ಆತ್ಮಹತ್ಯೆ ಪ್ರಯತ್ನ ಮಾಡಿ ಜೈಲು ಸೇರಿದ್ದ ವ್ಯಕ್ತಿ 5 ವರ್ಷದ ಬಳಿಕ ಖುಲಾಸೆ!
ಪ್ರೇಮವೈಫಲ್ಯದಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ
ಹುಡುಗಿಯ ಮನೆ ಬಾಗಿಲಲ್ಲೇ ಹೊಟ್ಟೆಗೆ ಚಾಕು ಚುಚ್ಚಿಕೊಂಡಿದ್ದ
5 ವರ್ಷದ ದೀರ್ಘ ಜೈಲುವಾಸದ ಬಳಿಕ ಖುಲಾಸೆ
ಮುಂಬೈ (ಫೆ.27): ಪ್ರೇಮ ವೈಫಲ್ಯದಿಂದ (Love Failure) ಪ್ರೀತಿಸಿದ ಹುಡುಗಿಯ ಮನೆ ಮುಂದೆ ಹೊಟ್ಟೆಗೆ ಚಾಕು ಚುಚ್ಚಿಕೊಂಡಿದ್ದಲ್ಲದೆ, ವಿಷವನ್ನೂ ಕುಡಿದಿದ್ದ. ಆದರೆ, ಆತನ ಜೀವ ಗಟ್ಟಿಯಾಗಿತ್ತು, ಬದುಕುಳಿದಿದ್ದ. ಆದರೆ, ಆತನ ವಿರುದ್ಧ ದಾಖಲಾಗಿದ್ದ ಆತ್ಮಹತ್ಯೆ ಯತ್ನ (Attempting Suicide) ಪ್ರಕರಣದಲ್ಲಿ ಬರೋಬ್ಬರಿ 5 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದ. ದೀರ್ಘ ವಿಚಾರಣೆಯ ಬಳಿಕ ಕೋರ್ಟ್ ಆತನ ಮೇಲಿನ ಆರೋಪಗಳನ್ನು ಸಾಬೀತುಮಾಡಲು ಸಾಕ್ಷಿಗಳಿಲ್ಲದ ಕಾರಣ ಅವನ್ನು ಖುಲಾಸೆ (Aquitte) ಮಾಡಿದೆ.
ಇಂಥದ್ದೊಂದು ಪ್ರಕರಣವಾಗಿರುವುದು ಮುಂಬೈನಲ್ಲಿ. 2017ರಲ್ಲಿ ಯುವತಿಯ ನಿರಾಕರಣೆಯಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ (Mumbai Magistrate Court ) ಎಲ್ಲಾ ಆರೋಪಗಳಿಂದ ಖುಲಾಸೆ ಮಾಡಿದೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 309 ರ ಅಡಿಯಲ್ಲಿ ವ್ಯಕ್ತಿಯನ್ನು ಬಂಧನ ಮಾಡಲಾಗಿತ್ತು. ಇದರ ಅನ್ವಯ "ಆತ್ಮಹತ್ಯೆಗೆ ಪ್ರಯತ್ನಿಸುವ ಮತ್ತು ಅಂತಹ ಅಪರಾಧದ ಕಾರ್ಯವನ್ನು ಮಾಡಿದರೆ, ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಅವಧಿಗೆ ಸರಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ' ಎಂದು ಹೇಳಲಾಗುತ್ತದೆ. ಆದರೆ, ಕೋರ್ಟ್ ನಲ್ಲಿ ವಿಚಾರಣೆ ದೀರ್ಘ ಕಾಲದವರೆಗೂ ವಿಸ್ತರಣೆ ಆಗಿದ್ದರಿಂದ ಹೆಚ್ಚೆಂದರೆ 1 ವರ್ಷದ ಕಾಲ ಶಿಕ್ಷೆ ಅನುಭವಿಸಬೇಕಿದ್ದ ವ್ಯಕ್ತಿ ಬರೋಬ್ಬರಿ 5 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾನೆ.
''ಆರೋಪಿಯು ತನ್ನ ಹೊಟ್ಟೆಗೆ ಚಾಕುವಿನಿಂದ ಇರಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ ಅಥವಾ ವಿಷ ಪದಾರ್ಥವನ್ನು ಸೇವಿಸಿದ ಸಾಕ್ಷ್ಯವು ದಾಖಲೆಯಲ್ಲಿ ಇಲ್ಲ. ಪ್ರೇಮ ಸಂಬಂಧ ಮುರಿದುಬಿದ್ದ ಕಾರಣ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬುದನ್ನು ನಿರೂಪಿಸಲು ಕೇವಲ ಸಂದರ್ಭಗಳು ಸಾಕಾಗುವುದಿಲ್ಲ. ಆರೋಪಿಯು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ವಕೀಲರು ಸಾಕ್ಷಿ ಸಮೇತ ನಿರೂಪಿಸಬೇಕು. ಆದರೆ, ವಕೀಲರು ತಂದಿರುವ ಎಲ್ಲಾ ಸಾಕ್ಷಿಗಳು, ವ್ಯಕ್ತಿಯು ವಿಷ ಸೇವಿಸುವುದನ್ನಾಗಲಿ, ಚಾಕುವಿನಿಂದ ಇರಿದುಕೊಂಡಿರುವುದನ್ನು ಕಣ್ಣಾರೆ ನೋಡಿಲ್ಲ ಎಂದು ಹೇಳಿದ್ದಾರೆ. ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸಾಬೀತುಮಾಡಲು ಸ್ಪಷ್ಟವಾದ ಸಾಕ್ಷ್ಯಾಧಾರಗಳ ಕೊರತೆ ಇದೆ ಹಾಗಾಗಿ ಈ ಪ್ರಕರಣದಲ್ಲಿ ಆರೋಪಿಯನ್ನು ತಪ್ಪಿತಸ್ಥ ಎಂದು ಹೇಳಲು ಆಗುವುದಿಲ್ಲ' ಎಂದು ನ್ಯಾಯಾಧೀಶ ಕೆ.ಎಚ್.ತೋಂಬ್ರೆ ಹೇಳಿದ್ದಾರೆ.
ತಾನು ಕಣ್ಣು ಹಾಕಿದ್ದ ಮಹಿಳೆ ಮನೆಗೆ ಬೇರೊಬ್ಬ ಎಂಟ್ರಿ, ಬಳಿಕ ನಡೆದಿದ್ದು ದುರಂತ
ಏನಿದು ಪ್ರಕರಣ: ಮೇ 13, 2017 ರಂದು ಮುಂಬೈನ ಖಾರ್ ಪ್ರದೇಶದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬ ಮಹಿಳೆಯ ಮನೆಯ ಮುಂದೆ ಚಾಕುವಿನಿಂದ ಇರಿದುಕೊಂಡಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು. ಯುವತಿಯ ಮನೆಗೆ ಆಗಮಿಸಿದ್ದ ಪೊಲೀಸರು ವ್ಯಕ್ತಿಯನ್ನು ಭಾಭಾ ಅಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ವೈದ್ಯರು ಆತ ವಿಷವನ್ನೂ ಸೇವಿಸಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದರು. ಮೇ 12 ರಂದು ಯುವಕನೊಬ್ಬ ತನಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಯುವತಿಯು ಪೊಲೀಸರಿಗೆ ದೂರು ನೀಡಿದ್ದರು. ಅದರ ಮರು ದಿನವೇ ಯುವಕ, ಯುವತಿಯ ಮನೆಬಾಗಿಲಲ್ಲಿ ಆತ್ಮಹತ್ಯೆಗೆ ಯತ್ನ ನಡೆಸಿದ್ದ. 2011 ರಿಂದ 2016 ರ ನಡುವೆ ಯುವಕ, ಈ ಯುವತಿಯೊಂದಿಗೆ ಕಾಲೇಜಿನಲ್ಲಿ ಸಂಬಂಧ ಹೊಂದಿದ್ದ ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಆರೋಪಿಯು ತನ್ನ ಮನೆಗೆ ಬಂದು ಬಾಗಿಲು ಬಡಿದು ಗಲಾಟೆ ಎಬ್ಬಿಸಿದ್ದಾನೆ ಎಂದು ಯುವತಿ ನ್ಯಾಯಾಲಯದಲ್ಲಿ ಹೇಳಿದ್ದಳು ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾಗಿಯೂ ತಿಳಿಸಿದ್ದರು.
Illicit Relationship: ಕುಡುಗೋಲಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ ಮಾಡಿದ ಗಂಡ
ಮೇ 13 ರಂದು ಮತ್ತೊಮ್ಮೆ ಯುವತಿಯ ಮನೆಗೆ ಹೋಗಿ ಅದೇ ರೀತಿ ವರ್ತಿಸಿದ್ದಾನೆ. ಈ ವೇಳೆ ಆಕೆಯ ತಾಯಿ ಬಾಗಿಲು ತೆರೆದಿದ್ದರು. ಆಗ ಮನೆಯ ಬಾಗಿಲಲ್ಲೇ ಯುವಕ ಬಿದ್ದಿದ್ದ, ಆತನ ಹೊಟ್ಟೆಯಿಂದ ರಕ್ತ ಸೋರುತ್ತಿತ್ತು. ಆದರೆ, ಆತ ಹೇಗೆ ಗಾಯಗೊಂಡಿದ್ದಾನೆ ಎನ್ನುವುದು ಗೊತ್ತಾಗಿರಲಿಲ್ಲ. ಇವೆಲ್ಲದರ ಮೇಲೆ ಯುವಕನ ತನ್ನ ಮೇಲಿದ್ದ ಆತ್ಮಹತ್ಯೆಗೆ ಯತ್ನ ಆರೋಪದಿಂದ ಖುಲಾಸೆಗೊಂಡಿದ್ದಾನೆ.