ನೀರಿಗೆ ಬಿದ್ದ ಟ್ರಕ್ಕೊಂದನ್ನು ಎಳೆಯಲು ಹೋದ ಕ್ರೇನ್‌ ಒಂದು ಸೇತುವೆಯಿಂದ ಆಯತಪ್ಪಿ ನೀರಿಗೆ ಬಿದ್ದ ಘಟನೆ ಒಡಿಶಾದಲ್ಲಿ ನಡೆದಿದೆ. ಈ ಭಯಾನಕ ದೃಶ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೀರಿಗೆ ಬಿದ್ದ ಟ್ರಕ್ಕೊಂದನ್ನು ಎಳೆಯಲು ಹೋದ ಕ್ರೇನ್‌ ಒಂದು ಸೇತುವೆಯಿಂದ ಆಯತಪ್ಪಿ ನೀರಿಗೆ ಬಿದ್ದ ಘಟನೆ ಒಡಿಶಾದಲ್ಲಿ ನಡೆದಿದೆ. ಈ ಭಯಾನಕ ದೃಶ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪಘಾತಕ್ಕೀಡಾಗಿ ಸೇತುವೆಯಿಂದ ಬಿದ್ದ ಟ್ರಕ್ಕೊಂದನ್ನು ಎಳೆಯುವುದಕ್ಕಾಗಿ ಈ ಕ್ರೇನ್‌ ಅನ್ನು ತರಿಸಲಾಗಿತ್ತು. ಈ ವೇಳೆ ಟ್ರಕ್‌ನ ಭಾರ ತಾಳಲಾರದೇ ಸೇತುವೆ ಮೇಲಿದ್ದ ಕ್ರೇನ್‌ ಕೂಡ ಸೇತುವೆ ಮೇಲಿನಿಂದ ನದಿಗೆ ಬಿದ್ದಿದೆ. ಒಡಿಶಾದ ತಲ್ಚೇರ್ ನಗರದಲ್ಲಿ ಈ ಘಟನೆ ನಡೆದಿದೆ. ಟ್ರಕ್‌ನ್ನು ಮೇಲೆಳೆಯುವ ವೇಳೆ ಕ್ರೇನ್‌ನ ಕೇಬಲ್ ತುಂಡಾಗಿ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಒಡಿಶಾದ ತಲ್ಚೆರ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಭಾನುವಾರ ಟ್ರಕ್ ಅನ್ನು ಎತ್ತಲು ಎರಡು ಕ್ರೇನ್‌ಗಳು ಸೇತುವೆಯ ಮೇಲೆ ಕೆಲಸ ಮಾಡುತ್ತಿದ್ದವು. ಆದಾಗ್ಯೂ, ವಾಹನವನ್ನು ನೀರಿನಿಂದ ಎಚ್ಚರಿಕೆಯಿಂದ ಮೇಲಕ್ಕೆತ್ತುತ್ತಿದ್ದಂತೆ, ಒಂದು ಕ್ರೇನ್‌ನ ಕೇಬಲ್ ಹಠಾತ್ ತುಂಡಾಯಿತು ಇದರಿಂದ ಸಂಪೂರ್ಣ ಹೊರೆ ಇನ್ನೊಂದು ಕ್ರೇನ್ ಮೇಲೆ ಬಿದ್ದಿದೆ. ಪರಿಣಾಮ ಕ್ರೇನ್‌ಗಿಂದ ಟ್ರಕ್‌ ತೂಕವೂ ಹೆಚ್ಚಿದ್ದರಿಂದ ಕ್ರೇನ್ ತಲೆಕೆಳಗಾಗಿ ನದಿಗೆ ಬಿದ್ದಿದೆ.

ಕ್ರೇನ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗುವ ಮೊದಲು ಸೇತುವೆಯ ಅಂಚಿನಲ್ಲಿ ನಿಧಾನವಾಗಿ ಜಾರಿ ಕೆಳಗೆ ಬೀಳುತ್ತಿರುವ ಭಯಾನಕ ದೃಶ್ಯ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ವೇಳೆ ಕ್ರೇನ್‌ನ ಚಾಲಕ ಕ್ರೇನ್‌ನೊಳಗೆಯೇ ಇದ್ದ, ಇನ್ನು ವಿಡಿಯೋ ನೋಡುತ್ತಿರುವವರೆಲ್ಲಾ ಕ್ರೇನ್‌ ಚಾಳಕನ ಕತೆ ಮುಗಿದೆ ಹೋಯಿತು ಎಂದು ಭಾವಿಸಿದ್ದಾರೆ. ಆದರೆ ಕ್ರೇನ್‌ನ ಚಾಲಕ ಕ್ರೇನ್‌ ನದಿಗೆ ಬೀಳುತ್ತಿದ್ದಂತೆ ಈಜಿ ಮೇಲೆ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಯಾವುದೇ ಜೀವಹಾನಿಯಾದ ಬಗ್ಗೆ ವರದಿ ಆಗಿಲ್ಲ.

ಘಟನೆಯನ್ನು ನೋಡಿದ ಅನೇಕರು ದಿಗ್ಭ್ರಾಂತರಾಗಿ ಕಾಮೆಂಟ್ ಮಾಡಿದ್ದಾರೆ. ಎರಡು ಕ್ರೇನ್‌ಗಳನ್ನು ಒಂದಕ್ಕೊಂದು ಜೋಡಿಸಿದ್ದರೆ ಹೀಗಾಗುತ್ತಿರಲಿಲ್ಲವೇನೋ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕ್ರೇನ್‌ ಆಪರೇಟರ್ ಅವಘಡದಲ್ಲಿ ಪಾರಾಗಿ ಈಜಿ ದಡ ಸೇರಿದ್ದು ಸಂತಸದ ವಿಚಾರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹೈದರಾಬಾದ್‌ನಲ್ಲಿ ಕಾರೊಂದು ಬಹುಮಹಡಿ ಕಟ್ಟಡದ ರೇಲಿಂಗ್ ಗೋಡೆಗೆ ಡಿಕ್ಕಿ ಹೊಡೆದ ನಂತರ ಎತ್ತರದ ಗೋಡೆಯಲ್ಲಿ ನೇತಾಡುತ್ತಿರುವುದು ಕಂಡು ಬಂದಿತ್ತು. ಘಟನೆಯ ವೀಡಿಯೊದಲ್ಲಿ ಕಾರು ಸುಮಾರು 25 ಅಡಿ ಎತ್ತರದ ಗೋಡೆ ಮೇಲಿಂದ ತೂಗಾಡುತ್ತಿರುವುದನ್ನು ಕಾಣಬಹುದು.