ಕೋವಿಡ್ ನಿಗ್ರಹ: ಇಂದು ಮೋದಿ 3 ತುರ್ತು ಸಭೆ
ದೇಶದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮಿತಿ ಮೀರಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂರು ತುರ್ತು ಸಭೆಗಳನ್ನು ಹಮ್ಮಿಕೊಂಡಿದ್ದಾರೆ. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ.
ನವದೆಹಲಿ (ಏ.23): ಕೊರೋನಾ ಪ್ರಕರಣಗಳ ಏರಿಕೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ, ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದ ಭೇಟಿ ರದ್ದುಗೊಳಿಸಿದ್ದಾರೆ. ಅದರ ಬದಲು ಅವರು ದಿಲ್ಲಿಯಲ್ಲಿ ಮೂರು ಉನ್ನತ ಮಟ್ಟದ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ದೇಶದಲ್ಲಿನ ಕೊರೋನಾ ಪರಿಸ್ಥಿತಿಯ ಕುರಿತಂತೆ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಬಳಿಕ 10 ಗಂಟೆಗೆ ಕೊರೋನಾ ಪ್ರಕರಣಗಳು ಹೆಚ್ಚಿರುವ ಕರ್ನಾಟಕವೂ ಸೇರಿದಂತೆ ಪ್ರಮುಖ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಮಧ್ಯಾಹ್ನ 12.30ರ ವೇಳೆಗೆ ಪ್ರಮುಖ ಆಮ್ಲಜನಕ ಉತ್ಪಾದಕ ಘಟಕಗಳ ಮುಖ್ಯಸ್ಥರ ಜೊತೆ ವರ್ಚುವಲ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
2365 ಸೋಂಕಿತರ ಸಾವು : ದೇಶದಲ್ಲಿ 1 ದಿನದ ದಾಖಲೆ .
ಇದೇ ವೇಳೆ ತಮ್ಮ ಪಶ್ಚಿಮ ಬಂಗಾಳ ಪ್ರವಾಸ ರದ್ದಾದ ಹೊರತಾಗಿಯೂ ಸಂಜೆ 5 ಗಂಟೆಗೆ ವರ್ಚುವಲ್ ರಾರಯಲಿಯ ಮೂಲಕ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಶ್ಚಿಮ ಬಂಗಾಳದಲ್ಲಿ ಮೋದಿ ಅವರು ಶುಕ್ರವಾರ 4 ರಾರಯಲಿಗಳಲ್ಲಿ ಭಾಗಿ ಆಗಬೇಕಿತ್ತು.
ಆಕ್ಸಿಜನ್ ಕೊರತೆ ಇತ್ಯರ್ಥಕ್ಕೆ ಸೂಚನೆ
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರಿಗೆ ಆಮ್ಲಜನಕಕ್ಕೆ ಹಾಹಾಕಾರ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಧಿಕಾರಿಗಳ ಜತೆ ಅತ್ಯುನ್ನತ ಸಭೆ ನಡೆಸಿದರು. ‘ಆಮ್ಲಜನಕ ಉತ್ಪಾದನೆ ಹೆಚ್ಚಿಸಿ, ವಿತರಣೆಗೆ ವೇಗ ನೀಡಬೇಕು. ಆಸ್ಪತ್ರೆಗಳಿಗೆ ಆಮ್ಲಜನಕ ಒದಗಿಸಲು ನವೀನ ವಿಧಾನ ಬಳಸಬೇಕು. ಆಕ್ಸಿಜನ್ ಕಾಳಸಂತೆಯನ್ನು ಮಟ್ಟಹಾಕಬೇಕು’ ಎಂದು ಸೂಚನೆ ನೀಡಿದರು.