Asianet Suvarna News Asianet Suvarna News

ದೆಹಲಿ ರಕ್ಷಣೆಗೆ ಬಂತು ಕ್ಯಾಟ್‌ ಪಡೆ: 50 ಕಮಾಂಡೋಗಳ ವಿಶೇಷ ಪಡೆ ರಚನೆ

ಸದಾ ಉಗ್ರರ ದಾಳಿ ಭೀತಿ ಎದುರಿಸುತ್ತಿರುವ ರಾಜಧಾನಿಯನ್ನು ದುಷ್ಕೃತ್ಯಗಳಿಂದ ರಕ್ಷಿಸಲೆಂದೇ 50 ಯುವ ಕಮಾಂಡೋಗಳನ್ನು ಒಳಗೊಂಡ ಕ್ವಿಕ್‌ ಆ್ಯಕ್ಷನ್‌ ಟೀಮ್‌ (ಕ್ಯಾಟ್‌) ಎಂಬ ವಿಶೇಷ ಪಡೆಯೊಂದನ್ನು ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ರಚಿಸಿದೆ. 

CRPF sets up specialised QAT for Delhi to deal with terror acts gvd
Author
Bangalore, First Published Jan 19, 2022, 2:40 AM IST

ನವದೆಹಲಿ (ಜ.19): ಸದಾ ಉಗ್ರರ ದಾಳಿ (Terrorists Attack) ಭೀತಿ ಎದುರಿಸುತ್ತಿರುವ ರಾಜಧಾನಿಯನ್ನು ದುಷ್ಕೃತ್ಯಗಳಿಂದ ರಕ್ಷಿಸಲೆಂದೇ 50 ಯುವ ಕಮಾಂಡೋಗಳನ್ನು ಒಳಗೊಂಡ ಕ್ವಿಕ್‌ ಆ್ಯಕ್ಷನ್‌ ಟೀಮ್‌ (ಕ್ಯಾಟ್‌) ಎಂಬ ವಿಶೇಷ ಪಡೆಯೊಂದನ್ನು ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ರಚಿಸಿದೆ. ಇದು ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಉಗ್ರರು ಮತ್ತು ಆತ್ಮಾಹುತಿ ದಾಳಿಯಂಥ ಘಟನೆಯನ್ನು ನಿಗ್ರಹಿಸಲು ನಿಯೋಜಿತವಾಗಲಿದೆ.

ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟಹಾಕಲೆಂದೇ ಸಿಆರ್‌ಪಿಎಫ್‌ (CRPF) ಕ್ಯಾಟ್‌ ತಂಡವೊಂದನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ದೆಹಲಿಗೂ ಇಂಥದ್ದೊಂದು ತಂಡವನ್ನು ರಚಿಸುವ ಮೂಲಕ ರಾಜಧಾನಿಗೆ ರಕ್ಷಣೆ ನೀಡಲು ಸಿಆರ್‌ಪಿಎಫ್‌ ಮುಂದಾಗಿದೆ. ಈ ತಂಡ ದೆಹಲಿಯಲ್ಲೇ ಬೀಡುಬಿಡಲಿದ್ದು, ಯಾವುದೇ ದುಷ್ಕೃತ್ಯದ ಸಮಯದಲ್ಲಿ ಸರ್ಕಾರದ ಆದೇಶ ಹೊರಬೀಳುತ್ತಲೇ ಸ್ಥಳಕ್ಕೆ ಧಾವಿಸಲಿದೆ.

ಯಾರ್ಯಾರು?: ಕಾಶ್ಮೀರ ಹಾಗೂ ಛತ್ತೀಸ್‌ಗಢದಲ್ಲಿ ಉಗ್ರ ನಿಗ್ರಹ, ನಕ್ಸಲ್‌ ನಿಗ್ರಹ ಕಾರ್ಯಾಚರಣೆಯಲ್ಲಿ ಹಲವು ಬಾರಿ ಪಾಲ್ಗೊಂಡ ಅನುಭವ ಇರುವ ಸಿಆರ್‌ಪಿಎಫ್‌ ತಂಡದ ಪೈಕಿ 50 ಯುವ ಯೋಧರನ್ನು ಆಯ್ಕೆ ಮಾಡಿ ಈ ಹೊಸ ಕಮಾಂಡೋ ಪಡೆ ರಚಿಸಲಾಗಿದೆ. ಇದರಲ್ಲಿ ಹಲವು ಶೌರ್ಯ ಪದಕ ಪುರಸ್ಕೃತರು ಕೂಡಾ ಸೇರಿದ್ದಾರೆ.

ಭಾರತೀಯ ನೌಕಾಪಡೆಯ INS ರಣ್‌ವೀರ್‌ನಲ್ಲಿ ಸ್ಫೋಟ, ಮೂವರು ಅಧಿಕಾರಿಗಳ ಸಾವು!

ತರಬೇತಿ: ಈ ಕಮಾಂಡೋಗಳಿಗೆ ಕಾಶ್ಮೀರದಲ್ಲಿ ಹಲವು ವರ್ಷ ಕಾರ್ಯಾಚರಣೆ ನಡೆಸಿ ಅನುಭವ ಹೊಂದಿರುವ ಹಿರಿಯ ಅಧಿಕಾರಿಗಳು ಈಗಾಗಲೇ ಹಲವು ತಿಂಗಳು ನಾನಾ ರೀತಿಯ ತರಬೇತಿ ನೀಡಿದ್ದಾರೆ. ಜೊತೆಗೆ ಇವರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಕೆ, ಸುಧಾರಿತ ಸ್ಪೋಟಕ ಪತ್ತೆ, ಅವುಗಳನ್ನು ನಿಷ್ಕ್ರಿಯಗೊಳಿಸುವುದು, ನಗರ ಪ್ರದೇಶಗಳ ಜನನಿಬಿಢ ಸ್ಥಳಗಳು, ಎತ್ತರದ ಕಟ್ಟಡಗಳಲ್ಲಿ ಕಾರ್ಯಚರಣೆ ಕುರಿತು ತರಬೇತಿ ನೀಡಲಾಗಿದೆ.

ಅತ್ಯಾಧುನಿಕ ಶಸ್ತ್ರಾಸ್ತ್ರ: ಈ ತಂಡಕ್ಕೆ ಎಂಪಿ-5 ಸಬ್‌ಮಷಿನ್‌ ಗನ್‌, ಸ್ನಿಪರ್‌ ರೈಫಲ್‌, ಲೈಟ್‌ ಮಷಿನ್‌ ಗನ್‌, ಎಕೆ-47 ಗನ್‌, ಕಾರ್ನರ್‌ ಶಾಟ್‌, ಅಂಡರ್‌ ಬ್ಯಾರಲ್‌ ಗ್ರೆನೇಡ್‌ ಲಾಂಚರ್‌, ರಾತ್ರಿ ವೇಳೆ ವೀಕ್ಷಿಸಲು ಅನುವು ಮಾಡಿಕೊಡುವ ಕನ್ನಡಕ, ರಾಡಾರ್‌, ಇನ್‌ ವಾಲ್‌ ಸ್ಕಾ್ಯನರ್‌, ರೋಬೋಟ್‌ಗಳನ್ನು ಒದಗಿಸಲಾಗಿದೆ.

ಹೊಸ ತಂಡ ಏಕೆ?: ದೆಹಲಿಯಲ್ಲಿ ಈಗಾಗಲೇ ಎನ್‌ಎಸ್‌ಜಿ ಸೇರಿ ಹಲವು ಭಯೋತ್ಪಾದನಾ ನಿಗ್ರಹ ದಳಗಳು ಇವೆಯಾದರೂ, ಸಿಆರ್‌ಪಿಎಫ್‌ನಿಂದ ಆಯ್ಕೆ ಮಾಡಲಾದ ಯೋಧರಿಗೆ ಈಗಾಗಲೇ ಉಗ್ರ ನಿಗ್ರಹ, ನಕ್ಸಲ್‌ ನಿಗ್ರಹ, ಸ್ಪೋಟಕ ಪದಾರ್ಥಗಳ ನಿರ್ವಹಣೆಯ ಖುದ್ದು ಅನುಭವ ಇದೆ. ಈ ಅನುಭವ ಹೆಚ್ಚು ಉಪಯೋಗಕ್ಕೆ ಬರಲಿದೆ ಎಂಬುದು ಹೊಸ ತಂಡ ರಚನೆಯ ಹಿಂದಿನ ಉದ್ದೇಶ.

Pulwama Attack: ಪುಲ್ವಾಮಾ ದಾಳಿಯ ಕಡೆಯ ಉಗ್ರನೂ ಯೋಧರಿಗೆ ಬಲಿ?

ಗಣರಾಜ್ಯಕ್ಕೆ ಮೊದಲ ಭದ್ರತೆ: ಜ.26ರಂದು ರಾಜಧಾನಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಉಗ್ರ ದಾಳಿಯ ಭೀತಿ ಇರುವ ಹಿನ್ನೆಲೆಯಲ್ಲಿ ಕ್ಯಾಟ್‌ ಪಡೆಯನ್ನು 2 ತಂಡಗಳಾಗಿ ವಿಂಗಡಿಸಿ ಈಗಾಗಲೇ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಇದು ಗಣರಾಜ್ಯೋತ್ಸವಕ್ಕೆ ಒದಗಿಸುವ ಭದ್ರತೆಯನ್ನು ಮತ್ತಷ್ಟುಹೆಚ್ಚಿಸಿದೆ.

Follow Us:
Download App:
  • android
  • ios