ನವದೆಹಲಿ(ಅ.13): ರಾಷ್ಟ್ರೀಯ ಕಾಮಧೇನು ಆಯೋಗ ಸೋಮವಾರದಂದು ದನದ ಸಗಣಿಯಿಂದ ಮಾಡಿದ ಚಿಪ್ ಒಂದನ್ನು ಲಾಂಚ್ ಮಾಡಿದೆ. ಈ ಚಿಪ್ ಮೊಬೈಲ್‌ ಫೋನ್‌ ರೇಡಿಯೇಷನ್ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಆಯೋಗದ ಅಧ್ಯಕ್ಷ ವಲ್ಲಭ ಭಾಯಿ ತಿಳಿಸಿದ್ದಾರೆ.

ಚಿಪ್ ಲಾಂಚ್ ಮಾಡಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭ ಭಾಯಿ ಕಥೀರಿಯಾ 'ಈ ಚಿಪ್‌ ಮೊಬೈಲ್ ಜೊತೆ ಇರಿಸಿದರೆ ಮೊಬೈಲ್ ಹೊರಸೂಸುವ ರೇಡಿಯೇಷನ್ ಭಾರೀ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ರೋಗಗಳಿಂದ ರಕ್ಷಿಸಿಕೊಳ್ಳಲು ಮುಂದಿನ ದಿನಗಳಲ್ಲಿ ಇದು ಸಹಾಯ ಮಾಡುತ್ತದೆ' ಎಂದು ತಿಳಿಸಿದ್ದಾರೆ. ಈ ಚಿಪ್ ಜೊತೆಗೆ ಆಯೋಗವು ಸಗಣಿಯಿಂದ ತಯಾರಿಸಿರುವ ಇನ್ನಿತರ ಅನೇಕ ವಸ್ತುಗಳನ್ನೂ ಲಾಂಚ್ ಮಾಡಿದೆ. ಈ ಬಾರಿಯ ದೀಪಾವಳಿಯನ್ನು ಮಾಲಿನ್ಯಮುಕ್ತವಾಗಿ ಆಚರಿಸುವ ಉದ್ದೇಶದೊಂದಿಗೆ ಇದನ್ನು ಬಿಡುಗಡೆಗೊಳಿಸಿರುವುದಾಗಿ ತಿಳಿಸಿದ್ದಾರೆ.

ಇನ್ನು ಈ ಬಾರಿಯ ದೀಪಾವಳಿಯಲ್ಲಿ ಚೀನಾ ನಿರ್ಮಿತ ಉತ್ಪನ್ನಗಳನ್ನು ಬಹಿಷ್ಕರಿಸಲಾಗುತ್ತದೆ ಎಂಬುವುದನ್ನು ಖಾತರಿಪಡಿಸಿಕೊಳ್ಳಲು ಹಾಗೂ ಸಗಣಿಯಿಂದ ನಿರ್ಮಿಸಲಾದ ದೀಪ, ಲಕ್ಷ್ಮೀ ಹಾಗೂ ಗಣೇಶನ ಮೂರ್ತಿಗಳು ಸೇರಿ ಇನ್ನಿತರ ಅನೇಕ ವಸ್ತುಗಳ ಬಳಕೆಯನ್ನು ಪ್ರೋತ್ಸಾಹಿಸಲು, ಕಾಮಧೇನು ಆಯೋಗ 'ಕಾಮಧೇನು ದೀಪಾವಳಿ ಅಭಿಯಾನ'ವನ್ನೂ ಹಮ್ಮಿಕೊಂಡಿದೆ. 

ಇನ್ನು ಈ ಸುದ್ದಿಗೋಷ್ಠಿಯಲ್ಲಿ ವಲ್ಲಭ್ ಭಾಯಿಯವರು ಸೆಗಣಿಯಿಂದ ಮಾಡಲಾದ ಚಿಪ್‌ಗಳನ್ನೂ ತೋರಿಸಿದ್ದಾರೆ. 'ದನದ ಸಗಣಿ ಎಲ್ಲರನ್ನೂ ರಕ್ಷಿಸುತ್ತದೆ, ಇವೆಲ್ಲವೂ ಮನೆ ಮನೆಗೆ ತಲುಪಿದರೆ ಆ ಮನೆ ರೇಡಿಯೇಷನ್ ಫ್ರೀ ಆಗುತ್ತದೆ' ಎಂದೂ ಹೇಳಿದ್ದಾರೆ.