ರಾಜ್ಯದ 21 ಜಿಲ್ಲೆಗಳಲ್ಲಿ ಸೋಂಕಿತರಿಗಿಂತ ಚೇತರಿಕೆ ಹೆಚ್ಚಳ

* ಒಂದೇ ದಿನ 28869 ಕೇಸ್‌, 52257 ಮಂದಿ ಗುಣಮುಖ
* ಸತತ 3ನೇ ದಿನ ಸೋಂಕಿತರಿಗಿಂತ ಚೇತರಿಸಿಕೊಂಡವರೇ ಹೆಚ್ಚು
* 5.34 ಲಕ್ಷಕ್ಕೆ ಸಕ್ರಿಯ ಕೇಸ್‌
 

Increased Corona Recovery in 21 Districts in Karnataka grg

ಬೆಂಗಳೂರು(ಮೇ.21): ರಾಜ್ಯದಲ್ಲಿ ಕೊರೋನಾ ಗುಣಮುಖರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದ್ದು, ಗುರುವಾರ ಹೊಸ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಬಹುತೇಕ ದುಪ್ಪಟ್ಟಿದೆ. 28,869 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ, ಬರೋಬ್ಬರಿ 52,257 ಮಂದಿ ಗುಣಮುಖರಾಗಿದ್ದಾರೆ. ಇದೇ ವೇಳೆ ಕೋವಿಡ್‌ಗೆ ಬಲಿಯಾಗುವವರ ಸಂಖ್ಯೆಯೂ ಹೆಚ್ಚಿದ್ದು, 548 ಮಂದಿ ಮರಣವನ್ನಪ್ಪಿದ್ದಾರೆ.

Increased Corona Recovery in 21 Districts in Karnataka grg

ರಾಜ್ಯದಲ್ಲಿ ಸತತ ಮೂರನೇ ದಿನ ಹೊಸ ಸೋಂಕಿತರಿಗಿಂತ ಗುಣಮುಖಗೊಂಡವರ ಸಂಖ್ಯೆ ಹೆಚ್ಚಿದೆ. ಇದರಿಂದಾಗಿ 6 ಲಕ್ಷ ಗಡಿ ದಾಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 5.34 ಲಕ್ಷಕ್ಕೆ ಇಳಿದಿದೆ. ಬೆಂಗಳೂರು ನಗರದಲ್ಲಿ 25,776 ಮಂದಿ ಕೋವಿಡ್‌ ಜಯಿಸಿದ್ದಾರೆ. ಉಳಿದಂತೆ ಬಳ್ಳಾರಿ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಬೀದರ್‌, ಚಾಮರಾಜನಗರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ದಾವಣಗೆರೆ, ಹಾಸನ, ಕಲಬುರಗಿ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ ಮತ್ತು ಯಾದಗಿರಿ ಹೀಗೆ ರಾಜ್ಯದ 21 ಜಿಲ್ಲೆಗಳಲ್ಲಿ ಗುಣಮುಖರ ಸಂಖ್ಯೆ ಹೆಚ್ಚಿದೆ.

"

ಸಾವಿನ ಪ್ರಮಾಣದಲ್ಲಿ ರಾಜ್ಯ ಮತ್ತೆ 500ರ ಗಡಿ ದಾಟಿದೆ. ಫೆ. 12ರಂದು ಶೇ. 2.10ರ ಮರಣ ದರ ದಾಖಲಾದ ಬಳಿಕದ ಅತ್ಯಂತ ಹೆಚ್ಚಿನ ಮರಣ ದರ ಶೇ 1.89 ಗುರುವಾರ ದಾಖಲಾಗಿದೆ. ಮೇ 10 ರಂದು 596, ಮೇ 7 ರಂದು 592 ಮಂದಿ ಮರಣವನ್ನಪ್ಪಿದ್ದ ಬಳಿಕ ತೃತೀಯ ಗರಿಷ್ಠ ಸಾವು ಗುರುವಾರ ಘಟಿಸಿದೆ. ಕಳೆದ ಮೂರು ದಿನದಲ್ಲಿ 1,535 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಳೆದ 13 ದಿನದಲ್ಲಿ ಒಟ್ಟು ಐದು ಬಾರಿ ದೈನಂದಿನ ಸಾವಿನ ಸಂಖ್ಯೆ 500ರ ಗಡಿ ಮೀರಿದೆ.

ಬ್ಲ್ಯಾಕ್‌ ಆಯ್ತು ಈಗ ಅದಕ್ಕೂ ಭಯಾನಕ ವೈಟ್ ಫಂಗಸ್ ಕಾಟ

ಗುರುವಾರ 1.20 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು ಶೇ.23.91ರ ಪಾಸಿಟಿವಿಟಿ ದರ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 289, ಬೆಂಗಳೂರು ಗ್ರಾಮಾಂತರದಲ್ಲಿ 37 ಮಂದಿ ಮೃತರಾಗಿದ್ದಾರೆ. ಉಳಿದಂತೆ ಹಾಸನ 23, ಬಳ್ಳಾರಿ 22, ತುಮಕೂರು 21, ಶಿವಮೊಗ್ಗ 17, ಮೈಸೂರು 16, ಕಲಬುರಗಿ 11, ಮಂಡ್ಯ ಮತ್ತು ಧಾರವಾಡದಲ್ಲಿ ತಲಾ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಮೈಸೂರು 1,879, ಮಂಡ್ಯ 1,796, ಬಳ್ಳಾರಿ 1,109, ಧಾರವಾಡ 955, ಬೆಳಗಾವಿ 948, ಚಿಕ್ಕಮಗಳೂರು 945, ದಕ್ಷಿಣ ಕನ್ನಡ 956, ಉಡುಪಿ 809 ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 23.35 ಲಕ್ಷ ಮಂದಿ ಸೋಂಕಿನಿಂದ ಬಾಧಿತರಾಗಿದ್ದು ಈ ಪೈಕಿ 17.76 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 23,854 ಮಂದಿ ಮರಣವನ್ನಪ್ಪಿದ್ದಾರೆ.

ಬೆಂಗಳೂರು ಗ್ರಾಮಾಂತರದಲ್ಲಿ ದಾಖಲೆಯ 37 ಸಾವು!

ಬೆಂಗಳೂರು ಗ್ರಾಮಾಂತರದಲ್ಲಿ 37 ಮಂದಿ ಮರಣವನ್ನಪ್ಪಿದ್ದು ಬೆಂಗಳೂರು ನಗರವನ್ನು ಹೊರತುಪಡಿಸಿ ಜಿಲ್ಲೆಯೊಂದರಲ್ಲಿ ಒಂದೇ ದಿನ ದಾಖಲಾದ ಗರಿಷ್ಠ ಸಾವು ಇದಾಗಿದೆ. ಶೇ.5.45 ಮರಣ ದರ ದಾಖಲಾಗಿದೆ. ಇದು ಬೆಂಗಳೂರು ನಗರದ ಗುರುವಾರದ ಮರಣದರವಾದ ಶೇ.3ಕ್ಕಿಂತಲೂ ಹೆಚ್ಚು. ರಾಜ್ಯದಲ್ಲಿ ಜಿಲ್ಲೆಗಳಲ್ಲಿ ಈ ಬಾರಿ ಹೆಚ್ಚು ಸಾವು ವರದಿಯಾಗುತ್ತಿದ್ದರೂ ದೈನಂದಿನ ಸಾವಿನ ಪ್ರಮಾಣ 30ರ ಗಡಿ ದಾಟುವುದು ವಿರಳ.

Increased Corona Recovery in 21 Districts in Karnataka grg

63140 ಮಂದಿಗೆ ಲಸಿಕೆ

ರಾಜ್ಯದಲ್ಲಿ ಗುರುವಾರ 63,140 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. ಈ ಪೈಕಿ 46,994 ಮಂದಿ ಮೊದಲ ಡೋಸ್‌ ಮತ್ತು 16,146 ಮಂದಿ ಎರಡನೇ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ. 45 ವರ್ಷ ಮೇಲ್ಪಟ್ಟ 34,731, 18 ರಿಂದ 44 ವರ್ಷದೊಳಗಿನ 5,747, ಮುಂಚೂಣಿ ಕಾರ್ಯಕರ್ತರು 5,431, ಆರೋಗ್ಯ ಕಾರ್ಯಕರ್ತರು 1,085 ಮಂದಿ ಮೊದಲ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ. 45 ವರ್ಷ ಮೇಲ್ಪಟ್ಟ 14,282, ಮುಂಚೂಣಿ ಕಾರ್ಯಕರ್ತರು 1,141, ಆರೋಗ್ಯ ಕಾರ್ಯಕರ್ತರು 723 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Latest Videos
Follow Us:
Download App:
  • android
  • ios