ತ್ರಿಶ್ಶೂರ್‌[ಫೆ,06]: ವರನಿಲ್ಲದೇ ವಿವಾಹ ಆರತಕ್ಷತೆ ಹೇಗೆ ತಾನೆ ನಡೆಯಲು ಸಾಧ್ಯ? ಆದರೆ, ಕೇರಳದ ತ್ರಿಶ್ಶೂರ್‌ನಲ್ಲಿ ಇಂಥದ್ದೊಂದು ವಿಚಿತ್ರ ರಿಸೆಪ್ಷನ್‌ವೊಂದು ನಡೆದಿದೆ. ಇದಕ್ಕೆ ಕಾರಣ ಕೊರೋನಾ ವೈರಸ್‌.

ಮದುಮಗ ಇತ್ತೀಚೆಗಷ್ಟೇ ಕೊರೋನಾ ವೈರಸ್‌ನಿಂದ ಬಾಧಿತವಾಗಿರುವ ಚೀನಾದಿಂದ ಮರಳಿದ್ದ. ವೈರಾಣು ತಗುಲಿರುವ ಶಂಕೆಯ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಯ ಪ್ರತ್ಯೇಕ ಕೋಣೆಯಲ್ಲಿ ಇಟ್ಟು ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. 14 ದಿನಗಳ ನಿರೀಕ್ಷಣಾ ಅವಧಿ ಮುಕ್ತಾಯ ಆಗುವವರೆಗೂ ವರ ಆಸ್ಪತ್ರೆಯಲ್ಲೇ ಇರಬೇಕಿದೆ. ಕೊರೋನಾ ವೈರಸ್‌ ಶಂಕಿತ ವ್ಯಕ್ತಿ 28 ದಿನಗಳ ಕಾಲ ಯಾವುದೇ ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವಂತೆ ಇಲ್ಲ.

ಚೀನಾದಿಂದ ಬಂದ ತುಮಕೂರು ವಿದ್ಯಾರ್ಥಿಗಿಲ್ಲ ಕೊರೋನಾ ವೈರಸ್!

ಹೀಗಾಗಿ ಫೆ.4ರಂದು ನಡೆಯಬೇಕಿದ್ದ ವಿವಾಹ ಕಾರ್ಯಕ್ರಮ ಮುಂದೂಡಿಕೆ ಆಗಿದೆ. ಆದರೆ, ತ್ರಿಶ್ಶೂರ್‌ನ ಎರುಂಪೆಟ್ಟಿಯಲ್ಲಿ ನಿಗದಿ ಆಗಿದ್ದ ರಿಸೆಪ್ಷನ್‌ಗೆ ಹೆಣ್ಣಿನ ಕುಟುಂಬದವರು ಸಂಬಂಧಿಕರನ್ನು ಆಹ್ವಾನಿಸಿದ್ದರಿಂದ ಪೂರ್ವ ನಿಗದಿಯಂತೆ ಕಾರ್ಯಕ್ರಮ ನೆರವೇರಿಸುವ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ ವರದಿನಿಲ್ಲದೇ ಆರತಕ್ಷತೆ ನೆರವೇರಿದೆ.