2021ರ ಜುಲೈ ಒಳಗೆ 25 ಕೋಟಿ ಜನರಿಗೆ ಲಸಿಕೆ!

2021ರ ಜುಲೈ ಒಳಗೆ 25 ಕೋಟಿ ಜನರಿಗೆ ಲಸಿಕೆ| 50 ಕೋಟಿ ಲಸಿಕೆ ಖರೀದಿ ಗುರಿ: ಸಚಿವ

Covid 19 Vaccine  Govt looking for 500 mn doses for 25 cr people by July 2021 pod

ನವದೆಹಲಿ(ಅ.05): ಮುಂದಿನ ವರ್ಷದ ಜುಲೈ ಒಳಗೆ ದೇಶದ 25 ಕೋಟಿ ಜನರಿಗೆ ಆದ್ಯತೆಯ ಮೇಲೆ ಕೊರೋನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 40ರಿಂದ 50 ಕೋಟಿ ಡೋಸ್‌ ಲಸಿಕೆಯನ್ನು ಮೊದಲು ಖರೀದಿಸಿ ಪೂರೈಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ತಿಳಿಸಿದ್ದಾರೆ.

ಕೊರೋನಾ ಲಸಿಕೆಯನ್ನು ನ್ಯಾಯಯುತವಾಗಿ ಹಾಗೂ ಸಮರ್ಪಕವಾಗಿ ವಿತರಣೆ ಮಾಡಲು ನೀತಿ ಆಯೋಗದ ಸದಸ್ಯ ಡಾ|  ವಿ.ಕೆ.ಪೌಲ್‌ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿಯೊಂದು ಯೋಜನೆ ರೂಪಿಸುತ್ತಿದೆ. ಕೇಂದ್ರ ಸರ್ಕಾರವೇ ಲಸಿಕೆ ಖರೀದಿಸಿ ಎಲ್ಲರಿಗೂ ವಿತರಿಸಲಿದ್ದು, ದೇಶದ ಮೂಲೆಮೂಲೆಗೂ ಲಸಿಕೆ ತಲುಪುವಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ನಿಗಾ ಕೂಡ ವಹಿಸಲಿದೆ. ಮೊದಲಿಗೆ ಆರೋಗ್ಯ ಕ್ಷೇತ್ರದಲ್ಲಿರುವವರಿಗೆ ಲಸಿಕೆ ನೀಡಲಾಗುವುದು. ಅದಕ್ಕಾಗಿ ಈ ತಿಂಗಳಾಂತ್ಯದೊಳಗೆ ನಿಮ್ಮ ರಾಜ್ಯದಲ್ಲಿರುವ ಸರ್ಕಾರಿ ಹಾಗೂ ಖಾಸಗಿ ವೈದ್ಯರು, ನರ್ಸ್‌ಗಳು, ಅರೆವೈದ್ಯಕೀಯ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ವಿಚಕ್ಷಣಾಧಿಕಾರಿಗಳ ಪಟ್ಟಿನೀಡಬೇಕು ಎಂದು ಶೀಘ್ರದಲ್ಲೇ ರಾಜ್ಯಗಳಿಗೆ ಸೂಚಿಸಲಾಗುವುದು ಎಂದು ಹೇಳಿದ್ದಾರೆ.

ನೌಕರರಿಗಾಗಿ ಲಸಿಕೆ ಖರೀದಿ: ಕಂಪನಿಗಳಿಗೆ ಅನುಮತಿ?

ದೊಡ್ಡ ದೊಡ್ಡ ಕಂಪನಿಗಳು ತಾವೇ ಕೊರೋನಾ ಲಸಿಕೆ ಖರೀದಿಸಿ ತಮ್ಮ ನೌಕರರಿಗೆ ನೀಡುವುದಕ್ಕೆ ಅನುಮತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ಅಧಿಕಾರಿಗಳ ಮಟ್ಟದಲ್ಲಿ ಈ ಚಿಂತನೆಯಿದ್ದು, ಪ್ರಧಾನಿ ನರೇಂದ್ರ ಮೋದಿ ಒಪ್ಪಿಗೆ ನೀಡಿದರೆ ಜಾರಿಗೆ ಬರಲಿದೆ.

ಇಡೀ ದೇಶಕ್ಕೆ ಲಸಿಕೆ ಖರೀದಿಸಿ ಉಚಿತವಾಗಿ ವಿತರಿಸಲು ಸರ್ಕಾರಗಳಿಗೆ ಉಂಟಾಗುವ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ಹಾಗೂ ಉದ್ದಿಮೆಗಳಲ್ಲಿ ಕೊರೋನಾದ ಭಯವಿಲ್ಲದೆ ಉತ್ಪಾದನಾ ಚಟುವಟಿಕೆಗಳು ಸುಗಮವಾಗಿ ನಡೆಯಲು ಸಾಧ್ಯವಾಗುವಂತೆ ನೋಡಿಕೊಳ್ಳಲು ಆಯಾ ಕಂಪನಿಗಳೇ ಮುಕ್ತ ಮಾರುಕಟ್ಟೆಯಿಂದ ಲಸಿಕೆ ಖರೀದಿಸಿ ತಮ್ಮ ನೌಕರರಿಗೆ ನೀಡಲು ಅನುಮತಿ ನೀಡಬೇಕು ಎಂಬ ಚಿಂತನೆ ನಡೆದಿದೆ. ಆದರೆ, ಅಲ್ಲಿನ ಉದ್ಯೋಗಿಗಳಿಗೂ ಲಸಿಕೆ ನೀಡುವ ಕಾರ್ಯಕ್ರಮ ಸರ್ಕಾರದ ಕಣ್ಗಾವಲಿನಲ್ಲೇ ನಡೆಯಲಿದೆ. ಪೆಟ್ರೋಲಿಯಂ, ಉಕ್ಕು, ಫಾರ್ಮಾ, ಸಿಮೆಂಟ್‌ ಹಾಗೂ ಕಲ್ಲಿದ್ದಲು ಕ್ಷೇತ್ರದಲ್ಲಿರುವ ಕಂಪನಿಗಳಿಗೆ ಈ ಅನುಮತಿ ಸಿಗುವ ಸಾಧ್ಯತೆಯಿದೆ.

ಇನ್ನು, ಇಡೀ ದೇಶಕ್ಕೆ ಕೊರೋನಾ ಲಸಿಕೆಯನ್ನು ಸರ್ಕಾರವೇ ಖರೀದಿಸಿ ಉಚಿತವಾಗಿ ನೀಡುವ ಸಾಧ್ಯತೆಯಿದೆ. ಅದಕ್ಕಾಗಿ 50,000 ಕೋಟಿ ರು. ವೆಚ್ಚ ಮಾಡಲು ಸಿದ್ಧತೆ ನಡೆದಿದೆ. ಆದರೆ, 2021ರಲ್ಲೇ ದೇಶದ ಎಲ್ಲರಿಗೂ ಲಸಿಕೆ ಸಿಗುವ ಸಾಧ್ಯತೆ ಇಲ್ಲ. ಆರೋಗ್ಯ ಕಾರ್ಯಕರ್ತರು, ವೃದ್ಧರು ಹಾಗೂ ಬೇರೆ ರೋಗಗಳಿರುವವರಿಗೆ ಮೊದಲು ಆದ್ಯತೆಯ ಮೇಲೆ ಲಸಿಕೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios