ಪುಣೆ(ಜ.24): ಕೊರೋನಾ ವಿರುದ್ಧ ಜೀವದ ಹಂಗು ತೊರೆದು ಹೋರಾಡಿದ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಸಿಬ್ಬಂದಿಗೆ ನೀಡಲಾಗುತ್ತಿರುವ ಎರಡು ಕೋವಿಡ್‌ ಲಸಿಕೆಗಳು ಕೆಲವೇ ತಿಂಗಳಲ್ಲಿ ಮೆಡಿಕಲ್‌ ಸ್ಟೋರ್‌ಗಳಲ್ಲೂ ಜನಸಾಮಾನ್ಯರ ಬಳಕೆಗೆ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ದೇಶದಲ್ಲಿ ಸದ್ಯ ವಿತರಿಸಲಾಗುತ್ತಿರುವ ಎರಡು ಲಸಿಕೆಗಳು ಸದ್ಯಕ್ಕಂತೂ ಮುಕ್ತ ಮಾರುಕಟ್ಟೆಪ್ರವೇಶಿಸುವುದಿಲ್ಲ ಎಂದು ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಿದೆ.

ಲಸಿಕೆ ಉತ್ಪಾದನೆ ಕಂಪನಿಗಳು ಸಲ್ಲಿಸುವ ದತ್ತಾಂಶವನ್ನು ಪರಿಶೀಲಿಸಿ ಭಾರತೀಯ ಔಷಧ ಮಹಾನಿಯಂತ್ರಕರು ಅನುಮತಿ ನೀಡುವವರೆಗೂ ಲಸಿಕೆಗಳು ಮುಕ್ತ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಅದು ಯಾವಾಗ ಆಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ಆದ್ಯತಾ ವಲಯಕ್ಕೆ ಮುಂದಿನ 7ರಿಂದ 8 ತಿಂಗಳಲ್ಲಿ ಲಸಿಕೆ ನೀಡುವತ್ತ ಕೇಂದ್ರ ಸರ್ಕಾರ ಗಮನಕೇಂದ್ರೀಕರಿಸಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ತಿಳಿಸಿದ್ದಾರೆ.

ತುರ್ತು ಬಳಕೆಗೆಂದು ಉಪಯೋಗಿಸುವ ಯಾವುದೇ ಲಸಿಕೆಗೂ ಭಾರತ ಹಾಗೂ ಯಾವುದೇ ದೇಶದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಬಳಸುವ ಅನುಮತಿ ನೀಡುವ ಪದ್ಧತಿ ಇಲ್ಲ. ಎಲ್ಲ ಹಂತದ ಪ್ರಯೋಗ ಮುಗಿದು, ಅದು ಪರಿಶೀಲನೆಗೆ ಒಳಪಟ್ಟಬಳಿಕವಷ್ಟೇ ಮುಕ್ತ ಮಾರುಕಟ್ಟೆಮಾರಾಟಕ್ಕೆ ಅನುಮತಿ ದೊರೆಯುತ್ತದೆ ಎಂದಿದ್ದಾರೆ.