Oxygen ಇಲ್ಲದೆ ಮೃತಪಟ್ಟವರ ಆಡಿಟ್ ನಡೆಸಿ: ಕೇಂದ್ರ ಸರ್ಕಾರಕ್ಕೆ ಶಿಫಾರಸು
ಆಕ್ಸಿಜನ್ ಇಲ್ಲದೆ ಮೃತಪಟ್ಟವರ ಸಾವುಗಳ ಪರಿಶೀಲನೆ ಅಗತ್ಯ. ಈ ಹಿನ್ನೆಲೆ ಕೋವಿಡ್ ಡೆತ್ ಆಡಿಟ್ ನಡೆಸಿ ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ಹಾಗೂ, ಆಕ್ಸಿಜನ್ ಇಲ್ಲದೆ ಸೋಂಕಿತರು ಮೃತಪಟ್ಟಿಲ್ಲ ಎಂಬ ಮಾಹಿತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ನವದೆಹಲಿ: ‘ಕೋವಿಡ್ ಸಾಂಕ್ರಾಮಿಕದ 2ನೇ ಅಲೆ ವೇಳೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಲಭ್ಯವಿಲ್ಲದೆ ಮೃತಪಟ್ಟ ಸೋಂಕಿತರ ಕುರಿತು ಆಡಿಟ್ ನಡೆಸಿ’ ಎಂದು ಆರೋಗ್ಯದ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಇದೇ ವೇಳೆ ಆಕ್ಸಿಜನ್ ಇಲ್ಲದೆ ಯಾವುದೇ ಸೋಂಕಿತರು ಮೃತಪಟ್ಟಿಲ್ಲ ಎಂಬ ಕೇಂದ್ರ ಸರ್ಕಾರದ ಮಾಹಿತಿ ಅತ್ಯಂತ ದುರದೃಷ್ಟಕರ ಎಂದಿರುವ ಸಮಿತಿ, ಸರ್ಕಾರದ ಸಂಸ್ಥೆಗಳು ಇನ್ನಷ್ಟು ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕಿದೆ ಎಂದು ಹೇಳಿದೆ. ಸಮಾಜವಾದಿ ಪಕ್ಷದ ಸಂಸದ ರಾಮ್‌ಗೋಪಾಲ್ ಯಾದವ್ ಅಧ್ಯಕ್ಷರಾಗಿರುವ, ಕರ್ನಾಟಕದ ಬಿಜೆಪಿ ಸಂಸದೆ ಮಂಗಳಾ ಸುರೇಶ್ ಅಂಗಡಿ ಮತ್ತು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಸದಸ್ಯರಾಗಿರುವ ಸಮಿತಿಯು ತನ್ನ 137ನೇ ವರದಿಯನ್ನು ರಾಜ್ಯಸಭೆಗೆ ಸಲ್ಲಿಸಿದ್ದು ಅದರಲ್ಲಿ ಈ ಶಿಫಾರಸುಗಳನ್ನು ಮಾಡಿದೆ.
ಶಿಫಾರಸಿನಲ್ಲೇನಿದೆ..?:
ಕೋವಿಡ್ ಸಾಂಕ್ರಾಮಿಕದ ವೇಳೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದೇ ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಗೋಳಿಡುವ, ಸಿಲಿಂಡರ್‌ಗೆ ಸರದಿ ನಿಂತಿರುವ ಹಲವು ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಹೀಗಾಗಿ ಆಕ್ಸಿಜನ್ ಇಲ್ಲದೇ ಸಾವನ್ನಪ್ಪಿದ ಕೋವಿಡ್ ಸೋಂಕಿತರ ಕುರಿತು ಸರ್ಕಾರ ನಿಖರವಾಗಿ ಪರಿಶೀಲನೆ ನಡೆಸಬೇಕು. ಈ ಮೂಲಕ ಸಾವನ್ನಪ್ಪಿದವರ ತ್ವರಿತ ದಾಖಲಾತಿಗೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಅವರಿಗೆ ಸೂಕ್ತ ಪರಿಹಾರ ಸಿಗುವಂತೆ ನೋಡಿಕೊಳ್ಳಬೇಕು ಎಂದು ವರದಿ ಹೇಳಿದೆ.
ಇದನ್ನು ಓದಿ: ದೇಹದಲ್ಲಿ ಆಮ್ಲಜನಕದ ಮಟ್ಟ ಹೆಚ್ಚಿಸೋಕೆ ಈ ಹಣ್ಣು ತಿನ್ಬೋದು
ಇದೇ ವೇಳೆ, 2020ರಲ್ಲಿ ಸಲ್ಲಿಸಿದ್ದ ನಮ್ಮ 123ನೇ ವರದಿಯಲ್ಲೇ, ದೇಶದಲ್ಲಿ ಆಕ್ಸಿಜನ್ ಕೊರತೆ ಎದುರಾಗಬಹುದಾದ ಬಗ್ಗೆ ಎಚ್ಚರಿಕೆ ನೀಡಿದ್ದರೂ, ಸರ್ಕಾರ ಆಕ್ಸಿಜನ್ ಸಿಲಿಂಡರ್ ಮತ್ತು ಆಕ್ಸಿಜನ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಭರವಸೆ ನೀಡಿತ್ತು. ಆದರೆ ಸರ್ಕಾರದ ಪೊಳ್ಳು ಭರವಸೆಗಳು ಕೋವಿಡ್ 2ನೇ ಅಲೆಯ ವೇಳೆ ಬಹಿರಂಗವಾಯಿತು. ಬೇಡಿಕೆ ಹೆಚ್ಚಾಗಿದ್ದ ವೇಳೆ ಆಕ್ಸಿಜನ್ ಅನ್ನು ಸಮ ಪ್ರಮಾಣವಾಗಿ ಹಂಚಿಕೆ ಮಾಡುವಲ್ಲಿ ಮತ್ತು ನಿರಂತರವಾಗಿ ಪೂರೈಕೆ ಮಾಡುವಲ್ಲಿ ಸರ್ಕಾರ ವಿಫಲವಾಯಿತು. ಇದು ಕಂಡು ಕೇಳರಿಯದ ವೈದ್ಯಕೀಯ ಸಂಕಷ್ಟಕ್ಕೆ ನಾಂದಿ ಹಾಡಿತು ಎಂದು ವರದಿಯಲ್ಲಿ ಸರ್ಕಾರದ ವಿರುದ್ಧ ಕಿಡಿ ಕಾರಲಾಗಿದೆ. ಇದರ ಜೊತೆಗೆ ಆಕ್ಸಿಜನ್ ಉತ್ಪಾದನೆ, ವೈದ್ಯಕೀಯ ಆಕ್ಸಿಜನ್ ಲಭ್ಯತೆ, ಆಕ್ಸಿಜನ್ ಸೌಲಭ್ಯ ಮತ್ತು ವೆಂಟಿಲೇಟರ್ ಸೌಲಭ್ಯ ಇರುವ ಬೆಡ್‌ಗಳ ಬಗ್ಗೆ ಸರ್ಕಾರ ನಿಗಾ ವಹಿಸದೇ ಇದ್ದದ್ದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: Omicron Variant: ನಿಯಂತ್ರಣ ಮೀರಿದ ಸೋಂಕು, ರೋಗಲಕ್ಷಣ ಕಡಿಮೆಯಿದ್ದರೂ ಅಸಡ್ಡೆ ಬೇಡ: ತಜ್ಞರು
ಆಕ್ಸಿಜನ್ ಇಲ್ಲದೆ ಮೃತಪಟ್ಟ ಕೋವಿಡ್ ಸೋಂಕಿತರ ಸಾವಿನ ಬಗ್ಗೆ ಮಾಹಿತಿ ಕೊಡಿ ಎಂಬ ಕೇಂದ್ರ ಸರ್ಕಾರದ ಸೂಚನೆಗೆ 20 ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿಕ್ರಿಯಿಸಿದ ರೀತಿ ಮತ್ತು ಯಾವುದೇ ಸಾವು ಸಂಭವಿಸಿಲ್ಲ ಎಂಬ ರಾಜ್ಯ ಸರ್ಕಾರಗಳು ನೀಡಿದ ಮಾಹಿತಿ ಬಗ್ಗೆಯೂ ಆರೋಗ್ಯದ ಕುರಿತ ಸಂಸದೀಯ ಸ್ಥಾಯಿ ಸಮಿತಿ ಅಚ್ಚರಿ ವ್ಯಕ್ತಪಡಿಸಿದೆ.