ನವದೆಹಲಿ(ಮೇ.19): ದೇಶದೆಲ್ಲೆಡೆ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಕೊರೋನಾ 2ನೇ ಅಲೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ತುತ್ತತುದಿಯನ್ನು ತಲುಪಿದೆ. ಇನ್ನು ಅದು ಇಳಿಕೆಯ ಹಾದಿಯಲ್ಲಿ ಸಾಗಲಿದೆ ಎಂದು ಕೇಂದ್ರ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯೊಂದು ಹೇಳಿದೆ.

ಇದೇ ವೇಳೆ ತಮಿಳುನಾಡು, ಅಸ್ಸಾಂ ಮತ್ತು ಪಂಜಾಬ್‌ಗಳಲ್ಲಿ ಮುಂದಿನ ಎರಡು ವಾರಗಳಲ್ಲಿ ಸೋಂಕು ತನ್ನ ತುತ್ತತುದಿಯನ್ನು ತಲುಪಲಿದೆ ಎಂದು ಸಮಿತಿಯ ಮಾದರಿ ಅಧ್ಯಯನ ವರದಿ ತಿಳಿಸಿದೆ.

"

ಐಐಟಿ ತಜ್ಞರ ಲೆಕ್ಕಾಚಾರ:

ಕೊರೋನಾ ಮೊದಲ ಅಲೆಯ ವೇಳೆ ಕೇಂದ್ರ ಸರ್ಕಾರವು ಹೈದ್ರಾಬಾದ್‌ ಐಐಟಿಯ ಪ್ರೊ.ವಿದ್ಯಾಸಾಗರ್‌, ಐಐಟಿ ಕಾನ್ಪುರದ ಪ್ರೊಫೆಸರ್‌ ಮಣೀಂದ್ರ ಅಗರ್‌ವಾಲ್‌ ಮತ್ತು ಇಂಟಿಗ್ರೇಟೆಡ್‌ ಡಿಫೆನ್ಸ್‌ ಸ್ಟಾಫ್‌ನ ಮಾಧುರಿ ಕಾನಿಟ್ಕರ್‌ ಅವರನ್ನೊಳಗೊಂಡ ಮೂವರು ತಜ್ಞರ ಸಮಿತಿಯೊಂದನ್ನು ರಚಿಸಿತ್ತು. ಅದು ಇದುವರೆಗೆ ಸೋಂಕು ಸಾಗಿ ಬಂದ ಹಾದಿಯನ್ನು ಅನುಸರಿಸಿ ಗಣಿತ ಲೆಕ್ಕಾಚಾರದ ‘ಸೂತ್ರ’ ಎಂಬ ಮಾದರಿ ರಚಿಸಿ ಅದರ ಅನ್ವಯ ಮುಂದಿನ ದಿನಗಳಲ್ಲಿ ಸೋಂಕಿನ ಹಾದಿಯನ್ನು ವಿಶ್ಲೇಷಿಸುತ್ತಿದೆ.

ಈಗಾಗಲೇ ಗರಿಷ್ಠ:

ಸಮಿತಿಯ ಹೊಸ ಲೆಕ್ಕಾಚಾರದ ಅನ್ವಯ ಒಟ್ಟಾರೆ ದೇಶವು ಈಗಾಗಲೇ ಮೇ 4ರಂದೇ ತನ್ನ ಗರಿಷ್ಠ ಮಟ್ಟಮುಟ್ಟಿದೆ. ತದನಂತರದಲ್ಲಿ ಒಂದೆರಡು ದಿನ ಏರಿಕೆಯ ಹೊರತಾಗಿ ಇಳಿಕೆಯ ಹಾದಿಯಲ್ಲಿ ಸಾಗಿದೆ. ಇನ್ನು ರಾಜ್ಯಗಳ ಲೆಕ್ಕಾಚಾರಕ್ಕೆ ಬಂದರೆ ದೆಹಲಿ, ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್‌ಗಢ, ಗುಜರಾತ್‌, ಮಧ್ಯಪ್ರದೇಶಗಳಲ್ಲೂ ಕೋವಿಡ್‌ 2ನೇ ಅಲೆ ತನ್ನ ಗರಿಷ್ಠ ಮಟ್ಟಮುಟ್ಟಿಇಳಿಕೆ ಹಾದಿಯಲ್ಲಿ ಸಾಗಿದೆ ಎಂದು ತಿಳಿಸಿದೆ.

ಶೀಘ್ರ ಇಳಿಕೆ:

ತಮಿಳುನಾಡು, ಪಂಜಾಬ್‌, ಹಿಮಾಚಲ ಪ್ರದೇಶ, ಅಸ್ಸಾಂನಲ್ಲಿ ಕೊರೋನಾ 2ನೇ ಅಲೆಯ ಆರ್ಭಟ ಇನ್ನೂ ಮುಗಿದಿಲ್ಲ. ತಮಿಳುನಾಡಿನಲ್ಲಿ ಮೇ 29-31, ಪುದುಚೇರಿ ಮೇ 19-20, ಅಸ್ಸಾಂ ಮೇ 20-21, ಮೇಘಾಲಯ ಮೇ 30-31, ತ್ರಿಪುರಾ ಮೇ 26-27, ಹಿಮಾಚಲಪ್ರದೇಶ ಮೇ 24, ಪಂಜಾಬ್‌ ಮೇ 22ರ ವೇಳೆಗೆ ತನ್ನ ಗರಿಷ್ಠ ಮಟ್ಟಮುಟ್ಟಬಹುದು. ಆದರೆ ಉತ್ತರ ಮತ್ತು ಈಶಾನ್ಯದ ಹಲವು ರಾಜ್ಯಗಳು ಇನ್ನೂ ತಮ್ಮ ಗರಿಷ್ಠ ಮಟ್ಟತಲುಪಿಲ್ಲ. ಹೀಗಾಗಿ ಅಲ್ಲಿ ಇಳಿಕೆಗೆ ಇನ್ನಷ್ಟುಸಮಯ ಬೇಕಿದೆ ಎಂದು ವರದಿ ಹೇಳಿದೆ.

ಯಾವ ರಾಜ್ಯಗಳಲ್ಲಿ 2ನೇ ಅಲೆ ತುತ್ತತುದಿಗೆ?

ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ಮಧ್ಯ ಪ್ರದೇಶ, ಜಾರ್ಖಂಡ್‌, ರಾಜಸ್ಥಾನ, ಕೇರಳ, ಸಿಕ್ಕಿಂ, ಉತ್ತರಾಖಂಡ, ಗುಜರಾತ್‌, ಹರ್ಯಾಣ ಮತ್ತು ದೆಹಲಿ

ಯಾವ ರಾಜ್ಯದಲ್ಲಿ ಇನ್ನೂ ಇಲ್ಲ?

ತಮಿಳುನಾಡು, ಪಂಜಾಬ್‌, ಹಿಮಾಚಲ ಪ್ರದೇಶ, ಅಸ್ಸಾಂ ಹಾಗೂ ಈಶಾನ್ಯ ಭಾರತದ ರಾಜ್ಯಗಳು

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona