ಚೆನ್ನೈ(ಜ.07): ಕೊರೋನಾದಿಂದ ಗುಣಮುಖರಾಗಿರುವವರು ಹೊಸದಾಗಿ ಆರೋಗ್ಯ ವಿಮೆ ಮಾಡಿಸುವ ವೇಳೆ ಕೆಲ ತೊಡಕು ಎದುರಾಗುವ ಸಾಧ್ಯತೆ ಇದೆ. ಕೊರೋನಾದಿಂದ ಮಾನವನ ಹಲವು ಅಂಗಾಂಗಗಳಿಗೆ ಧಕ್ಕೆಯಾಗುವ ಕಾರಣ, ಕೊರೋನಾ ಸಂಬಂಧೀ ಆರೋಗ್ಯ ಸಮಸ್ಯೆಗಳನ್ನು ವಿಮಾ ಕಂಪನಿಗಳು ‘ಪ್ರಿ-ಎಕ್ಸಿಸ್ಟಿಂಗ್‌’ ಎಂದು ವರ್ಗೀಕರಿಸುವ ಸಂಭವವಿದೆ.

ಹೀಗೆ ‘ಪ್ರಿ-ಎಕ್ಸಿಸ್ಟಿಂಗ್‌’ ಎಂದು ವರ್ಗೀಕರಿಸಿದರೆ ಈ ವರ್ಗದಲ್ಲಿರುವ ರೋಗಗಳಿಗೆ ‘ಕಾಯುವಿಕೆ ಅವಧಿ’ಯಲ್ಲಿ ವಿಮೆ ದೊರಕುವುದಿಲ್ಲ. ‘ಕಾಯುವಿಕೆ ಅವಧಿ’ (ವೇಟಿಂಗ್‌ ಪೀರಿಯಡ್‌) 2ರಿಂದ 5 ವರ್ಷಗಳ ನಡುವೆ ಇರಲಿದೆ.

ಉದಾಹರಣೆಗೆ, ಕೊರೋನಾ ಬಂದು ಗುಣಮುಖರಾದ ಬಳಿಕವೂ ಕೆಲವರಿಗೆ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು, ರಕ್ತ ಹೆಪ್ಪುಗಟ್ಟುವಿಕೆ, ಹೃದಯ ಕಾಯಿಲೆಗಳು, ಮೂತ್ರಪಿಂಡ ಹಾಗೂ ಮಿದುಳಿನ ಸಮಸ್ಯೆಗಳು- ಮರುಕಳಿಸಬಹುದು. ಹೀಗಾಗಿ ವಿಮಾ ಕಂಪನಿಗಳು ಈ ಆರೋಗ್ಯ ಸಮಸ್ಯೆಗಳನ್ನು ‘ಪ್ರಿ ಎಕ್ಸಿಸ್ಟಿಂಗ್‌’ ಪಟ್ಟಿಗೆ ಸೇರಿಸುತ್ತವೆ. ಕೊರೋನಾ ಗುಣಮುಖರು ಹೊಸದಾಗಿ ಆರೋಗ್ಯ ವಿಮೆ ಮಾಡಿಸಿಕೊಳ್ಳಲು ಹೊರಟರೆ, ಅವರಿಗೆ ವಿಮೆ ಮಾಡಿಸಿದ 2ರಿಂದ 5 ವರ್ಷದ ಅವಧಿಯಲ್ಲಿ ಈ ಸಮಸ್ಯೆಗಳಿಗೆ ವಿಮೆ ದೊರಕುವುದಿಲ್ಲ. ಅಂದರೆ ಈ ಕಾಯುವಿಕೆ ಅವಧಿ ಮುಗಿದ ನಂತರವಷ್ಟೇ ‘ಪ್ರಿ ಎಕ್ಸಿಸ್ಟಿಂಗ್‌’ ಪಟ್ಟಿಯಲ್ಲಿರುವ ಆರೋಗ್ಯ ಸಮಸ್ಯೆಗಳಿಗೆ ವಿಮೆ ಲಭಿಸಲಿದೆ.

‘ಕೊರೋನಾ ಬಂದು ಹೋಮ್‌ ಕ್ವಾರಂಟೈನ್‌ನಲ್ಲಿದ್ದೇ ಗುಣಮುಖರಾದರೆ ಅವರಿಗೆ 30ರಿಂದ 60 ದಿನ ‘ವೇಟಿಂಗ್‌ ಪೀರಿಯಡ್‌’ ಎಂದು ಪರಿಗಣಿಸಲಾಗುವುದು. ಆದರೆ ಆಸ್ಪತ್ರೆಯಲ್ಲಿದ್ದು ಗುಣಮುಖರಾದವರಿಗೆ 2-5 ವರ್ಷ ಕಾಯುವಿಕೆ ಅವಧಿಯಾಗಲಿದೆ. ಹೊಸದಾಗಿ ವಿಮೆ ಮಾಡುವವರಿಗೆ ಮಾತ್ರ ಇದು ಅನ್ವಯವಾಗಲಿದ್ದು, ಈ ಮುನ್ನವೇ ವಿಮೆ ಇದ್ದು ನವೀಕರಿಸಿಕೊಂಡವರಿಗೆ ‘ವೇಟಿಂಗ್‌ ಪೀರಿಯಡ್‌’ ಇರುವುದಿಲ್ಲ’ ಎಂದು ವಿಮಾ ಕಂಪನಿಯ ಪ್ರಮುಖರೊಬ್ಬರು ಸ್ಪಷ್ಟಪಡಿಸಿದ್ದಾರೆ.