ನವದೆಹಲಿ (ಮೇ.21): ಒಳಾಂಗಣ ಪ್ರದೇಶಗಳಲ್ಲಿ ಗಾಳಿಯ ಸರಾಗ ಹರಿವು ಕೊರೋನಾ ವೈರಸ್‌ ಪ್ರಸರಣವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿರುವ ಕೇಂದ್ರ ಸರ್ಕಾರ, ಈ ಕುರಿತು ನಾಗರಿಕರು ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹವಾನಿಯಂತ್ರಕ (ಎ.ಸಿ.)ಗಳನ್ನು ಚಾಲೂ ಮಾಡಬಹುದು. ಆದರೆ ಎ.ಸಿ. ಹಾಕಿದಾಗ ಕಿಟಕಿ, ಬಾಗಿಲು ತೆರೆದಿರಬೇಕು. ಒಳಾಂಗಣ ಪ್ರದೇಶಗಳಲ್ಲಿ ಫ್ಯಾನ್‌ಗಳನ್ನು ಬಳಸಿದರೆ ಸೋಂಕು ಹರಡುವ ಸಾಧ್ಯತೆಯಿರುತ್ತದೆ ಎಂದು ತಿಳಿಸಿದೆ.

ಸೋಂಕಿತ ವ್ಯಕ್ತಿಯ ಬಾಯಿ ಅಥವಾ ಮೂಗಿನಿಂದ ಸಿಡಿಯುವ ದ್ರವರೂಪದ ದೊಡ್ಡ ಕಣಗಳು ನೆಲದ ಮೇಲೆ ಅಥವಾ ಯಾವುದಾದರೂ ಮೇಲ್ಮೈ ಮೇಲೆ ಬೀಳುತ್ತವೆ. ಆದರೆ ಸಣ್ಣ ಕಣಗಳು 10 ಮೀಟರ್‌ ದೂರದವರೆಗೆ ಗಾಳಿಯಲ್ಲಿ ಸಾಗುತ್ತವೆ. ಹೊರಗಿನ ಗಾಳಿ ಸರಾಗವಾಗಿ ಒಳಾಂಗಣಕ್ಕೆ ಬಂದರೆ ಕೊರೋನಾ ಕಣಗಳ ಸಾಂದ್ರತೆಯನ್ನು ಕಡಿಮೆಗೊಳಿಸಬಹುದು ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ವಿಜಯ ರಾಘವನ್‌ ಅವರ ಕಚೇರಿ ಬಿಡುಗಡೆ ಮಾಡಿರುವ ಮಾರ್ಗಸೂಚಿ ಹೇಳುತ್ತದೆ.

ಫ್ಯಾನ್‌ ಬಳಸುವಾಗ ಜಾಗ್ರತೆ:

ಒಳಾಂಗಣದಲ್ಲಿ ಫ್ಯಾನ್‌ ಎಲ್ಲಿ ಇಡಬೇಕು ಎಂಬುದು ಮಹತ್ವದ ಪಾತ್ರ ವಹಿಸುತ್ತದೆ. ಅಶುದ್ಧ ಗಾಳಿ ಯಾರಿಗೋ ಅಪ್ಪಳಿಸುವ ರೀತಿ ಫ್ಯಾನ್‌ ಅನ್ನು ಇಡಬಾರದು. ಒಂದು ವೇಳೆ, ಕೋಣೆಯ ಕಿಟಕಿ ಹಾಗೂ ಬಾಗಿಲುಗಳು ಬಂದ್‌ ಆಗಿದ್ದರೆ ಎಕ್ಸ್‌ಹಾಸ್ಟ್‌ ಫ್ಯಾನ್‌ಗಳು ಓಡುತ್ತಿರಬೇಕು. ಪೆಡೆಸ್ಟಲ್‌ ಫ್ಯಾನ್‌ ಅನ್ನು ಎಕ್ಸ್‌ಹಾಸ್ಟ್‌ ಫ್ಯಾನ್‌ನತ್ತ ತಿರುಗಿಸಿಡಬೇಕು. ಅಂದರೆ ಬಾಗಿಲು, ಕಿಟಕಿಗೆ ಮುಖ ಮಾಡಿ ಇಡಬೇಕು. ಇದರಿಂದಾಗಿ ಸಾಕಷ್ಟುಹೊಸ ಗಾಳಿ ಬಂದು ಹೆಚ್ಚಿನ ರಕ್ಷಣೆ ಸಿಗುತ್ತದೆ ಎಂದು ‘ಪ್ರಸರಣ ತಪ್ಪಿಸಿ, ಸೋಂಕು ನಿಷ್ಕ್ರೀಯಗೊಳಿಸಿ’ ಎಂಬ ಹೆಸರಿನ ಮಾರ್ಗಸೂಚಿ ತಿಳಿಸಿದೆ.

ವಾಸನೆಯನ್ನು ಗಾಳಿಯ ಮೂಲಕ ಹೇಗೆ ಕಡಿಮೆ ಮಾಡಬಹುದೋ ಅದೇ ರೀತಿ ವೈರಸ್‌ನ ಅಪಾಯಕಾರಿ ಸಾಂದ್ರತೆಯನ್ನೂ ಹೊರಗಿನ ಗಾಳಿಯ ಹರಿವಿನ ಮೂಲಕ ಕಡಿಮೆ ಮಾಡಬಹುದು ಎಂದು ಹೇಳಿದೆ.

ಕಿಟಕಿ ತೆರೆದು ಎಸಿ ಹಾಕಿ:

ಸಾಮಾನ್ಯವಾಗಿ ಕಚೇರಿಗಳಲ್ಲಿ ಎಸಿ ಚಾಲೂ ಮಾಡಿದರೆ ಕಿಟಕಿ, ಬಾಗಿಲು ಬಂದ್‌ ಮಾಡಲಾಗುತ್ತದೆ. ಅದರ ಬದಲಿಗೆ ಕಿಟಕಿ, ಬಾಗಿಲುಗಳನ್ನು ತೆರೆದಿಟ್ಟು ಹವಾನಿಯಂತ್ರಕಗಳನ್ನು ಚಾಲೂ ಮಾಡಬೇಕು. ಇದರಿಂದ ಶುದ್ಧ ಗಾಳಿ ಒಳಭಾಗಕ್ಕೆ ಬರುತ್ತದೆ. ವೈರಾಣು ಕಣಗಳನ್ನು ದುರ್ಬಲಗೊಳಿಸುತ್ತದೆ. ಇನ್ನೂ ಹೆಚ್ಚಿನ ಗಾಳಿ ಬೇಕೆಂದಾದರೆ ಎಕ್ಸ್‌ಹಾಸ್ಟ್‌ ಫ್ಯಾನ್‌ ಕೂಡ ಬಳಸಬಹುದು ಎಂದು ವಿವರಿಸಿದೆ.

ರಾಜ್ಯದ 21 ಜಿಲ್ಲೆಗಳಲ್ಲಿ ಸೋಂಕಿತರಿಗಿಂತ ಚೇತರಿಕೆ ಹೆಚ್ಚಳ..

ಸೋಂಕಿತನಿಂದ ಸಿಡಿಯುವ ಕಣಗಳು ಮೇಲ್ಮೈ ಮೇಲೆ ಹೆಚ್ಚು ಕಾಲ ಉಳಿಯುತ್ತವೆ. ಹೀಗಾಗಿ ಡೋರ್‌ ಹ್ಯಾಂಡಲ್‌, ಲೈಟ್‌ ಸ್ವಿಚ್‌, ಮೇಜು, ಕುರ್ಚಿ ಹಾಗೂ ನೆಲವನ್ನು ಸೋಂಕು ನಿವಾರಕ ಬಳಸಿ ಪದೇಪದೇ ಶುಚಿಗೊಳಿಸಬೇಕು ಎಂದು ಹೇಳಿದೆ.

- ಮಾರ್ಗಸೂಚಿಯಲ್ಲೇನಿದೆ?

- ಅಶುದ್ಧ ಗಾಳಿ ಯಾರಿಗೋ ಅಪ್ಪಳಿಸುವ ರೀತಿ ಫ್ಯಾನ್‌ ಇಡಬಾರದು.

- ಪೆಡೆಸ್ಟಲ್‌ ಫ್ಯಾನ್‌ ಆಗಿದ್ದರೆ ಗಾಳಿ ಹೊರಹೋಗುವಂತೆ ಇರಿಸಬೇಕು

- ಎಸಿ ಚಾಲೂ ಮಾಡಬಹುದು, ಆದರೆ ಕಿಟಕಿ-ಬಾಗಿಲು ತೆರೆದಿಡಬೇಕು

- ಹೀಗೆ ತೆರೆದಿಟ್ಟರೆ ಸಾಕಷ್ಟುಹೊಸ ಗಾಳಿ ಬಂದು ಹೆಚ್ಚಿನ ರಕ್ಷಣೆ

- ಸೋಂಕಿತನನ ಬಾಯಿ, ಮೂಗಿನಿಂದ ಸಿಡಿವ ದ್ರವದಿಂದ ವೈರಸ್‌ ಹರಡುತ್ತೆ

- ಸೋಂಕಿತರು ಸಿಡಿಸಿದ ಕಣಗಳು 10 ಮೀಟರ್‌ ದೂರ ಕ್ರಮಿಸಬಲ್ಲವು

- ಹೀಗಾಗಿ ಮನೆ/ಕಚೇರಿಯಲ್ಲಿನ ಮೇಜು, ಕುರ್ಚಿ, ಸ್ವಿಚ್‌ ಪದೇ ಪದೇ ಶುಚಿ ಮಾಡಬೇಕು

- ಕೊರೋನಾದಿಂದ ಪಾರಾಗಲು ಡಬಲ್‌ ಲೇಯರ್‌/ಎನ್‌-95 ಮಾಸ್ಕ್‌ ಬಳಸಬೇಕು

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona