ಯಾರಿಗಾದರೂ ಕೋವಿಡ್‌ ಪಾಸಿಟಿವ್‌ ಬಂದರೆ ಅವರ ಮನೆ ಮತ್ತು ಕಚೇರಿ ತಕ್ಷಣ ಬಂದ್‌ ಮಾಡಿ ಸ್ಯಾನಿಟೈಸ್‌ ಮಾಡಬೇಕೆಂಬ ನಿಯಮವಿದೆ. ಇದಕ್ಕೆ ಕೇಂದ್ರ ಮಂತ್ರಿಗಳ ಕಚೇರಿ ಕೂಡ ಹೊರತಲ್ಲ.

ಹೋದ ವಾರ ಶಾಸ್ತ್ರಿ ಭವನದ ಕಾನೂನು ಇಲಾಖೆ ಸಿಬ್ಬಂದಿಗೆ ಕೊರೋನಾ ಬಂದಿದ್ದರಿಂದ ಒಂದು ವಾರ ಹೆಚ್ಚುಕಡಿಮೆ ಶಾಸ್ತ್ರಿ ಭವನದ ಎಲ್ಲಾ ಇಲಾಖೆ ಕಚೇರಿ ಮುಚ್ಚಲಾಗಿತ್ತು. ಹೀಗಾಗಿ ಪ್ರಹ್ಲಾದ್‌ ಜೋಶಿ, ಸದಾನಂದ ಗೌಡ, ಧರ್ಮೇಂದ್ರ ಪ್ರಧಾನ್‌ ವರ್ಕ್ ಫ್ರಂ ಹೋಂ ಮಾಡುವಂತಾಗಿದೆ. ಮೊನ್ನೆ ರಾತ್ರಿ ರೈಲ್ವೆ ಇಲಾಖೆ ಅಧಿಕಾರಿಗೆ ಕೊರೋನಾ ತಗುಲಿದ್ದು, ಪಿಯೂಷ್‌ ಗೋಯಲ್ ಕೂಡ ಮನೆಯಿಂದಲೇ ಕೆಲಸ ಮಾಡುವಂತಾಗಿದೆ.

ಮಮತಾ ದೀದಿ ಅವಕಾಶ ಸಿಕ್ಕಾಗೆಲ್ಲಾ ಮೋದಿ ಜೊತೆ ಜಗಳಕ್ಕೆ ಇಳಿಯುತ್ತಿರೋದರ ಗುಟ್ಟೇನು?

ಕ್ಯಾನ್ಸರ್‌ ಮಾಡಿಸಿದ ಗೆಳೆತನ

ಕಳೆದ ವರ್ಷ ಅಮೆರಿಕದ ಪ್ರಸಿದ್ಧ ಮೆಮೋರಿಯಲ… ಸ್ಲೌನ್‌ ಕೆಟ್ಟರಿಂಗ್‌ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಇಬ್ಬರು ಪ್ರಸಿದ್ಧ ಭಾರತೀಯರು ಅಕ್ಕಪಕ್ಕದ ಸೂಟ್‌ನಲ್ಲಿ ಇದ್ದು ಜನುಮದ ಗೆಳೆಯರಾಗಿದ್ದರು. ಮನೆಯಿಂದ ತಂದ ಊಟ ಜೊತೆಗೇ ಮಾಡುವುದು, ಹರಟೆ, ಹಾಡು, ಕೀಮೋ, ನೋವಿಗೆ ಸಾಂತ್ವನ ಹೀಗೆ ಒಟ್ಟಿಗೆ ದಿನ ಕಳೆಯುತ್ತಿದ್ದರು ಈ ಇಬ್ಬರು ಪ್ರಭಾವಿಗಳು.

ಒಬ್ಬರ ಹೆಸರು ಅರುಣ್‌ ಜೇಟ್ಲಿ, ಇನ್ನೊಬ್ಬರು ರಿಷಿ ಕಪೂರ್‌. ಜೇಟ್ಲಿ ಸಾರ್ಕೊಮಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೆ, ರಿಷಿ ಕಪೂರ್‌ ಲ್ಯೂಕೆಮಿಯಾದಿಂದ ಬಳಲುತ್ತಿದ್ದರು. ಜೇಟ್ಲಿಗೆ ಸ್ನಾನ ಮಾಡುವಾಗ ಚರ್ಮ ಸುಕ್ಕುಗಟ್ಟಿಆಸ್ಪತ್ರೆಗೆ ಹೋದಾಗ ಕ್ಯಾನ್ಸರ್‌ ಎಂದು ಗೊತ್ತಾಗಿದ್ದರೆ, ರಿಷಿ ಕಪೂರ್‌ ದಿಲ್ಲಿಯಲ್ಲಿ ಶೂಟಿಂಗ್‌ ಮಾಡುತ್ತಿದ್ದಾಗ ಆಯಾಸವಾಗಿ ಕ್ಯಾನ್ಸರ್‌ ಇದೆಯೆಂದು ಗೊತ್ತಾಗಿತ್ತು.

'ಆತ್ಮ ನಿರ್ಭರತೆ'ಗೆ ಮೋದಿ ಕರೆ: ಲಾಭದಾಯಕವಾಗುತ್ತಾ ಕೃಷಿ ಕ್ಷೇತ್ರ?

ಇಬ್ಬರೂ ಕ್ಯಾನ್ಸರ್‌ ವಿರುದ್ಧ ಗೆದ್ದೆವು ಎಂದುಕೊಂಡು ಭಾರತಕ್ಕೆ ಬಂದರು. ಒಂದು ವರ್ಷದ ಅಂತರದಲ್ಲಿ ತೀರಿಕೊಂಡರು. ಅಂದ ಹಾಗೆ, ಅನಂತ ಕುಮಾರ್‌ ಕೂಡ ಶ್ವಾಸಕೋಶದ ಕ್ಯಾನ್ಸರ್‌ಗೆ ಚಿಕಿತ್ಸೆ ತೆಗೆದುಕೊಳ್ಳಲು ಹೋಗಿದ್ದು ಇದೇ ಆಸ್ಪತ್ರೆಗೆ. ಮನೋಹರ ಪರ್ರಿಕರ್‌ ಕೂಡ ಚಿಕಿತ್ಸೆ ಮಾಡಿಸಿದ್ದು ಇಲ್ಲಿಯೇ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್‌, ದೆಹಲಿಯಿಂದ ಕಂಡ ರಾಜಕಾರಣ