ಬಾಲಾಪರಾಧಿ ದೊಡ್ಡವನಾದ ಮೇಲೆ ಸರ್ಕಾರಿ ಕೆಲಸಕ್ಕೆ ಅರ್ಹ!
ಬಾಲಾಪರಾಧಿ ದೊಡ್ಡವನಾದ ಮೇಲೆ ಸರ್ಕಾರಿ ಕೆಲಸಕ್ಕೆ ಅರ್ಹ| ಕ್ರಿಮಿನಲ್ ಹಿನ್ನೆಲೆಯ ಕಾರಣ ನೀಡಿ ನೌಕರಿ ನಿರಾಕರಿಸುವಂತಿಲ್ಲ: ಸುಪ್ರೀಂಕೋರ್ಟ್
ನವದೆಹಲಿ[ಡಿ.01]: ಅಪ್ರಾಪ್ತರಾಗಿದ್ದಾಗ ತಿಳಿಯದೆ ಮಾಡಿದ ತಪ್ಪಿಗೆ ಜೀವನಪರ್ಯಂತ ಸರ್ಕಾರಿ ಉದ್ಯೋಗದಿಂದ ವಂಚಿತರಾಗುತ್ತಿದ್ದ ಬಾಲಾಪರಾಧಿಗಳ ನೆರವಿಗೆ ಬಂದಿರುವ ಸುಪ್ರೀಂಕೋರ್ಟ್, ಅವರಿಗೆ ಸರ್ಕಾರಿ ನೌಕರಿ ನೀಡಬಹುದು ಎಂದು ತೀರ್ಪು ನೀಡಿದೆ.
‘ಬಾಲಾಪರಾಧಿಗಳು ವಯಸ್ಕರಾದ ಮೇಲೆ ಅವರಿಗೆ ಸರ್ಕಾರಿ ನೌಕರಿ ಅಥವಾ ಇನ್ನಿತರ ಸೌಕರ್ಯಗಳನ್ನು ನೀಡುವುದಕ್ಕೆ ಅವರ ಕ್ರಿಮಿನಲ್ ಹಿನ್ನೆಲೆ ಅಡ್ಡಿಯಾಗಬಾರದು. ತೀರಾ ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಇನ್ನೆಲ್ಲ ಪ್ರಕರಣಗಳಲ್ಲೂ ಅಪ್ರಾಪ್ತರ ಕ್ರಿಮಿನಲ್ ಹಿನ್ನೆಲೆಯನ್ನು ಅವರು ವಯಸ್ಕರಾದ ಮೇಲೆ ‘ಅಳಿಸಲಾಗಿದೆ’ ಎಂದು ಪರಿಗಣಿಸಬೇಕು’ ಎಂದು ನ್ಯಾ
ಯು.ಯು.ಲಲಿತ್ ಮತ್ತು ವಿನೀತ್ ಸರನ್ ಅವರ ಪೀಠ ತೀರ್ಪು ನೀಡಿದೆ ಇದರಿಂದಾಗಿ ದೇಶಾದ್ಯಂತ ಇನ್ನುಮುಂದೆ ಬಾಲಾಪರಾಧದ ಕ್ರಿಮಿನಲ್ ಹಿನ್ನೆಲೆಯ ಕಾರಣಕ್ಕೆ ಸರ್ಕಾರಿ ನೌಕರಿಯಿಂದ ವಂಚಿತರಾಗುತ್ತಿದ್ದವರು ಸರ್ಕಾರಿ ನೌಕರಿಗೆ ಅರ್ಹರಾಗಿದ್ದರೆ ಅದನ್ನು ಪಡೆಯುವುದು ಸುಲಭವಾಗಲಿದೆ.
ವ್ಯಕ್ತಿಯೊಬ್ಬ ಅಪ್ರಾಪ್ತನಾಗಿದ್ದಾಗ 2009ರಲ್ಲಿ ಹುಡುಗಿಯನ್ನು ಚುಡಾಯಿಸಿದ್ದ ಕಾರಣಕ್ಕೆ ಅವನ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಾಗಿತ್ತು. ನಂತರ 2011ರಲ್ಲಿ ಅವನು ಖುಲಾಸೆಗೊಂಡಿದ್ದ. 2016ರಲ್ಲಿ ಅವನು ಕೇಂದ್ರೀಯ ಔದ್ಯೋಗಿಕ ಭದ್ರತಾ ಪಡೆ (ಸಿಐಎಸ್‌ಎಫ್)ಯ ಪರೀಕ್ಷೆ ಬರೆದು ಸಬ್ ಇನ್ಸ್‌ಪೆಕ್ಟರ್ ಕೆಲಸಕ್ಕೆ ಆಯ್ಕೆಯಾಗಿದ್ದ. ಆದರೆ, ಅವನಿಗೆ ಕ್ರಿಮಿನಲ್ ಹಿನ್ನೆಲೆಯಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ನೇಮಕಾತಿ ಪತ್ರ ನೀಡಲು ನಿರಾಕರಿಸಿತ್ತು. ಅದನ್ನು ಅವನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ವಿಚಾರಣೆ ನಡೆಸಿದ ಕೋರ್ಟ್, ಆತನಿಗೆ ನೌಕರಿ ನೀಡಬೇಕೆಂದು ಆದೇಶಿಸಿದೆ.
‘ಬಾಲಾಪರಾಧ ಕಾಯ್ದೆಯಡಿ ಅಪ್ರಾಪ್ತನೊಬ್ಬ ಶಿಕ್ಷೆಗೊಳಗಾಗಿದ್ದರೂ ಆತ ವಯಸ್ಕನಾದ ಮೇಲೆ ಕ್ರಿಮಿನಲ್ ಹಿನ್ನೆಲೆಯನ್ನು ಅಳಿಸಿಹಾಕಬೇಕು’ ಎಂದೂ ಕೋರ್ಟ್ ಹೇಳಿದೆ.