ಕೋವ್ಯಾಕ್ಸಿನ್‌ ಲಸಿಕೆ ಪಡೆಯಲು ಹಲವು ರಾಜ್ಯಗಳಲ್ಲಿ ಹಿಂದೇಟು| ಒಪ್ಪಿಗೆ ಪತ್ರಕ್ಕೆ ಸಹಿ ಹಾಕಲು ಫಲಾನುಭವಿಗಳ ನಕಾರ| ಲಸಿಕೆ ಪ್ರಯೋಗವಿನ್ನೂ ಮುಗಿದಿಲ್ಲ ಎಂಬುದೇ ಕಾರಣ

ನವದೆಹಲಿ(ಜ.19): ಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್‌ ಲಸಿಕೆಯನ್ನು ಪಡೆಯಲು ಹಲವು ರಾಜ್ಯಗಳಲ್ಲಿ ಫಲಾನುಭವಿಗಳು ಹಿಂಜರಿಯುತ್ತಿರುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.

ಲಸಿಕೆ ಪಡೆಯುವ ಮುನ್ನ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಬೇಕು. ಆದರೆ ಬಿಹಾರ, ತಮಿಳುನಾಡು ಹಾಗೂ ತೆಲಂಗಾಣದಂತಹ ರಾಜ್ಯಗಳಲ್ಲಿ ಈ ಒಪ್ಪಿಗೆ ಪತ್ರಕ್ಕೆ ಸಹಿ ಹಾಕುವುದಕ್ಕೇ ಫಲಾನುಭವಿಗಳು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಮೊದಲ ದಿನ ಕೆಲವೊಂದು ರಾಜ್ಯಗಳಲ್ಲಿ ಲಸಿಕೆ ಅಭಿಯಾನ ಶೇ.50ರಷ್ಟೂಯಶಸ್ವಿಯಾಗಿಲ್ಲ. ಈ ಬಗ್ಗೆ ರಾಜ್ಯಗಳು ಕೇಂದ್ರ ಆರೋಗ್ಯ ಸಚಿವರ ಗಮನಕ್ಕೆ ತಂದಿವೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ.

ತಮಿಳುನಾಡಿನಲ್ಲಿ ಲಸಿಕೆ ನೀಡುವ ಮೊದಲ ದಿನವಾದ ಜ.16ರಂದು 600 ಮಂದಿಗೆ ಕೋವ್ಯಾಕ್ಸಿನ್‌ ಲಸಿಕೆ ನೀಡಲು ಉದ್ದೇಶಿಸಲಾಗಿತ್ತು. ಆದರೆ ಕೇವಲ 99 ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ. ಎರಡನೇ ದಿನವೂ 90 ಮಂದಿಯಷ್ಟೇ ಲಸಿಕೆ ಸ್ವೀಕರಿಸಿದ್ದಾರೆ. ರಾಜಸ್ಥಾನದಲ್ಲಿ 600 ಮಂದಿಗೆ ಲಸಿಕೆ ಹಾಕುವ ಗುರಿ ಇತ್ತಾದರೂ 314 ಮಂದಿ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಸ್ವೀಕರಿಸಿದವರಲ್ಲಿ ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ. ಆದರೂ ಫಲಾನುಭವಿಗಳು ಲಸಿಕೆ ಪಡೆಯುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿ ವಿವರಿಸಿದೆ. ಕೋವ್ಯಾಕ್ಸಿನ್‌ ಲಸಿಕೆ ನೀಡಲು 11 ರಾಜ್ಯಗಳಲ್ಲಿ ತಲಾ 6 ಕೇಂದ್ರಗಳನ್ನು ತೆರೆಯಲಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಜತೆಗೂಡಿ ಹೈದರಾಬಾದ್‌ ಮೂಲದ ಭಾರತ ಬಯೋಟೆಕ್‌ ಕಂಪನಿ ಕೋವ್ಯಾಕ್ಸಿನ್‌ ಅಭಿವೃದ್ಧಿಪಡಿಸಿದೆ. ಈ ಲಸಿಕೆ ಇನ್ನೂ 3ನೇ ಹಂತದ ಕ್ಲಿನಿಕಲ್‌ ಪ್ರಯೋಗಕ್ಕೆ ಒಳಪಡುತ್ತಿದೆ. ಹೀಗಾಗಿ ಹಲವು ರಾಜಕಾರಣಿಗಳು ಹಾಗೂ ತಜ್ಞರು ಲಸಿಕೆಯ ಕ್ಷಮತೆ ಬಗ್ಗೆ ಪ್ರಶ್ನೆ ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಜನರು ಲಸಿಕೆ ಸ್ವೀಕಾರಕ್ಕೆ ಜನರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.