಇದು ಬಜೆಟ್ ಅಧಿವೇಶನ, ಹೀಗಿರುವಾಗ ಜನಪರವಾದ ಅನೇಕ ವಿಚಾರಗಳ ಕುರಿತು ಸಂಪೂರ್ಣವಾಗಿ ಚರ್ಚೆ ನಡೆಸುವ ಅಗತ್ಯವಿದೆ ಎಂದಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ಒಲವು ತೋರುತ್ತದಾ ಎಂದು ಕಾದು ನೋಡಬೇಕು ಎಂದಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನು ಕುರಿತು ಉಲ್ಲೇಖಿಸಿರುವ ಸೋನಿಯಾ ಗಾಂಧಿ ರೈತ ಚಳುವಳಿ ಮುಂದುವರೆದಿದೆ. ಸರ್ಕಾರ ರೈತ ಸಂಘಟನೆ ಜೊತೆ ಮಾತುಕತೆಯ ನೆಪ ನೀಡಿ ಗಾಬರಿಗೊಳಿಸುವ ಅಸಂವೇದನಾಶೀಲತೆ ಹಾಗೂ ಅಹಂಕಾರ ತೋರಿಸುತ್ತಿದೆ ಎಂದು ಆರೋಪಿಸಿದ್ದಾರೆ.