* 2ನೇ ಅಲೆ ಸೋಂಕಲ್ಲಿ ಡೆಲ್ಟಾತಳಿಯ ಪಾಲು ಶೇ.90ರಷ್ಟು* 35 ರಾಜ್ಯಗಳ 174 ಜಿಲ್ಲೆಗಳಲ್ಲಿ ಡೆಲ್ಟಾದ ವಿವಿಧ ತಳಿ ಪತ್ತೆ* ಎಲ್ಲ ತಳಿಗಳಿಗೂ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ರಾಮಬಾಣ* ಗರ್ಭಿಣಿಯರಿಗೂ ಲಸಿಕೆ: ಶೀಘ್ರ ಮಾರ್ಗಸೂಚಿ ಬಿಡುಗಡೆ

ನವದೆಹಲಿ(ಜೂ.26): ದೇಶದಲ್ಲಿ 2ನೇ ಅಲೆ ವೇಳೆಗೆ ಕಾರಣವಾದ ಡೆಲ್ಟಾರೂಪಾಂತರಿ, ಒಟ್ಟು ಕೇಸಿನ ಪೈಕಿ ಶೇ.90ರಷ್ಟುಜನರಲ್ಲಿ ಸೋಂಕಿಗೆ ಕಾರಣವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜೊತೆಗೆ ದೇಶದ 35 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ 174 ಜಿಲ್ಲೆಗಳಲ್ಲಿ ಅಪಾಯಕಾರಿ ರೂಪಾಂತರಿಗಳು (ಡೆಲ್ಟಾಮತ್ತು ಡೆಲ್ಟಾಪ್ಲಸ್‌) ಪತ್ತೆಯಾಗಿದೆ. ಈ ಪೈಕಿ ಅತಿ ಹೆಚ್ಚು ಕೇಸುಗಳು ಮಹಾರಾಷ್ಟ್ರ, ದೆಹಲಿ, ಪಂಜಾಬ್‌, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ನಲ್ಲಿ ಪತ್ತೆಯಾಗಿದೆ. 2021ರ ಮೇ ತಿಂಗಳಲ್ಲಿ ಒಟ್ಟು ಕೇಸಿನಲ್ಲಿ ಡೆಲ್ಟಾರೂಪಾಂತರಿ ಪಾಲು ಶೇ.10.31 ಇದ್ದರೆ, 2021ರ ವೇಳೆ ಶೇ.51ಕ್ಕೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.

Add Asianetnews Kannada as a Preferred SourcegooglePreferred

ರಾಮಬಾಣ:

ಇದೇ ವೇಳೆ ಕೊರೋನಾದ ವಿವಿಧ ತಳಿಗಳಾದ ಆಲ್ಫಾ, ಬೇಟಾ, ಗಾಮಾ ಮತ್ತು ಡೆಲ್ಟಾತಳಿಗಳ ಮೇಲೆ ಭಾರತದ ಕೋವಿಡ್‌ ಲಸಿಕೆಗಳಾದ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ಹೇಳಿದೆ.

2ನೇ ಅಲೆ ಮುಗಿದಿಲ್ಲ:

ದೇಶದ 75 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಇನ್ನೂ ಶೇ.10ಕ್ಕಿಂತ ಹೆಚ್ಚಿದೆ. 92 ಜಿಲ್ಲೆಗಳಲ್ಲಿ ಶೇ.5-10ರಷ್ಟಿದೆ. ಹೀಗಾಗಿ ಎರಡನೇ ಅಲೆ ಇನ್ನೂ ಮುಗಿದಿಲ್ಲ ಎಂದು ಸರ್ಕಾರ ಹೇಳಿದೆ.

ಗರ್ಭಿಣಿಯರಿಗೂ ಲಸಿಕೆ:

ಗರ್ಭಿಣಿಯರೂ ಕೋವಿಡ್‌ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಅದು ಅವರಿಗೂ ಅನುಕೂಲ ಮಾಡಿಕೊಡಲಿದೆ. ಶೀಘ್ರವೇ ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.