ಕೊರೋನಾದಿಂದ ಚೇತರಿಸಿಕೊಂಡು ವಿಶ್ರಾಂತಿಯಲ್ಲಿದ್ದ ಸೋನಿಯಾ ಗಾಂಧಿ ಮತ್ತೆ ಕೋವಿಡ್ ಸೋಂಕಿಗೆ ತುತ್ತಾದ ಕಾಂಗ್ರೆಸ್ ಅಧ್ಯಕ್ಷೆ ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾದ ಸೋನಿಯಾ

ನವದೆಹಲಿ(ಜೂ.11): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತೆ ಆಸ್ಪತ್ರೆ ದಾಖಲಾಗಿದ್ದಾರೆ. ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿದ್ದ ಸೋನಿಯಾ ಗಾಂಧಿಗೆ ಆರೋಗ್ಯ ಕ್ಷೀಣಿಸಿದೆ. ಮತ್ತೆ ಕೋವಿಡ್ ಸೋಂಕು ಉಲ್ಬಣಿಸಿದೆ. ಹೀಗಾಗಿ ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಸೋನಿಯಾ ಗಾಂಧಿ ಆರೋಗ್ಯ ಸ್ಥಿರವಾಗಿದೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ಜೂನ್ 1 ರಂದು ಸೋನಿಯಾ ಗಾಂಧಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ನ್ಯಾಷನಲ್ ಹೆರಾಲ್ಡ್ ಪ್ರಕರಣದಡಿಯಲ್ಲಿ ಇಡಿ ಸೋನಿಯಾ ಗಾಂಧಿಗೆ ಸಮನ್ಸ್ ನೀಡಿತ್ತು. ಆರೋಗ್ಯ ಸಮಸ್ಯೆ ಕಾರಣ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿದ್ದರು. ಇದಕ್ಕೆ ಇಡಿ ಕೂಡ ಸಮ್ಮತಿಸಿತ್ತು. ಇದೀಗ ಮತ್ತೆ ಕೋವಿಡ್ ಉಲ್ಬಣಿಸಿದ ಕಾರಣ ಆಸ್ಪತ್ರೆ ದಾಖಲಾಗಿದ್ದಾರೆ.

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ, ರಾಹುಲ್‌ ಗಾಂಧಿ ವಿಚಾರಣೆಗೆ ಹೊಸ ದಿನಾಂಕ ನೀಡಿದ ಇ.ಡಿ

ಸೋನಿಯಾ ಗಾಂಧಿ ಆರೋಗ್ಯದ ಕುರಿತು ಕಾಂಗ್ರೆಸ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ. ಕಾಂಗ್ರೆಸ್ ಹಿರಿಯ ನಾಯಕ ರಂದೀಪ್ ಸಿಂಗ್ ಸುರ್ಜೆವಾಲ ಕೂಡ ಟ್ವೀಟ್ ಮಾಡಿ ಆರೋಗ್ಯದ ಮಾಹಿತಿ ನೀಡಿದ್ದಾರೆ.

ನ್ಯಾಷನಲ್‌ ಹೆರಾಲ್ಡ್‌ನ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗಾಗಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಜೂ. 23ರಂದು ಜಾರಿ ನಿರ್ದೇಶನಾಲಯ (ಇಡಿ) ಎದುರು ಹಾಜರಾಗಲು ಸೂಚನೆ ನೀಡಿದೆ. ಈ ಮೊದಲು ಜೂ. 8ರಂದು ಸೋನಿಯಾಗೆ ಇಡಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿತ್ತು. ಇದರ ಮಾರನೇ ದಿನವೇ ಸೋನಿಯಾಗೆ ಕೋವಿಡ್‌ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಅವರು ವಿಚಾರಣೆ ದಿನಾಂಕವನ್ನು ಮುಂದೂಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಇಡಿ ಜೂ.23ರಂದು ವಿಚಾರಣೆಗಾಗಿ ದಿನಾಂಕವನ್ನು ನಿಗದಿಪಡಿಸಿದೆ.

ಕೋವಿಡ್‌ ಸೋಂಕಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗಾಗಿ ಜೂ. 8 ರಂದು ಜಾರಿ ನಿರ್ದೇಶನಾಲಯದ ಎದುರು ಹಾಜರಾಗಿಲ್ಲ. ಸೋನಿಯಾ ವಿಚಾರಣೆಗೆ ಹಾಜರಾಗಲು ಇನ್ನಷ್ಟುಕಾಲಾವಕಾಶ ಕೇಳಲಿದ್ದರು. ಇದಕ್ಕೆ ಇಡಿ ಸಮ್ಮತಿಸಿದೆ. ಇದೀಗ ಮತ್ತೆ ಕೋವಿಡ್ ಕಾರಣ ವಿಚಾರಣೆ ಕಾಲಾವಕಾಶ ಮತ್ತಷ್ಟು ವಿಸ್ತರಣೆಯಾಗುವ ಸಾಧ್ಯತೆ ಇದೆ. ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇಡಿ ಸೋನಿಯಾ ಹಾಗೂ ರಾಹುಲ್‌ ಗಾಂಧಿಗೆ ನೊಟೀಸ್‌ ನೀಡಿದ ಮಾರನೇ ದಿನವೇ ಸೋನಿಯಾಗೆ ಕೊರೋನಾ ಸೋಂಕು ದೃಢ ಪಟ್ಟಿತ್ತು. ರಾಹುಲ್‌ಗೆ ಜೂ.13 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಸೋನಿಯಾ ಗಾಂಧಿಗೆ ಕೊರೋನಾ, ಕೆ. ಸಿ. ವೇಣುಗೋಪಾಲ್ ಸೇರಿ ಹಲವು ನಾಯಕರಿಗೆ ಸೋಂಕು!

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜೂ.13ರಂದು ಜಾರಿ ನಿರ್ದೇಶನಾಲಯದ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ. ಈ ಸಮಯದಲ್ಲಿ ಇ.ಡಿ. ಕಚೇರಿಯ ಎದುರು ಕಾಂಗ್ರೆಸ್‌ ಭಾರಿ ಬಲ ಪ್ರದರ್ಶನ ನಡೆಸಲು ನಿರ್ಧರಿಸಿದೆ.

ಕಾಂಗ್ರೆಸ್‌ ಪಕ್ಷದ ಎಲ್ಲಾ ರಾಜ್ಯಸಭಾ ಮತ್ತು ಲೋಕಸಭಾ ಸಂಸದರು, ಹಿರಿಯ ನಾಯಕರಿಗೆ ಸೋಮವಾರ ಮುಂಜಾನೆ ಅಕ್ಬರ್‌ ರಸ್ತೆಯಲ್ಲಿರುವ ಪಕ್ಷದ ಕೇಂದ್ರ ಕಚೇರಿ ಎದುರು ಹಾಜರಾಗುವಂತೆ ಸೂಚನೆ ನೀಡಲಾಗಿದೆ. ರಾಹುಲ್‌ ಗಾಂಧಿ ಅವರಿಗೆ ಬೆಂಬಲ ಸೂಚಿಸಲು ಇಲ್ಲಿಂದ ಜಾರಿ ನಿರ್ದೇಶನಾಲಯದ ಕಚೇರಿ ಇರುವ ಅಬ್ದುಲ್‌ ಕಲಾಂ ರಸ್ತೆಯವರೆಗೆ ಜಾಥಾ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಅಲ್ಲದೇ ಈ ಪ್ರತಿಭಟನೆಯ ಯೋಜನೆಯನ್ನು ಅಂತಿಮಗೊಳಿಸಲು ಪಕ್ಷದ ಕಾರ್ಯದರ್ಶಿಗಳು ಮತ್ತು ಎಲ್ಲಾ ರಾಜ್ಯದ ಕಾಂಗ್ರೆಸ್‌ನ ಎಲ್ಲಾ ಘಟಕಗಳ ಅಧ್ಯಕ್ಷರೊಂದಿಗೆ ವರ್ಚುವಲ್‌ ಆಗಿ ಬುಧವಾರ ಸಭೆ ನಡೆಸಲಾಗಿದೆ.