ಚೀನಾದಿಂದ ಬಂದ ತುಮಕೂರು ವಿದ್ಯಾರ್ಥಿಗಿಲ್ಲ ಕೊರೋನಾ ವೈರಸ್!
ವರದಿಯಿಂದ ನಿಟ್ಟುಸಿರು ಬಿಟ್ಟಜಿಲ್ಲಾಸ್ಪತ್ರೆ ವೈದ್ಯರು| ಜಿಲ್ಲೆಯಲ್ಲಿ ಯಾವುದೇ ಕೊರೋನ ವೈರಸ್ ಪತ್ತೆಯಾಗಿಲ್ಲ ಎಂದ ಡಿಎಚ್‌ಒ ಚಂದ್ರಿಕಾ| ಜಿಲ್ಲೆಯ ಜನತೆ ಆತಂಕ ಪಡದಂತೆ ಮನವಿ| ವಿದ್ಯಾರ್ಥಿಗೆ ಮನೆಯಲ್ಲೆ ಪ್ರತ್ಯೇಕ ಕೊಠಡಿಯಲ್ಲಿ ನಿಗಾದಲ್ಲಿರಿಸಿದ ವೈದ್ಯರು| 10 ದಿನಗಳ ಹಿಂದೆ ತುಮಕೂರಿಗೆ ಬಂದಿದ್ದ ಯುವಕ
ತುಮಕೂರು[ಫೆ.06]: ಚೀನಾದಿಂದ ಕಳೆದ 10 ದಿವಸಗಳ ಹಿಂದೆ ತುಮಕೂರಿಗೆ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿಯಲ್ಲಿ ಕæೂರೋನಾ ವೈರಸ್ ಇಲ್ಲ ಎಂದು ರಕ್ತ ಪರೀಕ್ಷೆಯಿಂದ ದೃಢಪಟ್ಟಿದೆ. ತುಮಕೂರಿನ ಹನುಮಂತಪುರದಲ್ಲಿದ್ದ ಈತ ಚೀನಾದಿಂದ ಬಂದಾಗಿನಿಂದ ವಿಪರೀತ ಕೆಮ್ಮಿನಿಂದ ಬಳಲುತ್ತಿದ್ದ. ಕೂಡಲೇ ಆತನನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ಪರೀಕ್ಷೆಗೆ ಕರೆ ತರಲಾಯಿತು. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಈ ವಿದ್ಯಾರ್ಥಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ವಿದ್ಯಾರ್ಥಿಯ ಕಫ, ರಕ್ತ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಿದ್ದರು.
ವಿದ್ಯಾರ್ಥಿಗೆ ಮನೆಯಲ್ಲಿ ಪ್ರತ್ಯೇಕ ಕೊಠಡಿ:
ಶಂಕಿತ ಕೊರೋನಾ ವೈರಸ್ ಸೋಂಕು ಇರಬಹುದೆಂದು ವೈದ್ಯರು ವಿದ್ಯಾರ್ಥಿಗೆ ಮನೆಯಲ್ಲೇ ಪ್ರತ್ಯೇಕ ಕೊಠಡಿಯಲ್ಲಿ ಇರಿಸಬೇಕೆಂದು ಸೂಚಿಸಿದ್ದರು. ಅಲ್ಲದೇ ವಿದ್ಯಾರ್ಥಿ ಮೇಲೆ ತೀವ್ರ ನಿಗಾವನ್ನು ವಹಿಸಿದ್ದರು. ಬುಧವಾರ ಸಂಜೆ ರಕ್ತಪರೀಕ್ಷೆಯ ವರದಿ ಬಂದಿದ್ದು, ಆತನಲ್ಲಿ ಕೊರೋನ ವೈರಸ್ ಇಲ್ಲ ಎಂದು ದೃಢಪಟ್ಟಿದೆ. ಹೀಗಾಗಿ ಆತಂಕ ದೂರವಾಗಿದೆ. ಈತ ಚೀನಾದ ಹ್ಯಾಂಗ್ಜೋ ನಗರದಲ್ಲಿ ವಾಸವಿದ್ದರು. ಕಳೆದ 10 ದಿವಸದ ಹಿಂದೆಯಷ್ಟೆತುಮಕೂರಿಗೆ ವಾಪಾಸಾಗಿದ್ದನ್ನು ಸ್ಮರಿಸಬಹುದು.
ಯಾವುದೇ ಪ್ರಕರಣ ಜಿಲ್ಲೆಯಲ್ಲಿ ದೃಢಪಟ್ಟಿಲ್ಲ:
ಈ ಮಧ್ಯೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೂ ಯಾವುದೇ ನೋವಲ್ ಕರೋನಾ ವೈರಸ್ ಪ್ರಕರಣಗಳು ಧೃಢಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಚೀನಾ ದೇಶದಿಂದ ಬಂದಿದ್ದ ಯುವಕನಿಗೆ ಗಂಟಲು ದ್ರಾವ ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‌ಐವಿ)ಗೆ ಕಳುಹಿಸಲಾಗಿದ್ದು, ಸದರಿ ರಕ್ತದ ಮಾದರಿಯ ಫಲಿತಾಂಶದಲ್ಲಿ ಕರೋನಾ ವೈರಸ್ ಕಂಡುಬಂದಿರುವುದಿಲ್ಲ ಎಂದು ಬೆಂಗಳೂರಿನ ಎನ್‌ಐವಿ ಧೃಢಪಡಿಸಿದೆ. ಈ ಯುವಕನು ಜಿಲ್ಲಾ ಆಸ್ಪತ್ರೆಯಲ್ಲಾಗಲೀ ಖಾಸಗಿ ಆಸ್ಪತ್ರೆಗಳಲ್ಲಾಗಲೀ ದಾಖಾಲಾಗಿರುವುದಿಲ್ಲ ಎಂದು ಹೇಳಿದರು.
ಆತಂಕಪಡುವ ಅಗತ್ಯವಿಲ್ಲ:
ಜಿಲ್ಲೆಯಲ್ಲಿ ಬೇರೆ ಯಾವುದೇ ಹೊಸ ಶಂಕಿತ ಕೊರೋನಾ ವೈರಸ್ ರೋಗಿಗಳು ಇರುವುದಿಲ್ಲ ಹಾಗೂ ಯಾವುದೇ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿರುವುದಿಲ್ಲ. ಸಾರ್ವಜನಿಕರು ಅನಾವಶ್ಯಕವಾಗಿ ಭಯ ಪಡುವ ಹಾಗೂ ಊಹಾಪೋಹಗಳಿಗೆ ಆತಂಕಪಡುವ ಅಗತ್ಯವಿಲ್ಲ ಎಂದು ಡಿಎಚ್‌ಒ ಚಂದ್ರಿಕಾ ಮನವಿ ಮಾಡಿದ್ದಾರೆ.
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ 5 ಕೊಠಡಿಗಳ ಹಾಸಿಗೆಗಳು ಹಾಗೂ 1 ವೆಂಟಿಲೇಟರ್ ಅನ್ನು ಮೀಸಲಿಟ್ಟು ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಲಾಗಿದೆ. ಜನ ಸಾಮಾನ್ಯರಿಗೆ ಮುಂಜಾಗೃತ ಕ್ರಮವಾಗಿ ತೆಗೆದು ಕೊಳ್ಳಬೇಕಾದ ಕ್ರಮಗಳ ಬಗ್ಗೆ ಐಇಸಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.