ಹೈದರಾಬಾದ್‌(ಸೆ.20): ಕೊರೋನಾ ವೈರಸ್‌ನಿಂದಾಗಿ ಎದುರಾದ ಹಣಕಾಸಿನ ಮುಗ್ಗಟ್ಟಿನ ಕಾರಣಕ್ಕೆ ದೇಶದಲ್ಲಿ ಎಲ್‌ಕೆಜಿಯಿಂದ- 12ನೇ ತರಗತಿಯವರೆಗಿನ ಸುಮಾರು 1000ಕ್ಕೂ ಹೆಚ್ಚು ಶಾಲೆಗಳನ್ನು ಮಾರಾಟಕ್ಕೆ ಇಡಲಾಗಿದೆ. ಇದರಿಂದ ಶಿಕ್ಷಣ ಸಂಸ್ಥೆಗಳು ಸುಮಾರು 7500 ಕೋಟಿ ರು. ಸಂಗ್ರಹವಾಗುವ ನಿರೀಕ್ಷೆ ಹೊಂದಿವೆ.

ಶಿಕ್ಷಣ ಮೂಲ ಸೌಕರ್ಯ ವಲಯದ ಸಂಸ್ಥೆ ಸೆರೆಸ್ಟ್ರಾ ವೆಂಚ​ರ್‍ಸ್ ಬಳಿ ಮಾಹಿತಿಯನ್ನು ಆಧರಿಸಿ ಆಂಗ್ಲ ಪತ್ರಿಕೆಯೊಂದು ಈ ವರದಿಯನ್ನು ಪ್ರಕಟಿಸಿದೆ. ಮಾರಾಟಕ್ಕೆ ಇಡಲಾಗಿರುವ ಶಾಲೆಗಳ ಪೈಕಿ ಹೆಚ್ಚಿನವು ವಾರ್ಷಿಕ 50 ಸಾವಿರಕ್ಕಿಂತ ಕಡಿಮೆ ಶುಲ್ಕ ಪಡೆಯುವ ಖಾಸಗಿ ಅನುದಾನಿತ ಶಾಲೆಗಳಾಗಿವೆ. ಹಲವು ರಾಜ್ಯ ಸರ್ಕಾರಗಳು ಶಾಲೆಗಳ ಶುಲ್ಕ ಸಂಗ್ರಹಕ್ಕೆ ಮಿತಿಯನ್ನು ಹೇರಿರುವುದರಿಂದ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಕೆಲವೊಂದು ಶಾಲೆಗಳಿಗೆ ಶಿಕ್ಷಕರ ವೇತನದ ವೆಚ್ಚವನ್ನು ಭರಿಸುವುದು ಕಷ್ಟವಾಗುತ್ತಿದೆ. ಇಂತಹ ಶಾಲೆಗಳು ಶಿಕ್ಷಕೇತರ ಸಿಬ್ಬಂದಿ ವೇತನವನ್ನು ಶೇ.70ರಷ್ಟುಕಡಿತ ಮಾಡಿವೆ ಎಂದು ಸೆರೆಸ್ಟ್ರಾ ವೆಂಚ​ರ್‍ಸ್ನ ಸಹ ಸ್ಥಾಪಕ ವಿಶಾಲ್‌ ಗೋಯಲ್‌ ಹೇಳಿದ್ದಾರೆ.

ಇದೇ ವೇಳೆ ಹೈದರಾಬಾದ್‌, ವಿಶಾಖಪಟ್ಟಣಂ, ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಸಮೂಹವನ್ನು ಹೊಂದಿರುವ ಲೋಎಸ್ಟೊ್ರೕ ಅಡ್ವೈಸರ್ಸ್‌ ಸಂಸ್ಥೆ ಕೂಡ ತನ್ನ ಪಾಲುದಾರಿಕೆಯನ್ನು ಮಾರಾಟಕ್ಕೆ ಇಟ್ಟಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ 20-25 ಶಾಲೆಗಳು ಖರೀದಿದಾರರ ಹುಡುಕಾಟದಲ್ಲಿವೆ ಎಂದು ವರದಿ ತಿಳಿಸಿದೆ.