ನವದೆಹಲಿ(ಮಾ.10): ಕೊರೋನಾ ವಿರುದ್ಧ ಹೋರಾಡಲು ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಕಂಪನಿ ಕೇಂದ್ರ ಸರ್ಕಾರದ ಜತೆಗೂಡಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ ಲಸಿಕೆ ಸುರಕ್ಷಿತ ಎಂದು ಪ್ರಸಿದ್ಧ ವೈಜ್ಞಾನಿಕ ನಿಯತಕಾಲಿಕೆ ‘ದ ಲ್ಯಾನ್ಸೆಟ್‌’ ಹೇಳಿದೆ.

ಕೋವ್ಯಾಕ್ಸಿನ್‌ ಸುರಕ್ಷಿತವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಸೃಷ್ಟಿಸುತ್ತದೆ. ಯಾವುದೇ ಗಂಭೀರ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ ಎಂದು ಲ್ಯಾನ್ಸೆಟ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ತಿಳಿಸಿದೆ.

ಕೋವ್ಯಾಕ್ಸಿನ್‌ನ 2ನೇ ಹಂತದ ಕ್ಲಿನಿಕಲ್‌ ಟ್ರಯಲ್‌ ಫಲಿತಾಂಶಗಳಿಂದ ಅದರ ಕ್ಷಮತೆಯನ್ನು ಅಳೆಯಲು ಆಗುವುದಿಲ್ಲ. 3ನೇ ಹಂತದ ಸುರಕ್ಷತಾ ಫಲಿತಾಂಶಗಳ ಅಗತ್ಯವಿದೆ. ಆದರೆ ಹಂತ 1ರ ಪ್ರಯೋಗಕ್ಕೆ ಹೋಲಿಸಿದರೆ ಎರಡನೇ ಹಂತದಲ್ಲಿ ಲಸಿಕೆ ರೋಗ ನಿರೋಧಕ ಶಕ್ತಿ ಸೃಷ್ಟಿಗೆ ಪ್ರತಿಕ್ರಿಯೆ ತೋರಿದ್ದು ಸುರಕ್ಷಿತವಾಗಿದೆ ಎಂದು ತಿಳಿಸಿದೆ.

ಇದೊಂದು ಶುಭ ಸುದ್ದಿಯಾಗಿದೆ ಎಂದು ಅಮೆರಿಕದ ಮೇರಿಲ್ಯಾಂಡ್‌ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಫಾಹೀಮ್‌ ಯೂನುಸ್‌ ತಿಳಿಸಿದ್ದಾರೆ.