ಮಮತಾ ದೀದಿ ಅವಕಾಶ ಸಿಕ್ಕಾಗೆಲ್ಲಾ ಮೋದಿ ಜೊತೆ ಜಗಳಕ್ಕೆ ಇಳಿಯುತ್ತಿರೋದರ ಗುಟ್ಟೇನು?
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವಕಾಶ ಸಿಕ್ಕಾಗಲೆಲ್ಲಾ ಪ್ರಧಾನಿ ಮೋದಿ ಜೊತೆ ವಾಕ್ಸಮರಕ್ಕೆ ಇಳಿಯುತ್ತಾರೆ. ಮೋದಿಯನ್ನು ವಿರೋಧಿಸಿದರೆ ಮಾತ್ರ 30 ಪ್ರತಿಶತ ಮುಸ್ಲಿಮರು ಗಟ್ಟಿಯಾಗಿ ತಮ್ಮ ಪರ ನಿಲ್ಲುತ್ತಾರೆ ಎಂಬುದು ಅವರ ಅಭಿಪ್ರಾಯ.
ನವದೆಹಲಿ (ಮೇ. 15): ಕೊರೋನಾ ಯುದ್ಧ ಸಮಯದಲ್ಲಿ ಬಿಹಾರದ ಚುನಾವಣೆ ಇದ್ದರೆ, ಯುದ್ಧ ಬಹುತೇಕ ಮುಗಿದ ನಂತರ ನಡೆಯುವ ಮೊದಲ ಚುನಾವಣೆ 2021ರಲ್ಲಿ ಪಶ್ಚಿಮ ಬಂಗಾಳದ ಮಮತಾ ದೀದಿಯದ್ದು. ಹೀಗಾಗಿ ಕೊರೋನಾ ಬಗ್ಗೆ ಮೋದಿ ಜೊತೆ ಕಾದಾಟದಲ್ಲಿ ಮಾತ್ರ ಕಾಣಿಸಿಕೊಳ್ಳುವ ದೀದಿ ಉಳಿದಂತೆ ಕೊರೋನಾ ಜೊತೆಗಿನ ಸೆಣಸಾಟವನ್ನು ಮಂತ್ರಿ ಪಾರ್ಥ ಚಟರ್ಜಿಗೆ ವಹಿಸಿದ್ದಾರೆ.
ಕೇಜ್ರಿವಾಲ್‌ರಂಥವರೇ ಕೊರೋನಾ ಕಾಲದಲ್ಲಿ ಮೋದಿ ವಿರುದ್ಧದ ಯುದ್ಧ ಸದ್ಯಕ್ಕೆ ಬೇಡ ಎನ್ನುತ್ತಿರುವಾಗ, ಮಮತಾ ಮಾತ್ರ ಅವಕಾಶ ಸಿಕ್ಕರೆ ಸಾಕು ಜಗಳಕ್ಕೆ ಇಳಿಯುತ್ತಾರೆ. ದೀದಿಗೆ ಗೊತ್ತಿದೆ ಮೋದಿಯನ್ನು ವಿರೋಧಿಸಿದರೆ ಮಾತ್ರ 30 ಪ್ರತಿಶತ ಮುಸ್ಲಿಮರು ಗಟ್ಟಿಯಾಗಿ ತಮ್ಮ ಪರ ನಿಲ್ಲುತ್ತಾರೆ ಎಂದು.
'ಆತ್ಮ ನಿರ್ಭರತೆ'ಗೆ ಮೋದಿ ಕರೆ: ಲಾಭದಾಯಕವಾಗುತ್ತಾ ಕೃಷಿ ಕ್ಷೇತ್ರ?
ಮಮತಾ ತಮ್ಮ ಚುನಾವಣಾ ರಣತಂತ್ರಕ್ಕೆ ಪ್ರಶಾಂತ್ ಕಿಶೋರ್ ಅವರನ್ನು ನೇಮಿಸಿಕೊಂಡಿದ್ದಾರೆ. ರಾಜಕಾರಣಿಗಳ ಸಿಟ್ಟು, ಸೇಡವು, ಪ್ರೀತಿ, ದ್ವೇಷ, ಉಪಕಾರ, ಮಮಕಾರ ಎಲ್ಲವೂ ದೊಡ್ಡ ನಾಟಕದ ವೈವಿಧ್ಯಮಯ ರಸಗಳು ಅಷ್ಟೆ. ಅಂದಹಾಗೆ, ಬೆವರು ಸುರಿಸಿ, ಬೀದಿ ಕಾಳಗ ಮಾಡಿ ಮೇಲೆ ಬಂದ ಮಮತಾ ಈಗ ತಮ್ಮನ ಮಗ ಅಭಿಷೇಕ್ ಬ್ಯಾನರ್ಜಿಯನ್ನು ಉತ್ತರಾಧಿಕಾರಿಯಂತೆ ಬಿಂಬಿಸುತ್ತಿದ್ದಾರೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ