ನವದೆಹಲಿ(ಅ.11): ದೇಶದಲ್ಲಿ ಕೊರೋನಾ ವೈರಸ್‌ ಮೊದಲ ಅಲೆ ತಗ್ಗಿದೆ ಎಂಬ ವಿಶ್ಲೇಷಣೆಗಳಿಗೆ ಪೂರಕವಾಗಿ ಸತತ ಏಳು ದಿನಗಳಿಂದ ಹೊಸ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಕೊರೋನಾ ವೈರಸ್‌ ಆರಂಭವಾದಾಗಿನಿಂದಲೂ ಸತತವಾಗಿ ಗುಣಮುಖರಾದವರ ಸಂಖ್ಯೆಯೇ ಹೆಚ್ಚು ದಾಖಲಾಗುತ್ತಿರುವುದು ಇದೇ ಮೊದಲು. ಅಲ್ಲದೇ ಕಳೆದ 22 ದಿನಗಳಲ್ಲಿ 17 ದಿನ ಹೊಸ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚು ದಾಖಲಾಗಿರುವುದು ಗಮನಾರ್ಹ.

ಭಾರೀ ಸಂಖ್ಯೆಯಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗುತ್ತಿದ್ದ ಮಹಾರಾಷ್ಟ್ರದಲ್ಲಿ ಸೋಂಕಿನ ಪ್ರಮಾಣ ಕಳೆದ 20 ದಿನಗಳಿಂದ ಇಳಿಕೆ ಕಾಣುತ್ತಿರುವುದು ಈ ಬೆಳವಣಿಗೆಗೆ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದೇ ರೀತಿ ಎರಡನೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದ ಆಂಧ್ರ ಪ್ರದೇಶದಲ್ಲೂ ಸೋಂಕಿನ ಪ್ರಮಾಣ ಕ್ರಮೇಣ ತಗ್ಗುತ್ತಿದೆ