COVID19: ಭಾರತೀಯರ ಜೀವಿತಾವಧಿ 2 ವರ್ಷ ಇಳಿಕೆ
- ಪುರುಷರ ಜೀವಿತಾವಧಿ 69.5ರಿಂದ 67.5 ವರ್ಷಕ್ಕೆ ಖೋತಾ
- ಮಹಿಳೆಯರ ಆಯಸ್ಸು 72 ವರ್ಷದಿಂದ 69.8ಕ್ಕೆ ಕುಸಿತ
ಮುಂಬೈ(ಅ.24): ಕೋವಿಡ್‌ನಿಂದಾಗಿ(Covid19) ಭಾರತೀಯರ ಜೀವಿತಾವಧಿಯಲ್ಲಿ ಸರಾಸರಿ 2 ವರ್ಷ ಇಳೀಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಮುಂಬೈ ಮೂಲದ ಅಂತಾರಾಷ್ಟ್ರೀಯ ಜನಸಂಖ್ಯಾ ಶಾಸ್ತ್ರದ ಸಂಸ್ಥೆ(ಐಐಪಿಎಸ್)ಯ ವಿಜ್ಞಾನಿಗಳು, ದೇಶದಲ್ಲಾಗುತ್ತಿರುವ ಸಾವಿನ ಪ್ರಮಾಣಕ್ಕೆ ಕೋವಿಡ್ ಹೇಗೆ ಪರೋಕ್ಷವಾಗಿ ಕಾರಣವಾಗಿದೆ ಎಂಬ ಕುರಿತಾಗಿ ಅಂಕಿಸಂಖ್ಯೆಗಳ ವಿಶ್ಲೇಷಣೆ ನಡೆಸಿದ್ದಾರೆ.
ಅದರ ವರದಿಯು ‘ಬಿಎಂಸಿ ಪಬ್ಲಿಕ್ ಹೆಲ್ತ್’ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಈ ಪ್ರಕಾರ ದೇಶದ ಮಹಿಳೆಯರು ಮತ್ತು ಪುರುಷರ ಆಯಸ್ಸು ತಲಾ 2 ವರ್ಷಗಳಷ್ಟುಕಡಿತಗೊಂಡಿದೆ. 2019ರಲ್ಲಿ ಸರಾಸರಿ 69.5ರಷ್ಟಿದ್ದ ಪುರುಷರ ಜೀವಿತಾವಧಿಯು ಸರಾಸರಿ ಇದೀಗ 67.5 ವರ್ಷಕ್ಕೆ ಕುಸಿದಿದೆ. ಅದೇ ರೀತಿ ಮಹಿಳೆಯರ ಸರಾಸರಿ ಆಯಸ್ಸು 72 ವರ್ಷದಿಂದ 69.8 ವರ್ಷಕ್ಕೆ ಕುಸಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದಲ್ಲಿ ಈವರೆಗೆ 5 ಕೋಟಿ Covid Test..!
ದೇಶದಲ್ಲಿ 39-69 ವರ್ಷದೊಳಗಿನ ಹೆಚ್ಚಿನವರನ್ನು ಕೋವಿಡ್ ಬಲಿಪಡೆದಿದೆ. ಅಲ್ಲದೆ 2020ರಲ್ಲಿ 35-79 ವರ್ಷದೊಳಗಿನ ಹೆಚ್ಚು ಮಂದಿಯನ್ನು ಕೋವಿಡ್ ಬಲಿಪಡೆದಿದ್ದು, ಸಾಮಾನ್ಯ ವರ್ಷಗಳಿಗಿಂತ ಕೋವಿಡ್ ಅವಧಿಯಲ್ಲಿ ಸಾವಿನ ಸಂಖ್ಯೆ ತುಸು ಹೆಚ್ಚಾಗಿದೆ ಎಂದು ಈ ಅಧ್ಯಯನದಲ್ಲಿ ತೊಡಗಿಸಿಕೊಂಡ ಪ್ರೊ ಯಾದವ್ ಅವರು ಹೇಳಿದ್ದಾರೆ.
ಯಾವುದೇ ಸಾಂಕ್ರಾಮಿಕ ರೋಗಗಳು ಮನುಷ್ಯನ ಜೀವಿತಾವಧಿ ಮೇಲೆ ನೇರ ಪರಿಣಾಮ ಬೀರುತ್ತವೆ. ಈ ಹಿಂದೆ ಎಚ್‌ಐವಿ ಏಡ್ಸ್ ಬಾಧಿಸಿದ ಸಂದರ್ಭದಲ್ಲಿ ಆಫ್ರಿಕಾ ದೇಶಗಳ ಜನರ ಜೀವಿತಾವಧಿ ಕುಸಿತಗೊಂಡಿತ್ತು. ಈ ವೈರಸ್ ನಿಯಂತ್ರಣಕ್ಕೆ ಬಂದ ಬಳಿಕ ಮತ್ತೆ ಜನರ ಜೀವಿತಾವಧಿ ಸುಧಾರಣೆಯತ್ತ ಸಾಗಿತ್ತು ಎಂದು ಐಐಪಿಎಸ್ ನಿರ್ದೇಶಕ ಡಾ. ಕೆ.ಎಸ್. ಜೇಮ್ಸ್ ಅಭಿಪ್ರಾಯಪಟ್ಟರು.