Asianet Suvarna News

ಗುಡ್‌ ನ್ಯೂಸ್: ದೇಶ, ರಾಜ್ಯದಲ್ಲಿ ಕೋವಿಡ್‌ ಸೋಂಕು ಭಾರೀ ಇಳಿಮುಖ!

* ಕೋವಿಡ್‌ ಸೋಂಕು ಭಾರೀ ಇಳಿಮುಖ

* ದೇಶ, ರಾಜ್ಯದಲ್ಲಿ ನಿತ್ಯ ಸೋಂಕು ತೀವ್ರ ಇಳಿಕೆ

* ಪಾಸಿಟಿವಿಟಿ ದರ ಶೇ.3.5ರ ಆಸುಪಾಸಿಗೆ ಕುಸಿತ

Covid Cases In India And Karnataka Gradually Decreasing Positivity Rate is Near 3 5 pod
Author
Bangalore, First Published Jun 16, 2021, 7:21 AM IST
  • Facebook
  • Twitter
  • Whatsapp

ಬೆಂಗಳೂರು(ಜೂ.16): ರಾಜ್ಯದಲ್ಲಿ ಕೊರೋನಾ 2ನೇ ಅಲೆ ಎಷ್ಟುವೇಗವಾಗಿ ಏರಿಕೆ ಕಂಡಿತ್ತೋ ಅಷ್ಟೇ ವೇಗದಲ್ಲಿ ಇಳಿಕೆಯನ್ನು ಕಾಣುತ್ತಿರುವ ಸುಳಿವು ದೊರೆತಿದ್ದು, ಮಂಗಳವಾರ ರಾಜ್ಯದಲ್ಲಿ ಹೊಸತಾಗಿ ಕೇವಲ 5,041 ಜನರಲ್ಲಿ ಸೋಂಕು ಪತ್ತೆಯಾಗಿದೆ. 115 ಮಂದಿ ಮೃತರಾಗಿದ್ದಾರೆ. 14,785 ಮಂದಿ ಗುಣಮುಖರಾಗಿದ್ದಾರೆ.

ಅದೇ ರೀತಿ, ದೇಶದಲ್ಲಿ ಮಂಗಳವಾರ 60,471 ಪ್ರಕರಣ ಪತ್ತೆಯಾಗಿದ್ದು, ಇದು ಕಳೆದ 75 ದಿನಗಳಲ್ಲೇ ಕನಿಷ್ಠವಾಗಿದೆ. ಪಾಸಿಟಿವಿಟಿ ದರ ಶೇ.3.45ಕ್ಕೆ ಕುಸಿದಿದೆ. ಒಂದೇ ದಿನ ದೇಶದಲ್ಲಿ 2726 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಕರ್ನಾಟಕದಲ್ಲಿ ಕಳೆದ ಏ.5ರಂದು 5,279 ಪ್ರಕರಣ ದಾಖಲಾಗಿತ್ತು. ನಂತರ ಸೋಂಕು ಏರಿಕೆ ಗತಿ ವೇಗ ಪಡೆದುಕೊಂಡು ಏ.30ಕ್ಕೆ 48 ಸಾವಿರದ ಗಡಿ ದಾಟಿತ್ತು. ಅಂದರೆ 25 ದಿನದಲ್ಲಿ ಸೋಂಕು ಹಲವು ಪಟ್ಟು ಹೆಚ್ಚಾಗಿತ್ತು. ಅದೇ ರೀತಿ ಈಗ ಇಳಿಕೆಯಾಗುತ್ತಿದ್ದು, ಮೇ 15ಕ್ಕೆ 41 ಸಾವಿರ ಇದ್ದ ಸೋಂಕು ಜೂ.15ಕ್ಕೆ ಐದು ಸಾವಿರದ ಗಡಿಗೆ ಬಂದಿದೆ. ತನ್ಮೂಲಕ ಬರೋಬ್ಬರಿ ಎರಡು ತಿಂಗಳ ನಂತರ (ಬರೋಬ್ಬರಿ 71 ದಿನದ ನಂತರ) ಸೋಂಕು ಐದು ಸಾವಿರದ ಸಮೀಪಕ್ಕೆ ಬಂದಿದೆ.

ಕಳೆದ ನಾಲ್ಕೈದು ದಿನಗಳಲ್ಲಿ ರಾಜ್ಯದಲ್ಲಿ ಸೋಂಕು ತೀವ್ರಗತಿ ಇಳಿಕೆ ದಾಖಲಿಸಿದೆ. ಕಳೆದ ಒಂದು ವಾರದ ಹಿಂದೆ ನಿತ್ಯ 10 ಸಾವಿರ ಮೀರಿ ಸೋಂಕು ಪತ್ತೆಯಾಗುತ್ತಿತ್ತು. ಆದರೆ ಕಳೆದ ಮೂರು ದಿನಗಳಲ್ಲೇ ಸೋಂಕಿನ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡು ಸೋಂಕಿತರ ಸಂಖ್ಯೆ 5 ಸಾವಿರಕ್ಕೆ ಕುಸಿದಿದೆ. ಪ್ರತಿದಿನ ಶೇ.6 ಮೇಲಿದ್ದ ಪಾಸಿಟಿವಿಟಿ ದರ ಶೇ.3ರ ಅಜುಬಾಜಿಗೆ ಇಳಿದಿದೆ.

ಸೋಂಕು ಕಡಿಮೆಯಾಗುವುದರಲ್ಲಿ ಬೆಂಗಳೂರಿನ ಕೊಡುಗೆ ದೊಡ್ಡದು. ಏಕೆಂದರೆ, ರಾಜಧಾನಿಯಲ್ಲಿ ಹೊಸ ಸೋಂಕು ಒಂದು ಸಾವಿರಕ್ಕೂ ಕಡಿಮೆ ಅಂದರೆ 985 ಇದೆ. ಹಾಸನದಲ್ಲಿ 522 ಪ್ರಕರಣಗಳು ವರದಿಯಾಗಿವೆ. ಬೇರೆ ಯಾವುದೇ ಜಿಲ್ಲೆಯಲ್ಲೂ 500 ಮೀರಿ ಪ್ರಕರಣ ದಾಖಲಾಗಿಲ್ಲ. ರಾಜ್ಯದಲ್ಲಿ 1.32 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು ಪಾಸಿಟಿವಿಟಿ ದರ ಶೇ.3.8ಕ್ಕೆ ಕುಸಿದಿದೆ.

ಕೋವಿಡ್‌ನ ಎರಡನೇ ಅಲೆಯ ಆರಂಭದಲ್ಲಿ ನಿರಂತವಾಗಿ ಸಾವಿರ ಪ್ರಕರಣ ವರದಿಯಾಗುತ್ತಿದ್ದ ಬೀದರ್‌ನಲ್ಲಿ ಕೇವಲ 2 ಪ್ರಕರಣ ಮಾತ್ರ ಪತ್ತೆಯಾಗಿದೆ. ಉಳಿದಂತೆ ರಾಯಚೂರು 5, ಯಾದಗಿರಿ 11, ಬಾಗಲಕೋಟೆ 23, ರಾಮನಗರ 25, ಕಲಬುರಗಿ 26, ವಿಜಯಪುರ 50, ಕೊಪ್ಪಳ 30, ಹಾವೇರಿ 29, ಗದಗ 21, ಕೊಡಗು 64, ಚಿಕ್ಕಬಳ್ಳಾಪುರ ಮತ್ತು ಧಾರವಾಡ 65, ಚಾಮರಾಜನಗರ 79, ಬೆಳಗಾವಿ ಮತ್ತು ಚಿತ್ರದುರ್ಗ 95 ಪ್ರಕರಣ ವರದಿಯಾಗಿದೆ. ಹೀಗೆ 15 ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಪ್ರಕರಣ ಬಂದಿದೆ.

ಏ.21 ರಂದು 116 ಮಂದಿ ಮರಣವನ್ನಪ್ಪಿದ್ದು 55 ದಿನದಲ್ಲಿನ ಕಡಿಮೆ ಸಾವು ದಾಖಲಾಗಿದೆ. ಆದರೆ ಮರಣದರ 2.28 ದಾಖಲಾಗಿದ್ದು 7 ದಿನಗಳ ಬಳಿಕ ಶೇ.2ರ ಗಡಿ ದಾಟಿದೆ. ಸತತ ಮೂರನೇ ದಿನ ರಾಜ್ಯದಲ್ಲಿ ಅತಿ ಹೆಚ್ಚು ಸಾವು ಮೈಸೂರು (26)ನಲ್ಲಿ ಸಂಭವಿಸಿದೆ. ಬೆಂಗಳೂರು ನಗರದಲ್ಲಿ 16, ಧಾರವಾಡ 8, ದಾವಣಗೆರೆ 7 ಸಾವು ಸಂಭವಿಸಿದೆ. 7 ಜಿಲ್ಲೆಗಳಲ್ಲಿ ಸಾವು ಸಂಭವಿಸಿಲ್ಲ.

ಸಕ್ರಿಯ ಪ್ರಕರಣಗಳ ಸಂಖ್ಯೆ 1.62 ಲಕ್ಷಕ್ಕೆ ಇಳಿದಿದೆ. ಈವರೆಗೆ ಒಟ್ಟು 27.77 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 33,148 ಮಂದಿ ಮರಣವನ್ನಪ್ಪಿದ್ದಾರೆ. 25.81 ಲಕ್ಷ ಮಂದಿ ಗುಣಮುಖರಾಗಿದ್ದಾರೆ.

ಸೋಂಕು ಮುಕ್ತವಾಗುತ್ತ ಉ.ಕ.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅತಿ ವೇಗವಾಗಿ ಕೋವಿಡ್‌ ಸೋಂಕು ಇಳಿಕೆ ಆಗಿದೆ. ಮಂಗಳವಾರ ಎರಡಂಕಿಯಲ್ಲಿ ಸೋಂಕು ದಾಖಲಾಗಿರುವ 17 ಜಿಲ್ಲೆಗಳಲ್ಲಿ 13 ಜಿಲ್ಲೆಗಳು ಉತ್ತರ ಕರ್ನಾಟಕದವು. ದಾವಣಗೆರೆಯಲ್ಲಿ ಮಾತ್ರ 100ಕ್ಕಿಂತ ಹೆಚ್ಚು ಸೋಂಕು ಪತ್ತೆಯಾಗಿದೆ. ಮಂಗಳವಾರ ಒಟ್ಟು ಸೋಂಕಿನಲ್ಲಿ 540 ಪ್ರಕರಣಗಳು ಅಂದರೆ ಶೇ.11 ರಷ್ಟುಮಾತ್ರ ಉಕದ ಜಿಲ್ಲೆಗಳಿಂದ ಬಂದಿದೆ. ದಕದ 13 ಜಿಲ್ಲೆಗಳಲ್ಲಿ 100ಕ್ಕಿಂತ ಹೆಚ್ಚು ಪ್ರಕರಣ ಪತ್ರೆಯಾಗಿದೆ.

ಲಸಿಕೆ ಅಭಿಯಾನ

ರಾಜ್ಯದಲ್ಲಿ ಮಂಗಳವಾರ 1.59 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದು ಯಾರಲ್ಲಿಯೂ ಗಂಭೀರ ಅಡ್ಡ ಪರಿಣಾಮ ಕಾಣಿಸಿಕೊಂಡಿಲ್ಲ. 1.38 ಲಕ್ಷ ಮಂದಿ ಮೊದಲ ಡೋಸ್‌ ಪಡೆದಿದ್ದು 20,969 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. 18ರಿಂದ 44 ವರ್ಷದೊಳಗಿನ 71,083 ಮಂದಿ, 45 ವರ್ಷ ಮೇಲ್ಪಟ್ಟ60,737 ಮಂದಿ, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು 1,926 ಮಂದಿ ಮೊದಲ ಡೋಸ್‌ ಸ್ವೀಕರಿಸಿದ್ದಾರೆ. 18,364 ಮಂದಿ 45 ವರ್ಷ ಮೇಲ್ಪಟ್ಟವರು, 18 ರಿಂದ 44 ವರ್ಷದೊಳಗಿನ 931 ಮಂದಿ ಮತ್ತು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು 1,674 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ.

ಪಾಸಿಟಿವಿಟಿ ದರ 3.8%

ಬೆಂಗಳೂರಿನಲ್ಲಿ ಕೊರೋನಾ ಕೇಸ್‌ ಎರಡು ತಿಂಗಳಲ್ಲೇ ಮೊದಲ ಬಾರಿ 1000ಕ್ಕಿಂತ ಕೆಳಕ್ಕೆ ಬಂದಿದೆ. ರಾಜ್ಯದಲ್ಲಿ 5041ಕ್ಕೆ ಕುಸಿದಿದೆ. ಪಾಸಿಟಿವಿಟಿ ದರ 3.8%ಕ್ಕೆ ಇಳಿಸಿದೆ. ನಿತ್ಯ ಸಾವಿನ ಸಂಖ್ಯೆಯೂ 115ಕ್ಕೆ ಇಳಿಕೆಯಾಗಿದೆ. ಮಂಗಳವಾರ 1.32 ಲಕ್ಷ ಟೆಸ್ಟ್‌ ಮಾಡಲಾಗಿದೆ.

- ಡಾ| ಸುಧಾಕರ್‌, ಆರೋಗ್ಯ ಸಚಿವ

Follow Us:
Download App:
  • android
  • ios